ಲೀಟರ್ ನಂದಿನಿ ಹಾಲಿನ ಬೆಲೆಯನ್ನು ಮೂರು ರೂಪಾಯಿ ಹೆಚ್ಚಳ ಮಾಡುವಂತೆ ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಕಳೆದ ಗುರುವಾರ ಸೇರಿದ್ದ ಕೆಎಂಎಫ್ ಮಹಾಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳದ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದರೆ ಪ್ರತಿ ಲೀಟರ್ ನಂದಿನಿ ಹಾಲಿನ (ಟೋನ್ಡ್ ಹಾಲು) ದರ 3 ರೂಪಾಯಿ ಹೆಚ್ಚಳವಾಗಲಿದೆ. ಈಗ ಪ್ರತಿ ಲೀಟರ್ ಹಾಲಿಗೆ 37 ರೂಪಾಯಿ ಇದ್ದು ಕೆಎಂಎಫ್ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಪ್ರತಿ ಲೀಟರ್ ನಂದಿನಿ ಹಾಲಿನ ದರ 40 ರೂಗೆ ಹೆಚ್ಚಳವಾಗಲಿದೆ.
ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳದ ಪ್ರಕಾರ ನಂದಿನಿ ಹಾಲಿನ ಬೆಲೆ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ 2.5 ರೂ ಹೆಚ್ಚುವರಿ ಲಾಭಾಂಶ ದೊರೆಯಲಿದೆ. ಪ್ರಸ್ತಾವನೆಗೆ ಒಪ್ಪಿಗೆ ದೊರೆತರೆ ಹಾಲು ಒಕ್ಕೂಟಗಳಿಗೆ ಪ್ರತಿ ಲೀಟರ್ ಗೆ 50 ಪೈಸೆ ದೊರೆಯಲಿದೆ.
ಪ್ರಸ್ತುತ ಪ್ರತಿ ಲೀಟರ್ ಹಾಲನ್ನು 37 ರೂಪಾಯಿಗೆ ಖರೀದಿಸಲಾಗುತ್ತಿದೆ. ಹಾಗಾಗಿ ಎಲ್ಲಾ ಹಾಲು ಒಕ್ಕೂಟಗಳು ಹಾಲಿನ ದರದಲ್ಲಿ ಪರಿಷ್ಕರಣೆ ಮಾಡಬೇಕೆಂದು ಅವಿರೋಧವಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಾವು ಈಗಾಗಲೇ ಬೆಲೆ ಹೆಚ್ಚಳ ಮಾಡಿ ತೀರ್ಮಾನಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಾವು ಬೇಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತೇವೆ. ಹಾಲಿನ ದರ ಪರಿಷ್ಕರಣೆಗೆ ಒಪ್ಪಿಗೆ ಪಡೆಯುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.


