ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸುವ ಕುರಿತು ಕುಮಾರ್ ನಾಯಕ್ ನೇತೃತ್ವದ ವರದಿಯನ್ನು ಬಹಿರಂಗಪಡಿಸಬೇಕು. ಅವಧಿ ಹೆಚ್ಚಳದಿಂದ ನಮ್ಮಂತೆಯೇ ಕೆಲಸ ಮಾಡುತ್ತಿರುವ ಅರ್ಧದಷ್ಟು ಮಂದಿಗೆ ಉದ್ಯೋಗಕ್ಕೆ ಕುತ್ತು ಬರಲಿದೆ. ಹೀಗಾಗಿ ರಾಜ್ಯ ಸರ್ಕಾರ ಈಗ ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಷ್ಟ್ರಪತಿಗಳಿಗೆ ದಯಾ ಮರಣ ನೀಡುವಂತೆ ಪತ್ರ ಬರೆಯುತ್ತೇವೆ ಎಂದು ಧರಣಿನಿರತ ಅತಿಥಿ ಉಪನ್ಯಾಸಕರು ಹೇಳಿದ್ದಾರೆ.
ಸರ್ಕಾರ ಕೆಲ ಮಾನದಂಡಗಳನ್ನು ಇಟ್ಟುಕೊಂಡು ಯುಜಿಸಿ ಜೊತೆಗೆ ಐದು ವರ್ಷ ಸಲ್ಲಿಸಿದ್ದರೆ ಅಂಥ ಅತಿಥಿ ಉಪನ್ಯಾಸಕರಿಗೆ 13 ರಿಂದ 32 ಸಾವಿರಕ್ಕೆ ಗೌರವಧನ ಹೆಚ್ಚಿಸಿದೆ. ಜೊತೆಗೆ 8 ಗಂಟೆ ಅವಧಿಗೆ ಬೋಧನೆ ಮಾಡುತ್ತಿದ್ದ ಬದಲಿಗೆ 15ಗಂಟೆಗೆ ಏರಿಕೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ 9 ಸಾವಿರದಷ್ಟು ಅತಿಥಿ ಉಪನ್ಯಾಸಕರಿಗೆ ಕುತ್ತು ಬರಲಿದೆ ಎಂದು ಧರಣಿನಿರತರು ತಿಳಿಸಿದರು.
ಸರ್ಕಾರದ ನಿರ್ಧಾರ ಮೋಸ/ವಂಚನೆಯಿಂದ ಕೂಡಿದೆ. ಹಾಗೆ ನೋಡಿದರೆ ನಮಗೆ 60 ಸಾವಿರ ಗೌರವಧನ ನೀಡಬೇಕು. ಹೆಚ್ಚುವರಿ ಕೆಲಸಕ್ಕೆ ನೀಡುವ ಗೌರವಧನ ಸಾಕಾಗುವುದಿಲ್ಲ. ಮತ್ತೆ ಜೀತಕ್ಕೆ ದೂಡಿದಂತೆ ಆಗುತ್ತದೆ. ವಿಜ್ಞಾನ ಉಪನ್ಯಾಸಕರಿಗೆ ವಾರಕ್ಕೆ 20 ಅವಧಿ ಕೆಲಸ ಮಾಡಬೇಕು. ಸರ್ಕಾರದ ಈ ತಂತ್ರ ಸುಮಾರು 9 ಲಕ್ಷ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸುವ ತಂತ್ರವಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ದಯಾ ಮರಣಕ್ಕೆ ಅನುಮತಿ ನೀಡಿ:
ಅತಿಥಿ ಉಪನ್ಯಾಸಕರು ನಾಗರಿಕ ಹಕ್ಕುಗಳೊಂದಿಗೆ ಘನತೆಯಿಂದ ಬದುಕುವ ಹಕ್ಕನ್ನು ಗೌರವಿಸಬೇಕು. ಪ್ರತಿಯೊಬ್ಬರಿಗೂ ನಾಗರಿಕ ಸೌಲಭ್ಯವನ್ನು ಕಲ್ಪಿಸಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಊಟ ಮಾಡಲು, ಬಟ್ಟೆ ಖರೀದಿಗೂ ಕಷ್ಟವಾಗುತ್ತಿದೆ. ಹಾಗಾಗಿ ದಯಾ ಮರಣ ಕೊಡಿ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇವೆ ಎಂದು ಒತ್ತಾಯಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ಸಂವಾದ ನಡೆಸುತ್ತಿಲ್ಲ. ನಮ್ಮ ಅಹವಾಲುಗಳನ್ನು ಕೇಳುತ್ತಿಲ್ಲ. ಕಾಲಮಿತಿಯೊಳಗೆ ವರದಿ ಅಂತ ಹೇಳಿ ಕುಮಾರ್ ನಾಯಕ್ ಅವರಿಂದ ವರದಿಯನ್ನು ಬೇಗ ತರಿಸಿಕೊಳ್ಳಲಾಗಿದೆ. ಹಾಗಾಗಿ ಅದರಲ್ಲಿ ಏನಿದೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಕುಮಾರ್ ನಾಯಕ್ ನೀಡಿರುವ ವರದಿ ಬಹಿರಂಗಗೊಳಿಸುವ ಜೊತೆಗೆ ಸಚಿವ ಸಂಪುಟದ ಮುಂದೆಯೂ ತರಬೇಕು. ಚರ್ಚೆ ಆಗಬೇಕು. ಉಪಸಮಿತಿಗಳನ್ನು ರಚಿಸಬೇಕು. ಇದ್ಯಾವುದನ್ನೂ ಮಾಡಿಲ್ಲ. ಇದರಿಂದ ಬೇಸತ್ತಿರುವ ಅತಿಥಿ ಉಪನ್ಯಾಸಕಿಯರು ತಾಯ್ತನವನ್ನೂ ಮುಂದೂಡುತ್ತಾ ಬಂದಿದ್ದಾರೆ. ಇದು ಹಕ್ಕುಗಳ ಉಲ್ಲಂಘನೆಯಾಗಿದೆ. ಚರ್ಚಿಸುವ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳುತ್ತೇವೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿ.ಕೆ.ನಾಗಣ್ಣ ಹೇಳಿದ್ದಾರೆ.