Thursday, September 19, 2024
Google search engine
Homeಮುಖಪುಟದಸಂಸ ವನ್ನು ವ್ಯಕ್ತಿ ಹಾಗು ಪ್ರದೇಶ ಕೇಂದ್ರಿತವಾಗಿಸುವ ಚಳವಳಿ ಹೆಜ್ಜೆಗಳು -ಗುರುಪ್ರಸಾದ್ ಕಂಟಲಗೆರೆ

ದಸಂಸ ವನ್ನು ವ್ಯಕ್ತಿ ಹಾಗು ಪ್ರದೇಶ ಕೇಂದ್ರಿತವಾಗಿಸುವ ಚಳವಳಿ ಹೆಜ್ಜೆಗಳು -ಗುರುಪ್ರಸಾದ್ ಕಂಟಲಗೆರೆ

ಇಲ್ಲಿ ಯಾವ ತತ್ ಕ್ಷಣದ ಕಾರಣಗಳಿಲ್ಲದೆ ಅವಮಾನದ, ಅಸ್ಪೃಶ್ಯತೆ ನೋವುಂಡವರ ನಿಜ ನೆಲೆಯಿಂದ ಶುರುವಾದ ಹೋರಾಟದ ಚಹರೆಗಳು ಕಾಣಿಸುತ್ತದೆ.ಹೀಗೆ ಹುಡುಕುತ್ತಾ ಹೊರಟರೆ ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ,ಚಿತ್ರದುರ್ಗ, ಬಳ್ಳಾರಿ, ಕೋಲಾರ ಸೀಮೆಯ ದಲಿತ ಹೋರಾಟ ಚರಿತ್ರೆಯ ಆರಂಭಿಕ ಹೆಜ್ಜೆಗಳು ಇನ್ನೊಂದು ಬಗೆಯಲ್ಲಿ ಇದ್ದಿರಲೂ ಬಹುದು. ಹೀಗೆ ಅಧಿಕೃತವಾಗಿ ಕಟ್ಟಿಕೊಡುತ್ತೇನೆಂದು ಸಣ್ಣದಾದರೂ ಅವರ ಮಟ್ಟಿಗೆ ಮಹತ್ವದ್ದೇ ಆಗಿರಬಹುದಾದ ಸಂಗತಿಗಳನ್ನು ನಿರ್ಲಕ್ಷಿಸಿ ಬರೆದದ್ದು ದಲಿತ ಹೋರಾಟ ಚರಿತ್ರೆಗೆ ಯಾವ ರೀತಿಯಲ್ಲೂ ಸಮಗ್ರತೆ ತಂದುಕೊಡಲಾರದು.

ಶಿವಾಜಿ ಗಣೇಶನ್ ರವರ ‘ದಲಿತ ಚಳುವಳಿಯ ಹೆಜ್ಜೆಗುರುತುಗಳು’ ಕೃತಿ ಅಶೋಕಪುರಂನಿಂದ ಶುರುವಾಗಿ ಮೈಸೂರು, ಮಂಡ್ಯ ಮಾರ್ಗವಾಗಿ ಬೆಂಗಳೂರು ತಲುಪುವುದನ್ನೇ ದಲಿತ ಚಳುವಳಿಯ ಸಮಗ್ರ ಹೆಜ್ಜೆಗುರುತುಗಳೆಂದು ನಂಬಿಸಿ ಅಧಿಕೃತ ಮುದ್ರೆ ಒತ್ತಿಸಿಕೊಳ್ಳಲು ಎಷ್ಟು ಬೇಕೊ ಅಷ್ಟು ಪ್ರಯತ್ನಿಸಿದಂತಿದೆ. ಈ ಮೂಲಕ ಉತ್ತರ, ಈಶಾನ್ಯ, ಮಧ್ಯ ಕರ್ನಾಟಕ ಸಮಗ್ರ ರ‍್ನಾಟಕದ ಅಸ್ಪೃಶ್ಯರ, ಅವಮಾನಿತರ, ನೋವುಂಡವರ ಚರಿತ್ರೆಯನ್ನು ಊಟಕ್ಕೆ ಉಪ್ಪಿನ ಕಾಯಿಯಂತೆ ಮೈಸೂರಿನ ಚಳುವಳಿ ಹೆಜ್ಜೆಗಳಿಗೆ ಪೂರಕವಾಗಷ್ಟೆ ಬಳಸಿಕೊಳ್ಳಲಾಗಿದೆ.

ಆಂದೋಲನ. ಶೋಷಿತ, ಪಂಚಮ, ಪ್ರಜಾವಾಣಿ ಪತ್ರಿಕೆಯಲ್ಲಿನ ತಮ್ಮ ಅನುಭವವನ್ನು, ದುಡಿಮೆಯನ್ನು ಪ್ರಥಮ ಪುರುಷದಲ್ಲೇ ಹೇಳಿಕೊಂಡು ಸಾಗುವುದರಿಂದ ಈ ಭಾಗದಲ್ಲೆಲ್ಲ ಆಟೋಬಯೋಗ್ರಫಿ ಓದುತ್ತಿರುವ ಅನುಭವ ಒದಗಿಸಿ ಕೃತಿ ವೈಯಕ್ತಿಕ ನೆಲೆಯಲ್ಲೆ ನಿಂತುಬಿಡುತ್ತದೆ. ಆತ್ಮಕಥನ ಎಂದೇ ಆಗಿದ್ದರೆ ಇದು ಅವರ ವೈಯಕ್ತಿಕ ನೆಲೆಯದೆಂದು, ಇಲ್ಲವೆ ‘ಮೈಸೂರು ಸೀಮೆಯ ಹೆಜ್ಜೆಗುರುತುಗಳು’ ಎಂದಿದ್ದರೆ ಸೀಮಿತ ಪ್ರದೇಶದ ಎಂದು ಕೈಚೆಲ್ಲಬಹುದಿತ್ತು. ಆದರೆ ಅವರು ತಮ್ಮ ಆತ್ಮಕಥನದ ರೂಪದಿ ಅಖೈರುಗೊಳಿಸಲು ಉತ್ಸಾಹ ತೋರಿರುವುದು ದಲಿತ ಚಳುವಳಿಯ ಅಧಿಕೃತ ಚರಿತ್ರೆಗೆ. ಮೈಸೂರಿನದ್ದೇ ಇಡೀ ಕರ್ನಾಟಕದ ದಲಿತ ಚರಿತ್ರೆ ಎನ್ನುವ ರೀತಿಯಲ್ಲಿ ಏಕೀಕೃತಗೊಳಿಸಿ, ದಲಿತ ಚಳುವಳಿ ಉಗಮಕ್ಕಿರುವ ಬಹು ಆಯಾಮವನ್ನು ಮೊಟಕಿದ್ದಾರೆ.ಇದೊಂದು ತರ ಕನ್ನಡ ನಾಡಿನ ಜೀವನದಿ ಕಾವೇರಿ ಎಂದು ಹೇಳುವ ಮೂಲಕ ಕೃಷ್ಣ, ಭದ್ರ, ಶರಾವತಿ ಇವುಗಳನ್ನೆಲ್ಲ ಅಣಕಿಸುವ ಇನ್ನೊಂದು ಬಗೆ.

‘ದಲಿತ ಚಳುವಳಿಗೆ ಮುನ್ನುಡಿ ಬರೆದ ಬೂಸ ಚಳುವಳಿ’ ‘ದಲಿತ ಚಳುವಳಿಗೆ ದಾರಿ ತೋರಿದ ಬಸವಲಿಂಗಪ್ಪ’ ಹೀಗೆ ಪ್ರತ್ಯೇಕವಾದ ಎರಡು ದೀರ್ಘ ಲೇಖನಗಳ ಮೂಲಕವೂ ಮತ್ತು ಕೃತಿಯುದ್ದಕ್ಕೂ ಹತ್ತಾರಿ ಬಾರಿ ಬೂಸ ಪ್ರಕರಣವನ್ನು ಬಹು ಆಯಾಮದಿ ಚರ್ಚಿಸುವ ಮೂಲಕ ಚಳವಳಿಯ ಹುಟ್ಟಿಗಿರುವ ಅಸ್ಪೃಶ್ಯತೆ, ಅವಮಾನ, ನೋವಿನ ನಿಜ ನೆಲೆಯನ್ನು ಶೂನ್ಯವಾಗಿಸಿದ್ದಾರೆ ಇಲ್ಲವೆ ಅಲ್ಲೆಗಳೆದಿದ್ದಾರೆ. ಈ ಮೂಲಕ ಬೌಧ್ಧಿಕ ವಲಯದ ಚರ್ಚೆಗಳೇ ಕಾರಣ ಎಂದೇಳಿ ಅದಕ್ಕಿರುವ ವೈಶಾಲ್ಯತೆಯನ್ನು ಕಳೆದಿದ್ದಾರೆ.ತತ್‌ಕ್ಷಣದ ಕಾರಣವಾಗಿ ಸ್ಪೋಟಗೊಂಡ ಬೂಸಾ ಕಿಚ್ಚಿನ ಪೂರ್ವದಲ್ಲಿ ಕರ್ನಾಟಕದ ಯಾವ ಮೂಲೆಯಲ್ಲೂ ಶೋಷಿತರ ಗುಂಪುಗಳು ಮನಸ್ಸುಗಳು ತಮಗಾಗುತ್ತಿರುವ ಅವಮಾನ ಶೋಷಣೆಯ ಕಾರಣಕ್ಕೆ ಮಿಡಿದಿರಲೇ ಇಲ್ಲವ ಎಂಬ ಅನುಮಾನವನ್ನು ಕೃತಿ ಉಳಿಸುತ್ತದೆ.

1973 ನವೆಂಬರ್ 20ರಂದು ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ‘ಹೊಸ ಅಲೆ’ ಉಪನ್ಯಾಸ ಕರ‍್ಯಕ್ರಮದಲ್ಲಿ ಬಸವಲಿಂಗಪ್ಪನವರಿಂದ ಬಂದ ‘ಕನ್ನಡ ಸಾಹಿತ್ಯ ಬೂಸ’ ಎಂಬ ಮಾತು ಅಲ್ಲಿಂದ ಶುರುವಾದ ಪರ ವಿರೋಧದ ಚರ್ಚೆಗಳು, ಪ್ರಕ್ಷುಬ್ದತೆಗೆ ಈ ವಾತಾವರಣವೆ ದಲಿತ ಚಳುವಳಿಗೆ ಸ್ಪೂರ್ತಿ ನೀಡಿತು ಮುನ್ನುಡಿ ಬರೆಯಿತು (ಪುಟ 12-13) ಎನ್ನುತ್ತಾರೆ. ಇದರ ಮುಂದುವರೆದ ಭಾಗವಾಗಿ (ಪುಟ 35 ಮತ್ತು 41) 1976 ಭದ್ರಾವತಿಯಲ್ಲಿ ದಲಿತ ಲೇಖಕ ಕಲಾವಿದರ ಮತ್ತು ಯುವಕರ ಮೊದಲ ದಲಿತ ಸಾಹಿತ್ಯ ಸಮ್ಮೇಳನ ಆಯಿತು, 1977 ರಲ್ಲಿ ಚಿಕ್ಕಮಗಳೂರಿನ ಸಭೆಯಲ್ಲಿ ‘ದಲೇಕಯುಸಂ’ ವಿಸರ್ಜಿಸಿ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕರ ವಿರುದ್ದ ನಡೆಯುತ್ತಿದ್ದ ಅನ್ಯಾಯದ ವಿರುದ್ದ ಹೋರಾಡಲು ಪರಿಶಿಷ್ಠ ಜಾತಿಯ ನೌಕರರು ಮತ್ತು ಕಾರ್ಮಿಕರು ಎನ್.ಗಿರಿಯಪ್ಪ, ಬಿ.ಕೃಷ್ಣಪ್ಪ, ಚಂದ್ರಪ್ರಸಾದ್ ತ್ಯಾಗಿ ಮುಂತಾದವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟಿ ಹಾಕಿದ್ದರು. ಈ ಸಂಘಟನೆಯು ನೊಂದಣಿ ಕೂಡ ಆಗಿತ್ತು ಈ ಹೆಸರನ್ನೇ ಚಳುವಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು ಅನ್ನುತ್ತಾರೆ.

ಹೀಗೆ ಹೇಳುವ ಮೂಲಕ ಕೆಲವು ಪ್ರಮುಖ ಸಂಗತಿಗಳನ್ನು ತೇಲಿಸಿ ಬಿಡುತ್ತಾರೆ. ಮೈಸೂರಿನ ಸಮಾಜವಾದಿ ಸಂಘಟನೆಗಳು ಬೂಸ ಪ್ರಕರಣ ಕುರಿತಂತೆ ಬಸವಲಿಂಗಪ್ಪನವರ ಹೇಳಿಕೆಯನ್ನು ಬೆಂಬಲಿಸಿ ನಿರ್ಣಯ ಕೈಗೊಳ್ಳುವುದಾಗಲಿ, ಪರವಹಿಸುವುದಾಗಲೀ ಮಾಡುವುದಿಲ್ಲ. ಈ ತಟಸ್ಥತೆಯ ವಿರುದ್ದ ಬಂಡೆದ್ದು ಪ್ರೊ.ಬಿ ಕೃಷ್ಣಪ್ಪನವರು ಆಚೆ ಬರುತ್ತಾರೆ. ಆನಂತರ ದಲಿತ ಲೇಖಕ ಕಲಾವಿದರನ್ನು ಒಟ್ಟುಗೂಡಿಸಿ ಭದ್ರಾವತಿಯಲ್ಲಿ ಮೊದಲ ದಲಿತರ ಸಮಾವೇಶ ನಡೆಸುತ್ತಾರೆ.ಈ ಮುಂಚೆಯೇ ಸಂಘ ನೊಂದಣಿಯಾಗಿತ್ತು ಎಂದಷ್ಟೇ ಹೇಳಿ ಮುಂದಕ್ಕೆ ಹೋಗುವ ಲೇಖಕರಿಗೆ ಭದ್ರಾವತಿಯಲ್ಲಿ ಸಂಘ ನೊಂದಣಿ ಆಗಿದ್ದ ಜನವರಿ 27, 1974-75ರ ಕಡೆಗಾಗಲಿ, ಇಂದಿಗೂ ಪ್ರೊ.ಬಿ ಕೃಷ್ಣಪ್ಪ ಮೂಲಮಾತೃ ಸಮಿತಿ ರಿ.74-75 ಎಂದುನೋದಣಿ ಇಸವಿಯೊಂದಿಗೆ ಕ್ರಿಯಾಶೀಲರಾಗಿರುವ ಮುಕ್ಕಾಲು ಭಾಗ (ದಸಂಸ) ಕರ್ನಾಟಕದ ಕಡೆಗಾಗಲೀ ಆಸಕ್ತಿ ಇದ್ದಂತಿಲ್ಲ. ಅವರದ್ದೇನಿದ್ದರು 1977 ರ ನಂತರ ಅದು ರಾಜ್ಯ ಮಟ್ಟದ ಸಂಘಟನೆ ಆದ ಕಡೆಗಿನ ದಾಟು ಹೆಜ್ಜೆ. ನೊಂದಾಯಿತ ಸಂಘದ ಮೊದಲ ಅಧ್ಯಕ್ಷರು ಎನ್.ಗಿರಿಯಪ್ಪನವರು, ಕಾರ್ಯದರ್ಶಿ ಪ್ರೊ.ಬಿ.ಕೃಷ್ಣಪ್ಪ.(ಏಪ್ರಿಲ್ 20-2021 ರ ದಸಂಸ ಬಣಗಳ ವಿವಾದಕ್ಕೆ ತೆರೆ-ಪ್ರಜಾವಾಣಿ ವರಧಿ) ಅಂದ ಮೇಲೆ ಕರ್ನಾಟಕ ದಲಿತ ಚಳುವಳಿಯ ಹೆಜ್ಜೆ ಗುರುತುಗಳನ್ನು ಭದ್ರಾವತಿ ಶಿವಮೊಗ್ಗ ಕಡೆಯಿಂದ ನೋಡ ಹೊರಟರೆ ಇನ್ನೊಂದು ಬಗೆಯ ಚರಿತ್ರೆ ಕಾಣಿಸುತ್ತದೆ.

ಇಲ್ಲಿ ಯಾವ ತತ್ ಕ್ಷಣದ ಕಾರಣಗಳಿಲ್ಲದೆ ಅವಮಾನದ, ಅಸ್ಪೃಶ್ಯತೆ ನೋವುಂಡವರ ನಿಜ ನೆಲೆಯಿಂದ ಶುರುವಾದ ಹೋರಾಟದ ಚಹರೆಗಳು ಕಾಣಿಸುತ್ತದೆ.ಹೀಗೆ ಹುಡುಕುತ್ತಾ ಹೊರಟರೆ ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ,ಚಿತ್ರದುರ್ಗ, ಬಳ್ಳಾರಿ, ಕೋಲಾರ ಸೀಮೆಯ ದಲಿತ ಹೋರಾಟ ಚರಿತ್ರೆಯ ಆರಂಭಿಕ ಹೆಜ್ಜೆಗಳು ಇನ್ನೊಂದು ಬಗೆಯಲ್ಲಿ ಇದ್ದಿರಲೂ ಬಹುದು. ಹೀಗೆ ಅಧಿಕೃತವಾಗಿ ಕಟ್ಟಿಕೊಡುತ್ತೇನೆಂದು ಸಣ್ಣದಾದರೂ ಅವರ ಮಟ್ಟಿಗೆ ಮಹತ್ವದ್ದೇ ಆಗಿರಬಹುದಾದ ಸಂಗತಿಗಳನ್ನು ನಿರ್ಲಕ್ಷಿಸಿ ಬರೆದದ್ದು ದಲಿತ ಹೋರಾಟ ಚರಿತ್ರೆಗೆ ಯಾವ ರೀತಿಯಲ್ಲೂ ಸಮಗ್ರತೆ ತಂದುಕೊಡಲಾರದು.

‘ದಲಿತ ಸಂಘರ್ಷ ಸಮಿತಿಯ ಹೆಜ್ಜೆಗಳು’ ಭಾಗದಲ್ಲಿ ಒಮ್ಮೆ ಮಾತ್ರ ಅನಿವಾರ್ಯವಾಗಿ(ಪುಟ 39)ದಲಿತ ಚಳುವಳಿ ಒಬ್ಬರಿಂದ ಆರಂಭವಾದುದಲ್ಲ, ಇದು ನೊಂದ ಮತ್ತು ಜಾಗೃತಗೊಂಡ ದಲಿತ ಸಮುದಾಯದಿಂದ ರೂಪಗೊಂಡ ಚಳುವಳಿ ಎನ್ನುವ ಲೇಖಕರು ಅದರ ಮುಂದಿನ ಎಂಟನೇ ಭಾಗದಲ್ಲಿ ‘ದಲಿತ ಚಳುವಳಿಗೆ ದಾರಿ ತೋರಿದ ಬಸವಲಿಂಗಪ್ಪ’ ಎಂದು ವ್ಯಕ್ತಿ ಕೇಂದ್ರಿತಗೊಳಿಸಿ ಮತ್ತೆ ಆರಾಧಿಸುತ್ತಾರೆ. ತಮ್ಮ ಸ್ವಾಮಿ ಮತ್ತು ಜಾತಿ ನಿಷ್ಠೆಯನ್ನು ಒಂದೊಂದು ಭಾಗದಲ್ಲಿ ಒಂದೊಂದು ತರ ಪ್ರಯೋಗಿಸಿ ಓದುಗನನ್ನು ಗೊಂದಲಕ್ಕೆ ಬೀಳಿಸುತ್ತಾರೆ.

ಲೇಖಕರೊಳಗಿನ ಇಂಥದ್ದೇ ಗೊಂದಲಗಳು ಅಥವ ಡ್ಯೂಯಲ್ ನಿಲುವುಗಳು ಕೃತಿಯುದ್ದಕ್ಕು ತೊಡರುತ್ತಲೇ ಹೋಗುತ್ತವೆ. ದಲಿತ ಸಂಘರ್ಷ ಸಮಿತಿಯ ಒಡಕಿಗೆ ಪ್ರಮುಖ ಕಾರಣ ಬಿಎಸ್‌ಪಿ ಮತ್ತು ಮಾದಿಗ ದಂಡೋರ ಎಂದು ಯಾವ ಮುಲಾಜೂ ಇಲ್ಲದೆ ದೂರುವ (ಪುಟ 47) ಲೇಖಕರು ದಲಿತ ಸಂಘರ್ಷ ಸಮಿತಿಯು ಆ ನಂತರದಲ್ಲಿ ಹೊಂದಿದ್ದ ರೈತ ಸಂಘದೊಂದಿಗಿನ ಸ್ನೇಹ ಮತ್ತು ಎಡ ಪಕ್ಷಗಳೊಂದಿಗಿನ ಪ್ರೇಮದಿಂದ ಹೋರಾಟದ ಹಲವು ಮಜಲುಗಳನ್ನು ತಿಳಿಯಲು ನೆರವಾಯಿತು ಮತ್ತು ಹೋರಾಟದಲ್ಲಿ ಮಿತ್ರರನ್ನು ಹೆಚ್ಚುಮಾಡಿಕೊಳ್ಳಲು ಸಾಧ್ಯವಾಯಿತು ಎಂದು ದಸಂಸದೊಳಗೆ ಇದ್ದ ಗಾಂಧಿವಾದಿಗಳನ್ನು, ಮಾರ್ಕ್ಸ್ ವಾದಿಗಳನ್ನು(ದೇವನೂರ ಮಹಾದೇವ, ಸಿದ್ದಲಿಂಗಯ್ಯ) ಸಮರ್ಥಿಸಿಕೊಳ್ಳುತ್ತಾರೆ ಮತ್ತು ಅವರಿಂದ ಚಳುವಳಿಗೆ ಯಾವುದೇ ನಷ್ಠವಾಗಲಿಲ್ಲ ಎಂಬ ಬಗೆಯ ಅಭಿಪ್ರಾಯ ಲೇಖಕರದ್ದಾಗಿದೆ. ಎನ್.ಎಸ್ ಶಂಕರ್ ರವರ ‘ಈಗ ಅಳುವವರೂ ಇಲ್ಲ’ ಕೃತಿಯಲ್ಲಿ (ಪುಟ 9) ದಸಂಸ ಒಡಕಿನ ಕಾರಣವನ್ನು ಹೀಗೆ ಗುರುತಿಸಲಾಗಿದೆ.ಚಳುವಳಿಯ ಉಚ್ರಾಯದ ಬುಡದಲ್ಲಿಯೇ ಭ್ರಷ್ಟತೆ ತಲೆ ಎತ್ತ ತೊಡಗಿತು.ಪಾರದರ್ಶಕವಾಗಬೇಕಿದ್ದ ಸಂಘಟನೆಯ ಲೆಕ್ಕ ಪತ್ರ ವಿಷಯವು ಚಳುವಳಿ ಮುಖಂಡರ ಗಂಭೀರ ಪರಿಗಣನೆಯ ವಿಷಯವೇ ಆಗಿರಲಿಲ್ಲ. ಇದರಿಂದ ಭ್ರಷ್ಟತೆಯೇ ಕವಲೊಡೆದಂತೆ ಸ್ವಜನ ಪಕ್ಷಪಾತವೂ ಜೊತೆಯಾಗಿಯೇ ತಲೆ ಎತ್ತತೊಡಗಿತು.

ದ.ಸಂ.ಸ ದ ರಾಜ್ಯ ಸಂಚಾಲಕರಾಗಿದ್ದ ದೇವನೂರ ಮಹದೇವ ಅವರು ತಮ್ಮ ಪ್ರಭಾವ ಬಳಸಿ ತನ್ನ ತಮ್ಮನನ್ನು ರಾಜ್ಯ ವಯಸ್ಕ ಶಿಕ್ಷಣದ ಅಧ್ಯಕ್ಷನನ್ನಾಗಿ ಮಾಡಿಕೊಂಡರೆಂಬ ಆರೋಪ, ಅನುಮಾನ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದರೂ ಈ ಬಗ್ಗೆ ಸಂಘಟನೆಯ ವೇದಿಕೆಗಳಲ್ಲಿ ಮುಕ್ತವಾಗಿ ಚರ್ಚಿಸುವುದಾಗಲೀ, ಇದು ನಿಜ ಅಥವ ನಿಜವಲ್ಲ ಎಂಬ ಸ್ಪಷ್ಠೀಕರಣದ ಪ್ರಯತ್ನಗಳು ನಡೆಯಲೇ ಇಲ್ಲ. ಇದರಿಂದ ಭ್ರಷ್ಟತೆ ಸ್ವಜನ ಪಕ್ಷಪಾತಗಳ ಸಹಜ ಉತ್ಪನ್ನದಂತೆ ಅಸ್ಪೃಶ್ಯ ದಲಿತರೊಳಗಿನ ದಲಿತ ಜಾತಿವಾದವೂ ತಲೆ ಎತ್ತತೊಡಗಿತು. ದಲಿತ ಚಳುವಳಿಯ ಹೊಲೆ ಮಾದಿಗ ಬೆಸುಗೆಯಲ್ಲಿ ಅನುಮಾನ, ಈರ್ಶೆಗಳ ಬಿರುಕು ಕಾಣಿಸತೊಡಗಿತು. ಇದು ಚಳುವಳಿಯ ಅಳಿವು ಉಳಿವನ್ನು ನಿರ್ಧರಿಸುವ ಆಘಾತಕಾರಿ ಬಿರುಕಾಗಿ ಕಾಣಿಸಿತು.ಕ್ರಮೇಣ ಈ ಬಿರುಕೇ ಕಂದಕವಾಗಿ ಕೊನೆಗೆ 1997ರ ವೇಳೆಗೆ ದಲಿತ ಚಳುವಳಿಯ ಎಡ-ಬಲ ಇಬ್ಬಾಗವಾಗಿ ದುರಂತ ನಡೆದೇಹೋಗಿತ್ತು.

ಈ ಮೇಲಿನ ಅಭಿಪ್ರಾಯದ ಜೊತೆಗೆ ಅಂಬೇಡ್ಕರ್ ಸೈಂಧ್ದಾAತಿಕತೆಯ ಮೇಲೆ ಕಟ್ಟಲ್ಪಟ್ಟಿದ್ದ ದಲಿತ ಸಂಘರ್ಷ ಸಮಿತಿಯೊಳಗೆ ಮುಂಚೂಣಿ ನಾಯಕರೆನಿಸಿಕೊಂಡವರು ಗಾಂಧಿವಾದದ ಕಡೆಗು ಮರ್ಕ್ಸ್ ವಾದದ ಕಡೆಗೂ ಆಸಕ್ತಿ ಹೊಂದಿದವರಾಗಿದ್ದು ಅವರು ಅಕ್ಕಿ ಮೇಲೆ ಆಸೆ ಮಕ್ಕಳ ಮೇಲೆ ಪ್ರೀತಿ ಎಂಬ ನಿಲುವಿನಲ್ಲಿದ್ದರು.ಈ ಅನುಕೂಲ ಸಿಂಧುವಿನಡಿಯಲ್ಲೆ ರಾಮಕೃಷ್ಣ ಹೆಗಡೆ ಅವಧಿಯಲ್ಲಿ ದಲಿತ ಕವಿ ಸಿದ್ದಲಿಂಗಯ್ಯನವರು ಎರಡು ಅವಧಿಗೆ ಎಮ್.ಎಲ್.ಸಿ ಆದುದು ಚಂದ್ರಪ್ರಸಾದ್ ತ್ಯಾಗಿ ಸ್ಲಂ ಬೋರ್ಡ್ ಚರ‍್ಮೆನ್ ಆದರು. ಅಧಿಕಾರದ ಕ್ಷಣಿಕ ಸುಖಕ್ಕೆ ನಾಲಿಗೆ ಚಾಚಿದ ಮರ‍್ಕ್÷್ಸವಾದಿ ದಲಿತ ನಾಯಕರು ಮತ್ತು ತಟಸ್ಥ ಗಾಂಧಿವಾದಿಗಳಿಂದ ಚಳುವಳಿಗೆ ಹಿನ್ನಡೆಯಾಯಿತೆಂಬ ಕಾರ್ಯಕರ್ತರಲ್ಲಿ ಜನಪದೀಯವಾಗಿರುವ ಇನ್ನೊಂದು ಬಗೆಯ ಒಡಕಿನ ವಾದದ ಕಡೆಗೆ ಶಿವಾಜಿ ಗಣೇಶನ್ ರವರು ಆಂಶಿಕವಾಗಿಯೂ ಪ್ರಸ್ಥಾಪಿಸುವುದಿಲ್ಲ. ಹೀಗಿರುವಾಗ ಇದು ಸಮಗ್ರ ದಲಿತ ಚಳುವಳಿಯ ಹೆಜ್ಜೆ ಗುರುತು ಆಗಿರದೆ ಶಿವಾಜಿ ಗಣೇಶನ್ ರವರ ವೈಯಕ್ತಿಕ ಅಭಿಪ್ರಾಯದ್ದು ಮಾತ್ರವಾಗಿದೆ.

ಚಳುವಳಿ ಒಡಕಿಗೆ ಮಾದಿಗ ದಂಡೋರ ಕಾರಣವೆಂದು ಜಾತಿ ಕೇಂದ್ರಿತಗೊಳಿಸಲು ಉತ್ಸಾಹ ತೋರುವ ಲೇಖಕರು ಮಾದಿಗ ಮೀಸಲಾತಿ ಹೋರಾಟದ ಹುಟ್ಟಿಗೆ ಕಾರಣವೇನು. ಅಸ್ಪೃಶ್ಯ ಎಡಗೈ ಸಮುದಾಯ ನನಗೆ ಅನ್ಯಾಯವಾಗುತ್ತಿದೆ ಮೀಸಲಾತಿಯ ಪಾಲು ನನಗೆ ಸಿಗುತ್ತಿಲ್ಲ ಎಂದು ಕೇಳುತ್ತಿರುವಾಗ ಈ ಚರ್ಚೆಯನ್ನು ಆಗಿನ ಡಿಎಸ್‌ಎಸ್ ಕೈಗೆತ್ತಿಕೊಳ್ಳದಿರಲು ಕಾರಣವೇನು ಎಂಬುದರ ಕಡೆಗೆ ಹೊರಳುವುದಿಲ್ಲ. ಈ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸದಿದ್ದುದೇ ಮಾದಿಗ ದಂಡೋರದ ಉಗಮಕ್ಕೆ ಕಾರಣವಾಯಿತಲ್ಲವೇ. ದಲಿತ ಬೌದ್ಧರ ಹಾಗು ದಲಿತ ಕ್ರೈಸ್ತರ ಮೀಸಲಾತಿಗೆ ಸಂಬಂಧಿಸಿದಂತೆ ಆಗಿನ ದಸಂಸ ಎಡ-ಬಲ ನಾಯಕರ ನಿಲುವೇನಾಗಿತ್ತು? ಈ ವಾಸ್ತವದ ಸಂಗತಿಗಳು ಲೇಖಕರ ಆಸಕ್ತಿಯ ಸಂಗತಿಗಳಾಗಿಲ್ಲ ಆದರೆ ಅವರು ಹೇಳಹೊರಟಿರುವುದು ದಲಿತ ಚಳುವಳಿಯ ಹೆಜ್ಜೆಗಳನ್ನು!

ಲೇಖಕರ ಡ್ಯೂಯಲ್ ಸ್ಟಾಂಡ್‌ಗಳು ಇಲ್ಲಿಗೆ ನಿಲ್ಲದೆ (ಪುಟ 59) ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ದಲಿತ ಚಳುವಳಿ ಆರಂಭವಾಗಲು ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸ ಎಂದು ಕರೆದದ್ದು ಕಾರಣ ಎನ್ನುತ್ತಲೇ, ಅವರು ಆಗ ಎದ್ದಿದ್ದ ಹೊಸ ಅಲೆಯ ಅವಕಾಶವನ್ನೇ ಬಳಸಿಕೊಂಡಿದ್ದರೆ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಯನ್ನು ಕಟ್ಟಿ ಅಧಿಕಾರ ಹಿಡಿದ ಕಾಂಶಿರಾಮ್‌ಗಿಂತ ಮುಂಚಿತವಾಗಿಯೇ ಕರ್ನಾಟಕದಲ್ಲಿ ಬದಲಾವಣೆಯ ಹರಿಕಾರರಾಗುತ್ತಿದ್ದರು ಎಂದು ಕಾಂಗ್ರೆಸ್ ಪಕ್ಷನಿಷ್ಠರಾಗಿದ್ದ ಬಸವಲಿಂಗಪ್ಪನವರು ತಾವು ಮಾಡದೆ ಇದ್ದ ಕೆಲಸದ ಬಗೆಗೆ ಪಾಸಿಟೀವ್ ನೋಟ ಲೇಖಕರಿಗೆ ಇದೆ. ಅದೇ ಬಿ.ಕೃಷ್ಣಪ್ಪನವರು ಅಂಬೇಡ್ಕರ್ ಸಿದ್ದಾಂತದ ಮೇಲೆ ಸ್ಥಾಪಿತಗೊಂಡಿದ್ದ ಬಿಎಸ್ಪಿಯನ್ನು ಕರ್ನಾಟಕಕ್ಕೆ ತಂದದ್ದು ಮತ್ತು ಬಿಎಸ್ಪಿ ಯಿಂದ ಚುನಾವಣೆಗೆ ಸ್ಪರ್ಧಿಸಿದ್ದು ದಸಂಸ ಒಡಕಿಗೆ ಕಾರಣವಾಯಿತು ಎಂದು ಅಭಿಪ್ರಾಯಿಸುತ್ತಾರೆ. ಅಂದರೆ ಲೇಖಕರು ಯಾರ ರಾಜಕೀಯ ನಾಯಕತ್ವಕ್ಕೆ ನಮ್ಮ ಬೆಂಬಲ ಇತ್ತು, ಯಾರಿಗೆ ಇರಲಿಲ್ಲ ಎಂಬ ಸುಳಿವನ್ನು ಎರಡು ಬೇರೆ ಬೇರೆ ಸಂದರ್ಭದಲ್ಲಿ ಭಿನ್ನ ಧೋರಣೆಗಳನ್ನು ಪ್ರಕಟಿಸುವ ಮೂಲಕ ಬಿತ್ತರಗೊಳ್ಳುತ್ತಾರೆ.

‘ಹೋರಾಟಕ್ಕೆ ಕಿಚ್ಚು ಹಚ್ಚಿದ ಸಿದ್ದಲಿಂಗಯ್ಯ’ ಲೇಖನದಲ್ಲಿ ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳು ಚಳುವಳಿಯ ಭಾಗವಾದದ್ದು ಅವುಗಳು ಚಳುವಳಿಗೆ ಕಿಚ್ಚು ಹಚ್ಚಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಆನಂತರದಲ್ಲಿ ಸಿದ್ದಲಿಂಗಯ್ಯನವರು ತೆಗೆದುಕೊಂಡ ಸ್ಟಾಂಡ್ ಇದಿಯಲ್ಲ ಅದರಲ್ಲೂ ಅಮಿತ್ ಶಾರನ್ನು ಮನೆಗೆ ಕರೆಸಿಕೊಂಡದ್ದು, ಅವರ ಮಾತಿನ ವರಸೆಗಳು ಬದಲಾದದ್ದು ಇವುಗಳನ್ನೆಲ್ಲ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಅಂತರಾಳದ ಕಾಳಜಿಯ ಬಗೆಗೆ ನನಗಾಗಲೀ ದೇವನೂರರಿಗಾಗಲೀ ಅನುಮಾನವಿರಲಿಲ್ಲ ಎಂದು ಮೈಯಾಕಿಕೊಳ್ಳುತ್ತಾರೆ. ಇದೂ ಸಹ ಲೇಖಕರ ವೈಯಕ್ತಿಕ ಅಭಿಪ್ರಾಯವೇ ಹೊರತು ದಸಂಸದ ಸಾಮಾನ್ಯ ಕಾರ್ಯಕರ್ತನದ್ದಲ್ಲ.
ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಅನೇಕ ಪ್ರಮುಖ ಸಾಹಿತಿ, ಚಿಂತಕರನ್ನ ಹೆಸರಿಸುತ್ತಾರೆ.ಅವರ ಪಟ್ಟಿ ಹೀಗಿದೆ (ಪುಟ 38) ದೇವಯ್ಯ ಹರವೆ, ರುದ್ರಪ್ಪ ಹನಗವಾಡಿ, ಶ್ರೀಧರ ಕಲುವೀರ, ವಿಜಯ ಪಾಟೀಲ, ಗುರುರಾಜ ಬೀಡಿಕರ್, ಕೆ.ರಾಮಯ್ಯ, ಪರಮಶಿವ ನಡುಬೆಟ್ಟು, ಪರುಶುರಾಮ್, ಜಂಬಣ್ಣ ಅಮರಚಿಂತ ಮುಂತಾದವರು ಭಾಗವಹಿಸಿದ್ದರು.

1983 ರಲ್ಲಿ ಧಾರವಾಡದ ಕಲಾಭವನದಲ್ಲಿ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನೆರವೇರಿದ ಸಮ್ಮೇಳನವನ್ನು ಮಹದೇವ ಉದ್ಘಟಿಸಿದರು. ಈ ಸಮ್ಮೇಳನದಲ್ಲಿ ಕೆ.ನಾರಾಯಣ ಸ್ವಾಮಿ, ಸಿದ್ದಲಿಂಗಯ್ಯ, ಚನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ, ದೇವಯ್ಯ ಹರವೆ, ಗೋವಿಂದಯ್ಯ, ಇಂಧೂಧರ ಹೊನ್ನಾಪುರ, ಮುನಿವೆಂಕಟಪ್ಪ, ಕೆ.ರಾಮಯ್ಯ, ಸುಕನ್ಯ ಮಾರುತಿ, ಅರವಿಂದ ಮಾಲಗತ್ತಿ, ಬಾನಂದೂರು ಕೆಂಪಯ್ಯ, ಮಂಗ್ಲೂರು ವಿಜಯ, ತೇಜಸ್ವಿ ಕಟ್ಟಿಮುನಿ, ಶಂಕರ ಕಟಗಿ, ಸಿದ್ದನಗೌಡ ಪಾಟೀಲ ಮುಂತಾದವರು ಭಾಗವಹಿಸಿದ್ದರು ಎನ್ನುತ್ತಾರೆ. ಇಲ್ಲೆಲ್ಲೂ ಸಹ ಅಪ್ಪಿ ತಪ್ಪಿಯೂ ಕನ್ನಡದ ಮಹತ್ವದ ಕವಿ, ದಸಂಸದಲ್ಲಿ ದುಡಿದ ಕೇಬಿ ಸಿದ್ದಯ್ಯನವರ ಹೆಸರನ್ನ ಪ್ರಸ್ಥಾಪಿಸುವುದಿಲ್ಲ. ಹೋರಾಟದ ಹಾಡುಗಳ ಸಂದರ್ಭದಲ್ಲೂ ಚಿಕ್ಕತಿಮ್ಮಯ್ಯನ ಕಗ್ಗೊಲೆಯನ್ನು ಕೇಂದ್ರವಾಗಿಸಿಕೊAಡು ಕೇಬಿ ಬರೆದು ಹಾಡಿದ, ಜನಪ್ರಿಯಗೊಂಡ‘ಈ ನಾಡ ಮಣ್ಣಿನಲ್ಲಿ- ಒಂದು ದಹನದ ಕಥೆ’ಯ ಕಾರಣಕ್ಕಾದರೂ ಸಿದ್ದಯ್ಯನ ಹೆಸರನ್ನ ಎಲ್ಲಿಯೂ ತರುವುದಿಲ್ಲ. ಹಾಗಾದರೆ ಕರ್ನಾಟಕದ ದಲಿತ ಚಳುವಳಿಯಲ್ಲಿ ಸಿದ್ದಯ್ಯನವರ ಹೆಜ್ಜೆಗಳಿಲ್ಲವ? ಎಂದು ಸ್ವತಃ ಶಿವಾಜಿ ಗಣೇಶನ್ ರವರು ಪ್ರಶ್ನೆ ಹಾಕಿಕೊಳ್ಳಬೇಕಿದೆ.

ಕುಂದೂರು ತಿಮ್ಮಯ್ಯನವರು ತಮ್ಮ (ಅಪ್ರಕಟಿತ) ದಲಿತ ಹೋರಾಟ ಕಥನದಲ್ಲಿ ಕೇಬಿ ಸಿದ್ದಯ್ಯನವರ ಮಾರ್ಗದರ್ಶನದಲ್ಲಿ ಅವರ ಒಡಗೂಡಿನಾವುಗಳು ರೈಲಿನಲ್ಲಿ ಪ್ರಯಾಣ ಬೆಳೆಸಿ ಭದ್ರಾವತಿಯಲ್ಲಿ ನಡೆದ ಪ್ರಥಮ ದಲಿತರ ಸಮಾವೇಶದಲ್ಲಿ ಪಾಲ್ಗೊಂಡೆವು ಅವರು ಅಲ್ಲಿ ಕವಿತೆ ವಾಚಿಸಿದರು ಎಂದು ಬರೆದುಕೊಂಡಿದ್ದಾರೆ.೭೦ರ ದಶಕದಲ್ಲಿ ತುಮಕೂರು ಜಿಲ್ಲೆಯ ಕುಂದೂರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯೇ ಮುಂದೆ ನಿಂತು ನೆರವೇರಿಸಿದ ಬಹು ಚರ್ಚಿತ ಕೇಬಿ ಸಿದ್ದಯ್ಯ ಹಾಗು ಗಂಗರಾಜಮ್ಮನವರ (ಮಾದಿಗ ಮತ್ತು ಹೊಲೆಯ) ಒಲವಿನ ವಿವಾಹ ಒಂದು ಐತಿಹಾಸಿಕ.ದಲಿತ ಸಂಘರ್ಷ ಸಮಿತಿಯೊಳಗೆ ಅಸ್ಪೃಶ್ಯ ಎಡ ಬಲ ಒಟ್ಟಾಗಿಯೇ ಇವೆ ಎಂಬ ಐಕ್ಯತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಮಹತ್ವದ್ದೆನಿಸಿದ್ದ ಈ ವಿವಾಹ ನಾಡಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಹಾಗುರಾಜ್ಯ ಮಟ್ಟದ ಮುಖಂಡರ ನೇತೃತ್ವದಲ್ಲಿ ನೆರವೇರಿ ದಸಂಸ ನಡೆಗೆ ಒಂದು ಉತ್ತಮ ಮಾದರಿಯಾಗಿದೆ. ತುಂಬಾಡಿ ರಾಮಯ್ಯನವರ ಆತ್ಮಕಥನ ‘ಮಣೆಗಾರ’ ಮತ್ತು ಪ್ರೊ.ಬಿ.ಕೆಯವರ ‘ಬರಹ ಮತ್ತು ಭಾಷಣ’ದಲ್ಲಿಪ್ರಮುಖವಾಗಿ ಚರ್ಚೆಯಾಗಿರುವ ಕೇಬಿ ಮದುವೆ ಪ್ರಸಂಗ ಶಿವಾಜಿ ಗಣೇಶನ್ ರವರ ಚಳುವಳಿ ಹೆಜ್ಜೆ ಗುರುತುಗಳಲ್ಲಿ ಇಲ್ಲವಾಗಿದೆ.

ಮೈಸೂರು ಭಾಗದ ಹೋರಾಟಕ್ಕೆ ಸಮಗ್ರತೆ ತಂದುಕೊಳ್ಳುವ ದೃಷ್ಟಿಯಲ್ಲಿ ಪ್ರಾಸಂಗಿಕವಾಗಿ ಜಿಲ್ಲಾವಾರು ಕೆಲವರ ಹೆಸರನ್ನು ಲೇಖಕರು ಹೇಳುತ್ತಾ ಹೋಗುತ್ತಾರೆ.ಈ ನಿಟ್ಟಿನಲ್ಲಿ ತುಮಕೂರಿನ ಚಳುವಳಿಯ ಬಗೆಗಿರುವ ಅವರ ಜ್ನಾನವನ್ನ ಓರೆಗೆಹಚ್ಚುವುದಾದರೆ ಬೆಲ್ಲದಮೊಡು ರಂಗಸ್ವಾಮಿ, ಕೇಬಿ ಸಿದ್ದಯ್ಯ, ನರಸೀಯಪ್ಪ, ಎಸ್.ದೊರೈರಾಜ್ ರವರ ಮಾರ್ಗದರ್ಶನದಲ್ಲಿ ಚಳುವಳಿ ಮುನ್ನಡೆಯುತ್ತಿತ್ತು ಎನ್ನುತ್ತಾರೆ. ಬಂದಕುಂಟೆ ನಾಗರಾಜಯ್ಯನವರಾಗಲಿ, ಕುಂದೂರು ತಿಮ್ಮಯ್ಯನವರಾಗಲಿ ಅವರಿಗೆ ಪರಿಚಯವಿರಲಿಕ್ಕಿಲ್ಲ. ಇಲ್ಲಿನ ಸಾಮಾನ್ಯ ಕಾರ್ಯಕರ್ತರ ನಾಡಿ ಮಿಡಿತ ಅವರಿಗೆ ಗೊತ್ತಿದ್ದಂತಿಲ್ಲ. ಹೆಚ್. ಎಮ್ ಗಂಗಾಧರಯ್ಯನವರ ಬಗ್ಗೆ ನಾಲ್ಕು ಪುಟದಷ್ಟು ಬರೆದಿರುವ ಅವರು ದಸಂಸಕ್ಕೆ ಅವರ ಕೊಡುಗೆ ಏನು ಎಂಬುದನ್ನ ಪರಾಮರ್ಶಿಸಿಕೊಳ್ಳಬೇಕಿದೆ.ಇನ್ನು ಅವರು ದೊರೈರಾಜ್ ಮುಂದೆ ಬಳಸಿರುವ ‘ಎಸ್’ ಯಾರು ಎಂಬುದನ್ನೂ ಅವರೇ ಸ್ಪಷ್ಟಪಡಿಸಬೇಕಿದೆ. ಅಂತೆಯೇ ಚಿತ್ರದುರ್ಗದ ಜಯಣ್ಣನ ಮುಂದೆ ಇರುವ ‘ಎನ್’ ಕೂಡ ಯಾವುದೆಂದು ಅವರೇ ಹೇಳಬೇಕಿದೆ.

ಎನ್.ಎಸ್ ಶಂಕರ್ ರವರ ‘ಈಗ ಅಳುವವರೂ ಇಲ್ಲ’ ಕೃತಿಯಲ್ಲಿ (ಪುಟ 8)‘ದಲಿತರ ಅಸಮಾನ್ಯ ನೈತಿಕ ಸಾಮರ್ಥ್ಯದ ಒತ್ತಸೆಯೇ ಆರಂಭದಿAದ ಆವರೆಗಿನ ದಲಿತ ಚಳುವಳಿಯ ಗುಣಾತ್ಮಕ ಬೆಳವಣಿಗೆಗೆ ಕಾರಣವಾಗಿತ್ತೇ ಹೊರತು ಇಂಥ ಮುಖಂಡರ ನಾಯಕತ್ವ ಗುಣದಿಂದಲ್ಲ’ಎಂಬ ವಾಸ್ತವ ನೆಲೆಯ ಸ್ಟೇಟ್ಮೆಂಟ್(ಪುಟ 8) ಬರುತ್ತದೆ. ಇಂಥಹ ಸರ್ವಕಾಲಿಕ ಸತ್ಯಗಳಿಗೆ ಬೆನ್ನು ಹಾಕಿಯೇ ರಚನೆಗೊಂಡಿರುವ ‘ಚಳುವಳಿ ಹೆಜ್ಜೆಗಳು’ ಕೃತಿ ತನ್ನ ಸ್ವಾಮಿನಿಷ್ಠೆಯನ್ನು ತೋರಲು, ಭಕ್ತಿ ಪ್ರಾಧಾನ್ಯತೆ ಮೆರೆಯಲು, ವ್ಯಕ್ತಿ ಕೇಂದ್ರಿತಗೊಳಿಸಲು ಒಂದೆರೆಡೇ ಪ್ರಸಿದ್ದರ ಹೆಸರನ್ನ ನೂರಾರು ಬಾರಿ ಜಪಿಸಿ ಕೃತಾರ್ಥವಾಗುತ್ತದೆ.ಲೇಖಕರು, ಒಬ್ಬ ಸಾಮಾನ್ಯ ಕಾರ್ಯಕರ್ಥನ ಹೆಸರನ್ನ ಸರಿಯಾಗಿ ಬಳಸದೆ ಇರುವುದು ಸಹ ಚಳುವಳಿಯೊಂದಿಗಿನ ಆತನ ಶ್ರಮವನ್ನು ಅಣಕಿಸಿದಂತೆಯೇ ಸರಿ.ಒಟ್ಟಾರೆಯಾಗಿ ಅವರು ಕರ್ನಾಟಕ ದಲಿತ ಚಳುವಳಿಯನ್ನ ಲೇಖಕರು ನರ‍್ವಹಿಸಿದ ಹುದ್ದೆಗೆ ತಕ್ಕಂತೆ ಆದಷ್ಟು ಭೌದ್ಧಿಕ ಕಸರತ್ತನ್ನಾಗಷ್ಟೇ ನೋಡಿದ್ದಾರೆ.ದಸಂಸವನ್ನು ಪ್ರಬುದ್ದರ, ಸಾಹಿತಿ, ಚಿಂತಕರ ಪಡಸಾಲೆಯಲ್ಲಷ್ಟೆ ಇಟ್ಟು ಸಾಮಾನ್ಯರ ಬೆವರ ಹನಿಯನ್ನ, ಹೊಲ ಮನೆ ಕೆಲಸ ಬಿಟ್ಟು ಚಳುವಳಿಗೆ ಹೆಗಲುಕೊಟ್ಟವರ ಕಡೆಗೆ ಅವರ ನೋಟವಿಲ್ಲ. ಅವರದ್ದೇನಿದ್ದರು ಅಧಿಕೃತಗೊಳಿಸಿಕೊಳ್ಳುವ ಕಡೆಗಷ್ಟೆ ಗ್ಯಾನ.

ಗುರುಪ್ರಸಾದ್ ಕಂಟಲಗೆರೆ, ಕವಿ, ಕಥೆಗಾರ, ವಿಮರ್ಶಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular