2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಬಿಜೆಪಿ ವಿರೋಧಿ ಎಲ್ಲಾ ರಂಗಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಕಾರ ಕೋರಿದ್ದಾರೆ.
ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮರು ಆಯ್ಕೆಯಾದ ಮಮತ ಬ್ಯಾನರ್ಜಿ ಪಕ್ಷವನ್ನು ದೇಶಾದ್ಯಂತ ವಿಸ್ತರಿಸಲು ಮಾರ್ಗಸೂಚಿ ಪ್ರಕಟಿಸಿದರು.
2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಹಾಗಾಗಿ ಪಕ್ಷ ಸಂಘಟನೆ ಬಲಪಡಿಸುವ ಜೊತೆಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಮೇಘಾಲಯ ಮತ್ತು ಚಂಡೀಗಢದಲ್ಲಿ ಬಿಜೆಪಿ ಪರವಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಹೋರಾಡುತ್ತಿರುವುದನ್ನು ನೋಡಿದರೆ ನನಗೆ ಬೇಸರವಾಗುತ್ತದೆ. ಹೀಗಾಗಿ ಎಲ್ಲಾ ಬಿಜೆಪಿ ವಿರೋಧಿ ರಂಗಗಳು ಒಗ್ಗೂಡಬೇಕು. ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂದು ಮನವಿ ಮಾಡಿದರು.
ಉತ್ತರ ಪ್ರದೇಶದಿಂದ ಕಾಂಗ್ರೆಸ್ ಮತ್ತು ಗುಜರಾತ್ ನಿಂದ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದಂತೆಯೇ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಿಂದ ರಾಷ್ಟ್ರೀಐ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬ್ಯಾನರ್ಜಿ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.