ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಎಲೆಕ್ಟ್ರಿಕ್ ಬಸ್ ಅಪಘಾತದಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಂಟಾಘರ್ ಮತ್ತು ಟಾಟ್ ಮಿಲ್ ಚೌರಾಹಾ ನಡುವೆ ನಡೆದ ಅಪಘಾತ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಲ್ಲಿ ಮೂರು ಕಾರುಗಳು ಮತ್ತು ಹಲವಾರು ಬೈಕ್ ಗಳು ಜಖಂಗೊಂಡಿದ್ದು ಪಕ್ಕದಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಬಸ್ ದುರಂತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಕಾನ್ಪುರ ಬಸ್ ಅಪಘಾತದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದ್ದು ಕುಟುಂಬದ ಸದಸ್ಯರು ದುಃಖದಲ್ಲಿ ಮುಳುಗಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ರಾಷ್ಟ್ರಪತಿಗಳು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ, ಕಾನ್ಪುರದಿಂದ ರಸ್ತೆ ಅಪಘಾತದ ದುಃಖದ ಸುದ್ದಿ ಬಂದಿದೆ. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.