ಸಂಸ್ಕೃತ ಭಾಷೆಗೆ ಪ್ರಾಚೀನ ಇತಿಹಾಸವಿದ್ದರೂ ಅದು ಪರಾವಂಬಿ ಭಾಷೆಯಾಗಿ ಮಾತ್ರ ಇಂದು ಉಸಿರಾಡುತ್ತಿದೆ. ಭಾಷೆಯೊಂದರ ಉಸಿರಿಗೆ ಉಸಿರು ಸೇರಿದಾಗಲೇ ಅದು ಜೀವಂತ ಭಾಷೆಯಾಗಿ ಉಳಿಯಲು ಸಾಧ್ಯ. ಕಬ್ಬಿಣದ ಕಟ್ಟು ಹಾಕಿದ ಮೇಲೆ ಆ ಭಾಷೆ ಬೆಳೆಯುವುದಾದರೂ ಹೇಗೆ? ಶಕ್ತಿಶಾಲಿ ಮಾಧ್ಯಮವಾಗುವುದಾದರೂ ಹೇಗೆ? ಸಂಸ್ಕೃತ ದೇವಭಾಷೆಯೆಂದು ಕರೆದು ಆ ಭಾಷೆಯ ಬೆಳವಣಿಗೆಗೆ ಅಡ್ಡಿಪಡಿಸಿದವರ ಮನಸ್ಸು ಎಷ್ಟು ಜಡ್ಡುಗಟ್ಟಿತ್ತು ಎಂಬುದನ್ನು ತೋರಿಸುತ್ತದೆ.
ಹತ್ತನೇ ಶತಮಾನಕ್ಕೂ ಹಿಂದೆ ಸಂಸ್ಕೃತ ಜನರಾಡುವ ಭಾಷೆಯಾಗಿತ್ತೇ? ಜನರಾಡುವ ಭಾಷೆಯಾಗಿದ್ದರೆ ಯಾಕೆ ವಿಭಿನ್ನ ಜನ ಸಮುದಾಯಗಳ ನಡುವೆ ಅದು ವಿಸ್ತಾರ ಪಡೆದುಕೊಳ್ಳಲಿಲ್ಲ. ಈ ಬಗ್ಗೆ ವಿಮರ್ಶಕರು, ಭಾಷಾ ತಜ್ಞರು ಸಂಶೋಧನೆ ಕೈಗೊಂಡಂತೆ ಕಾಣುತ್ತಿಲ್ಲ. ಆದರೆ ಸಂಸ್ಕೃತ ಪ್ರಾಚೀನ ಶಾಸ್ತ್ರೀಯ ಭಾಷೆ ಎಂತಲೂ, ಕನ್ನಡಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸ ಇರುವ ಬಗ್ಗೆ ನಮಗೆ ತಿಳಿದುಬರುತ್ತದೆ.
ಸಂಸ್ಕೃತ ಜನರು ಬಳಸುವ ಭಾಷಾ ಮಾಧ್ಯಮವಾಗಿದ್ದರೆ, ಅದು ಒಂದಲ್ಲ ಒಂದು ರೀತಿಯಲ್ಲಿ ಜನರ ನಡುವೆ, ಜನರ ಮನಸ್ಸಿನಲ್ಲಿ ಉಳಿದುಕೊಂಡಿರುತ್ತಿತ್ತು. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯ ಅಗ್ರಹಾರವೊಂದರಲ್ಲಿ ಮಾತ್ರ ಸಂಸ್ಕೃತ ಭಾಷೆಯನ್ನು ಆಡುವವರು ಸಿಗುತ್ತಾರೆ. ಬೇರೆ ಎಲ್ಲಿಯೂ ಕಾಣಬರುವುದಿಲ್ಲ. ಆದರೆ ಕರ್ನಾಟಕವೂ ಸೇರಿ ದೇಶಾದ್ಯಂತ ಸಂಸ್ಕೃತ ವಿವಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
ಜನರ ಆಡುವ ಸರಳ ಭಾಷೆ ಕನ್ನಡ ಬೆಳೆಸುವ ಮತ್ತು ಅಭಿವೃದ್ಧಿಪಡಿಸುವುದನ್ನು ಬಿಟ್ಟು ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ಆರಂಭಿಸಿದಂತೆ ಸಂಸ್ಕೃತ ಕಲಿತ ಬ್ರಾಹ್ಮಣರಿಗಾಗಿ ಸಂಸ್ಕೃತ ವಿವಿ ಸ್ಥಾಪನೆಗೆ ಬಿಜೆಪಿ ಸರ್ಕಾರ 300 ಕೋಟಿ ರೂಗಳಿಗೂ ಹೆಚ್ಚು ಹಣ ಬಿಡುಗಡೆ ಮಾಡಿರುವುದು ಮತ್ತು ಮಾಗಡಿ ಬಳಿ ಜಮೀನನ್ನು ಗುರುತಿಸಿರುವುದು ಸರ್ಕಾರ ಯಾರ ಪರವಾಗಿ ಇದೆ ಎಂಬುದು ತಿಳಿಯುತ್ತದೆ.
ಹಿಂದಿ ಮತ್ತು ಕನ್ನಡ ಭಾಷೆಯ ಕೊಂಬೆಗಳಲ್ಲಿ ಸಂಸ್ಕೃತ ಭಾಷೆ ಆಶ್ರಯ ಪಡೆಯುತ್ತಿದೆ. ಹೀಗಾಗಿ ಸಂಸ್ಕೃತ ಭಾಷೆ ಪರಾವಲಂಬಿ ಸಸ್ಯದಂತೆ ಗೋಚರಿಸುತ್ತಿದೆ. ಅಂದರೆ ಸಂಸ್ಕೃತ ಭಾಷೆ ಸ್ವತಂತ್ರವಾಗಿ ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಅನಿವಾರ್ಯವಾಗಿ ಅದು ಬೆಳೆಯಬೇಕೆಂದರೆ ಬೇರೊಂದು ಭಾಷೆಯ ಆಶ್ರಯವನ್ನು ಪಡೆಯಬೇಕಾಗಿದೆ. ಸಂಸ್ಕೃತ ಭಾಷೆಯನ್ನು ಶುದ್ಧವಾಗಿ ಉಚ್ಛರಿಸಬೇಕೆಂಬ ಮಡಿವಂತಿಕೆಯಿಂದಲೇ ಸಂಸ್ಕೃತ ಭಾಷೆ ತನ್ನ ಸ್ವಂತ ಅಸ್ತಿತ್ವ ಕಳೆದುಕೊಂಡಿದೆ. ಹಾಗೆಯೇ ಸಂಸ್ಕೃತ ಮತ್ತೊಂದು ಭಾಷೆಯಲ್ಲಿ ತನ್ನ ಬೇರುಗಳನ್ನು ಬೆಳೆಯಲು ಬಿಟ್ಟು ಮುನ್ನಗ್ಗಲು ಯತ್ನಿಸುತ್ತಿದೆ.
ದೇಶದಲ್ಲಿ ಸಂಸ್ಕೃತ ಭಾಷೆ ಮಾತನಾಡುವವರು ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು. ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಸಂಸ್ಕೃತ ವಿವಿಗಳು ಬೇಕೋ, ಬೇಡವೋ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಜೊತೆಗೆ ದುಂದು ವೆಚ್ಚಕ್ಕೂ ಕಡಿವಾಣ ಹಾಕಲು ಅನುಕೂಲವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ರಾಜ್ಯದಲ್ಲಿ ಅಥವಾ ದೇಶದಲ್ಲೇ ಆಗಲಿ ಯಾವ ಭಾಷೆಯನ್ನು ಆಡುವವರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಅಧ್ಯಯನ ಮಾಡಿ ನಂತರ ಯಾವುದೇ ಕ್ರಮ ಬೇಕಾದರೂ ತೆಗೆದುಕೊಳ್ಳಬಹುದು.
ರಾಜ್ಯದಲ್ಲಿ ಲಂಬಾಣಿ, ತುಳು ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಆ ಸಮುದಾಯಗಳ ಮೂಲಕ ಹೊರಹೊಮ್ಮುವ ಪ್ರತಿಭೆಗಳಿಗೆ ಅವರದೇ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ರಾಜ್ಯದಲ್ಲಿ ಸಂಸ್ಕೃತ ಮಾತನಾಡುವವರಿಗಿಂತ ಲಂಬಾಣಿ ಮತ್ತು ತುಳು ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಈ ಎರಡೂ ಸಮುದಾಯಗಳಿಗೆ ಪ್ರತ್ಯೇಕ ಲಂಬಾಣಿ ವಿಶ್ವವಿದ್ಯಾಲಯ ಮತ್ತು ತುಳು ವಿಶ್ವವಿದ್ಯಾಲಯ ಆರಂಭಿಸಿದರೆ ಆ ಸಮುದಾಯದ ಜ್ಞಾನ, ತಿಳುವಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಂತೆ ಆಗುತ್ತದೆ.
ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಬುಡಕಟ್ಟು ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರೆ ಆ ಸಮುದಾಯದ ಪ್ರತಿಭೆಗಳು ಹೊರಹೊಮ್ಮಲು ಅನುಕೂಲಮಾಡಿಕೊಟ್ಟಂತೆ ಆಗುತ್ತದೆ. ಇದೆಲ್ಲವನ್ನೂ ಪರಿಗಣಿಸದೆ ವಾಸ್ತವ ಸಂಗತಿ ಗಳನ್ನು ಮುಚ್ಚಿಟ್ಟು ತಮಗೆ ಬೇಕಾದವರನ್ನು ಮೆಚ್ಚಿಸಲು ಇಂತಹ ಹುಚ್ಚು ಸಾಹಸಕ್ಕೆ ಕೈಯಾಕುವುದರಿಂದ ನಯಾ ಪೈಸೆ ಅನುಕೂಲವಾಗುವುದಿಲ್ಲ. ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಕರೆತರುವ ಹುಚ್ಚುತನವನ್ನು ಬಿಟ್ಟು ನಿಜವಾಗಿಯೂ ಕಾಳಜಿ ಇದ್ದರೆ ತುಳು ಮತ್ತು ಲಂಬಾಣಿ ಜಮುದಾಯಕ್ಕೆ ಎರಡು ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು. ಅಷ್ಟೇ ಅಲ್ಲ ದಲಿತ ವಿಶ್ವವಿದ್ಯಾಲಯವನ್ನು ಆರಂಭಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಸರ್ಕಾರ ಈ ದಿಕ್ಕಿನತ್ತ ಹೆಜ್ಜೆ ಹಾಕಲಿ.
ಕೆ.ಈ.ಸಿದ್ದಯ್ಯ, ತುಮಕೂರು