ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್ ಪ್ರಧಾನಿ ಮೋದಿ ಸರ್ಕಾರದ ಭಾರತ ಕಂಡ ಅತ್ಯಂತ ಬಂಡವಾಳಶಾಹಿ ಬಜೆಟ್ ಎಂದು ಟೀಕಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಚಿದಂಬರಂ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಅಪೌಷ್ಟಿಕತೆ ಅಥವಾ ಅನುಭವಿ ಉದ್ಯೋಗಿಗಳ ಕೊರತೆಯಾಗಿದ್ದರೂ ಭಾರತೀಯ ಆರ್ಥಿಕತೆ ಇಂದು ಎದುರಿಸುತ್ತಿರುವ ಯಾವುದೇ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಬಜೆಟ್ ನಲ್ಲಿ ತಿಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಸಾಮಾನ್ಯ ಜನರಿಗೆ ಇರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿಲ್ಲ. ಸಮಸ್ಯೆಗಳನ್ನು ಅರಿಯುವ ಗೋಜಿಗೆ ಹೋಗದೆ ಕಾರ್ಯನಿರ್ವಹಿಸುತ್ತಿದೆ. ಇದು ಜನರಿಗೆ ಹೊರೆ ಮತ್ತು ನೋವುಗಳಿಗೆ ತಿರಸ್ಕಾರದ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.
ಭಾರತದ 99.9 ಪ್ರತಿಶತ ಜನರಿಗೆ ಬಜೆಟ್ ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಪ್ರಸ್ತುತ ಬಿಕ್ಕಟ್ಟನ್ನು ನಿರ್ಲಕ್ಷಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದರು. ಬಜೆಟ್ ಬಡವರನ್ನು ಅಪಹಾಸ್ಯ ಮಾಡಿದಂತಿದೆ ಎಂದು ಆರೋಪಿಸಿದರು.
ಹಣಕಾಸು ಸಚಿವೆ ಮುಂದಿನ 25 ವರ್ಷಗಳ ಯೋಜನೆ ಎಂದು ವಿವರ ನೀಡಿದ್ದಾರೆ. ಅದನ್ನು ಅಮೃತ್ ಕಾಲ್ ಎಂದು ಕರೆದರು. ವರ್ತಮಾನಕ್ಕೆ ಯಾವುದೇ ಗಮನ ಅಗತ್ಯವಿಲ್ಲ ಎದು ಸರ್ಕಾರ ನಂಬಿರುವಂತಿದೆ ಎಂದು ಟೀಕಿಸಿದರು.
ವರ್ತಮಾನದಲ್ಲಿ ವಾಸಿಸುವ ಜನರು ಅಮೃತ್ ಕಾಲ್ ಬೆಳಗುವವರೆಗೆ ತಾಳ್ಮೆಯಿಂದ ಕಾಯುವಂತೆ ಹೇಳಬಹುದು. ಇದು ಭಾರತದ ಜನರನ್ನು ವಿಶೇಷವಾಗಿ ಬಡವರು ಮತ್ತು ವಂಚಿತರನ್ನು ಅಪಹಾಸ್ಯ ಮಾಡುವುದಲ್ಲದೆ ಬೇರೇನೂ ಇಲ್ಲ ಎಂದು ಚಿದಂಬರಂ ಹೇಳಿದರು.
ಸಬ್ಸಿಡಿಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನ ಸರಿಯಲ್ಲ. ಶೇ.27ರಷ್ಟು ಕಡಿತಗೊಳಿಸಲಾಗಿದೆ. ಇದು ಬಜೆಟ್ ನಲ್ಲಿ ಅತ್ಯಂತ ಅಹಿತಕರ ಕಡಿತವಾಗಿದೆ. ಹಣಕಾಸು ಸಚಿವರು ಬಡವರನ್ನು ಮರೆತಿರಬಹುದು. ಆದರೆ ಬಡವರಿಗೆ ದೀರ್ಘ ನೆನಪುಗಳಿವೆ ಎಂದು ತಿಳಿಸಿದ್ದಾರೆ.
ಆಡಳಿತ ಪಕ್ಷವು ಲೋಕಸಭೆಯಲ್ಲಿ ಬಹುಮತವನ್ನು ಹೊಂದಿರುವ ಕಾರಣ ಸಂಸತ್ತು ಈ ಬಜೆಟ್ ಗೆ ಮತ ಹಾಕಬಹುದು. ಆದರೆ ಜನರು ಈ ಬಂಡವಾಳಶಾಹಿ ಬಜೆಟ್ ಅನ್ನು ತಿರಸ್ಕರಿಸುತ್ತಾರೆ ಎಂದು ಚಿದಂಬರಂ ಹೇಳಿದರು.