ದೇಶದಲ್ಲಿ ಕೊವಿಡ್ ಪರಿಸ್ಥಿತಿ ಇದ್ದರೂ ಕಾರ್ಪೋರೇಟ್ ಕುಳಗಳ ಆಸ್ತಿ ಮತ್ತು ಲಾಭಾಂಶ ಹೆಚ್ಚುತ್ತಲೇ ಹೋಗುತ್ತಿದೆ. ಬಡವರ ಹೆಸರು ಹೇಳಿ ಕಾರ್ಪೋರೇಟ್ ಗಳಿಗೆ ಅನುಕೂಲ ಮಾಡಿಕೊಡುವುದೇ ಈ ಬಜೆಟ್ ಉದ್ದೇಶವಾಗಿದೆ ಎಂದು ಪರಿಸರವಾದಿ ಸಿ.ಯತಿರಾಜು ಆರೋಪಿಸಿದರು.
ಕಾರ್ಪೋರೇಟ್ ಕುಳಗಳ ಮೇಲೆ ಹಾಕುತ್ತಿದ್ದ ತೆರಿಗೆಯನ್ನು ಕಡಿತ ಮಾಡಲಾಗಿದೆ. 2014 ರಿಂದ ಇದುವರೆಗೂ ಮಂಡಿಸಿದ ಬಜೆಟ್ ಗಳು ಬಂಡವಾಳಿಗರಿಗೆ ಮತ್ತು ಶ್ರೀಮಂತರಿಗೆ ಅನುಕೂಲ ಮಾಡಿಕೊಡುವುದರಲ್ಲೇ ಕೇಂದ್ರ ಸರ್ಕಾರ ಸಾರ್ಥಕ್ಯ ಕಂಡುಕೊಳ್ಳುತ್ತಿದೆ ಎಂದು ಟೀಕಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ನೀಡುತ್ತಿದ್ದ ಎಲ್ಲಾ ರಿಯಾಯಿತಿಗಳನ್ನು ರದ್ದುಗೊಳಿಸಿ ಗ್ರಾಮೀಣ ಭಾಗದ ರೈತರು ಸೇರಿ ಎಲ್ಲಾ ವರ್ಗದ ಜನರು ಉಸಿರಾಡಲು ಕೂಡ ಕಷ್ಟವಾಗುವಂತೆ ಮಾಡಿದೆ. ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದರೂ ಅದರಿಂದ ಯಾರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಸಾಮಾನ್ಯರ ಕಡೆಗಣನೆ:
ತಮಿಳುನಾಡಿಗೆ 11 ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಿದ್ದು ಕರ್ನಾಟಕಕ್ಕೆ ಯಾವುದೇ ಮೆಡಿಕಲ್ ಕಾಲೇಜುಗಳನ್ನು ನೀಡದಿರುವುದು ನಿರಾಸೆ ತಂದಿದೆ ಎಂದು ಜನ ಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್ ಹೇಳಿದ್ದಾರೆ.
ದಿ ನ್ಯೂಸ್.ಇನ್ ಜೊತೆ ಮಾತನಾಡಿದ ಅವರು, ಪೆಟ್ರೊಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು 2 ರೂಪಾಯಿ ಹೆಚ್ಚಿಸಿರುವುದರಿಂದ ಸಾಮಾನ್ಯರ ಮೇಲೆ ಮತ್ತೆ ಬರೆ ಎಳೆದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಉದ್ಯಮಪತಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಿದೆ. ಜನಸಾಮಾನ್ಯರಿಗೆ ಯಾವುದೇ ಪ್ರಯೋಜವಾಗಿಲ್ಲ ಎಂದಿದ್ದಾರೆ.
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಣ ಮೀಸಲಿಟ್ಟಿಲ್ಲ. ಹೊಸ ಮಾರ್ಗಗಳನ್ನು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ವರ್ತುಲ ರೈಲ್ವೆ ಹಣ ಮೀಸಲಿಟ್ಟಿಲ್ಲ. ಇದರಿಂದ ಜನರಿಗೆ ಮೋಸ ಬಗೆದಂತೆ ಆಗಿದೆ ಎಂದು ತಿಳಿಸಿದರು.
ಪ್ರಮುಖವಾಗಿ ಬಜೆಟ್ ನಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸಲಾಗಿದೆ. ಹೀಗಾಗಿ ಹಿರಿಯ ನಾಗರಿಕರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ ಎಂದು ಜವಾಹರ್ ಹೇಳಿದರು.
ಆನ್ ಲೈನ್ ಶಿಕ್ಷಣ – ವಿದ್ಯಾರ್ಥಿಗಳ ನಡುವೆ ಕಂದಕ ಹೆಚ್ಚಳ
ಕೇಂದ್ರದ ಬಜೆಟ್ ನಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವೆ ಅಗಾಧವಾದ ಕಂದಕ ಸೃಷ್ಟಿಯಾಗಲಿದೆ. ಬಡ ವಿದ್ಯಾರ್ಥಿಗಳು ಮೊಬೈಲ್ ಕೊಳ್ಳಲು ಕಷ್ಟಸಾಧ್ಯ. ಹಾಗಾಗಿ ಆನ್ ಲೈನ್ ಶಿಕ್ಷಣದಿಂದ ಅಸಮತೋಲನ ಹೆಚ್ಚುತ್ತದೆ. ಆನ್ ಲೈನ್ ಶಿಕ್ಷಣದಲ್ಲಿ ಇದುವರೆಗೆ 20 ವಿದ್ಯಾರ್ಥಿಗಳು ನೇರವಾಗಿ ಭಾಗಿಯಾಗಲು ಅವಕಾಶವಿತ್ತು. ಈಗ 40 ವಿದ್ಯಾರ್ಥಿಗಳು ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಬಹುದು ಎಂದು ವಿದ್ಯಾರ್ಥಿ ನಾಯಕ ಈ.ಶಿವಣ್ಣ ತಿಳಿಸಿದರು.
ಡಿಜಿಟಲ್ ಅಥವಾ ಆನ್ ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಿರುವುದರಿಂದ ಸಿಗ್ನಲ್ಲೇ ಸಿಗದ ಗ್ರಾಮೀಣ ಭಾಗದ ರೈತರ ಮಕ್ಕಳು ಆನ್ ಲೈನ್ ಶಿಕ್ಷಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ನಗರ ಪ್ರದೇಶದಲ್ಲೇ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ಹಾಗಾಗಿ ಗ್ರಾಮೀಣ ಮತ್ತು ನಗರದ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳು ಮತ್ತು ನಗರದ ಶ್ರೀಮಂತ ವಿದ್ಯಾರ್ಥಿಗಳು ನಡುವೆ ಆಳವಾದ ಕಂದಕ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.