ಅಮ್ಮ ಮತ್ತು ನಾನು ಮುತ್ತುಗದ ಎಲೆಗಳನ್ನು ಕಿತ್ತುತರಲು ಮೂರು ಕಿಲೋ ಮೀಟರ್ ಗು ಹೆಚ್ಚು ದೂರ ನಡೆದೇ ಹೋಗುತ್ತಿದ್ದೆವು. ಹಟ್ಟಿಯ ಊರ ಮುಂದಿನ ಬೆವಿನ ಮರವನ್ನು ದಾಟಿ ಎಡಕ್ಕೆ ತಿರುಗಿಕೊಳ್ಳುತ್ತದಂತೆಯೇ ಮಣ್ಣಿನ ರಸ್ತೆ, ನಂತರ ಸ್ವಲ್ಪ ದೂರ ಸೀಳುದಾರಿಯಲ್ಲಿ ಸಾಗಬೇಕಿತ್ತು. ನಂತರ ಹೊಲಗಳಲ್ಲಿ ಅಡ್ಡಡ್ಡಾ ಹೋಗಿ ಮುತ್ತುಗದ ಎಲೆಗಳನ್ನು ಕಿತ್ತು ಗೋಣಿ ಚೀಲಗಳಿಗೆ ತುಂಬಿ ಆ ಚೀಲವನ್ನು ಹೇಗಲ ಮೇಲೆ ಇರಿಸಿ ಎಡಭುಜದ ಕಡೆ ಗೋಣಿ ಚೀಲದ ಬಾಯಿಯನ್ನು ಹಿಡಿದುಕೊಂಡು ಮತ್ತೊಂದು ಮುತ್ತುಗದ ಗಿಡದ ಬಳಿ ಹೋಗುತ್ತಿದ್ದೆವು.
ಮುತ್ತಗದ ಗಿಡಕ್ಕೆ ಹತ್ತುತ್ತಿದ್ದ ನನ್ನ ಅಮ್ಮ ಮೇಲಿನಿಂದಲೇ ಹೇಳುತ್ತಿದ್ದಳು. ಅಲ್ಲೊಂದು ಬಿದ್ದಿದೆ. ಇಲ್ಲೊಂದು ಬಿದ್ದಿದೆ. ರೋಜಿ ಪೊದೆ ಐತೆ ಉಸಾರು, ಕಡ್ಡಿ ತಕ್ಕೊಂಡು ಕೆಳೀಕೆ ಕೆಡವು. ಆಮೇಲೆ ಗೋಣಿಚೀಲದಲ್ಲಿ ಹಾಕ್ಕೊ ಅನ್ನುತ್ತಿದ್ದಳು. ಮೂರು ಟಿಸಿಲುಗಳಾಗಿ ನಳನಳಿಸುತ್ತಿದ್ದ ಮುತ್ತಗದ ಎಲೆಗಳನ್ನು ವೈನಾಗಿ ಮುರಿದುಕೊಳ್ಳಬೇಕಿತ್ತು. ಮೂರು ಎಲೆಗಳ ಸೇರಿದ (ಸಂಗಮ) ಕಣ್ಣಿಗೆ ಮುರಿಯಬೇಕಿತ್ತು. ಇದು ಕಲಿಕೆಯಿಂದ ಬಂದ ವಿದ್ಯೆ ಆಗಿರಲಿಲ್ಲ.
ಬೇಸಿಗೆ ಕಾಲದಲ್ಲಿ ಮುತ್ತುಗದ ಮರ ಕಂಡರೆ ಸಾಕು, ಬಿಸಲ ಜಳಕ್ಕೆ ಮುತ್ತುಗದ ಮರದ ಎಲೆಗಳು ಚಿನ್ನದಂತೆ ಹೊಳೆಯುತ್ತಿದ್ದವು. ಎಳೆಯ ಎಲೆಗಳನ್ನು ದೂರದಿಂದ ನಿಂತು ನೋಡುತ್ತಿದ್ದರೆ ಪಳಪಳ ಹೊಳೆಯುತ್ತಿದ್ದವು. ಸೂರ್ಯನೇ ಆ ಎಲೆಗಳ ಸೂರ್ಯ ಕಿರಣಗಳಿಂದ ಜಳಕ ಮಾಡಿದಂತೆ ಕಾಣುತ್ತಿದ್ದವು. ಹತ್ತಿರ ಹೋಗುತ್ತಿದ್ದಂತೆಯೇ ಸೂರ್ಯಕಿರಣಗಳಿಂದ ಸ್ನಾನ ಮಾಡಿರುವುದು ಗೊತ್ತಾಗುತ್ತಲೇ ಇರಲಿಲ್ಲ. ಆದರೆ ಸ್ವಲ್ಪ ಕಪ್ಪಗಿರುವ ಎಲೆಗಳು ಬಲಿತ ಎಲೆಗಳು ಎಂಬುದು ಮೌಖಿಕ ಪರಂಪರೆಯ ತಿಳುವಳಿಕೆ.
ನನ್ನ ಹಟ್ಟಿಯಿಂದ ದಕ್ಷಿಣ ದಿಕ್ಕಿಗೆ ಹೆಚ್ಚು ಮುತ್ತುಗದ ಮರಗಳು ಇದ್ದವು. ಹಟ್ಟಿ ಬಿಡುತ್ತಿದ್ದಂತೆಯೇ ಎದುರಿಗೆ ಸಿಕ್ಕವರು ‘ಎಲ್ಲಿಗೋ ಹೋಗಂಗೈತೆ’ ಗೋಣಿಚೀಲ ಹಿಡ್ಕಂಡ್ ಹೋಗ್ತಿದ್ದೀರಾ ಅಂದ್ರೆ ಮುತುಗದ ಎಲೆಗೇ ಇರ್ಬೇಕು ಅಂತಿದ್ರು. ಅವರಿಗೆ ಅಮ್ಮನೇ ಉತ್ತರ ನೀಡುತ್ತಿದ್ದಳು. ಕೆರೆ ಕೋಡಿಯ ಪಕ್ಕದಲ್ಲೇ ಬೆನಕಪ್ಪಗಳ ರೀತಿಯಲ್ಲಿ ಕಲ್ಲಿನಿಂದ ಮಾಡಿದ ಮಾರಮ್ಮಳ ಸಣ್ಣ ಗುಡಿಯ ಹಿಂದಿನಿಂದ ಹೋಗುತ್ತಿದ್ದೆವು. ಎಂದೂ ಸಹ ಕೆಲಸಕ್ಕಾಗಿ ಕೈಮುಗಿಯುತ್ತಿರಲಿಲ್ಲ. ಗಾಳೇರು, ಬೋರಜ್ಜನೋರು ನೀರಾವರಿಗುಂಟ ಹೋಗುವುದರ ಜೊತೆಗೆ ಅನಗೊನೆ ಸೊಪ್ಪ ಸಿಕ್ಕರೆ ಕಿತ್ತುಕೊಂಡು ಅಮ್ಮ ಮಡಲಿಗೆ ಹಾಕಿಕೊಳ್ಳುತ್ತಿದ್ದಳು. ನಾನು ಕಿತ್ತು ಕೊಟ್ಟ ಅನಗೊನೆ ಸೊಪ್ಪನ್ನು ಹಳ್ಳಿಯ ಹೆಂಗಸರು ಸೆರಗಿನಿಂದ ಮಾಡಿಕೊಂಡ ಆ ಮಡಿಲಿಗೆ ಹಾಕಿಕೊಂಡರೆ ಎಲ್ಲಿಯೂ ಚೆಲ್ಲುತ್ತಿರಲಿಲ್ಲ.
ನಿಗಿನಿಗಿ ಬೆಂಕಿಯಂಥ ಬಿಸಿಲು. ನಾವು ಮುತ್ತುಗದ ಗಿಡಗಳನ್ನು ಹುಡುಕಿಕೊಂಡು ಹೋಗುತ್ತಿದ್ದರೆ, ಬಾರೆಯ ಮೇಲೆ, ದಿಣ್ಣೆಯ ಮೇಲೆ ಸೂರ್ಯನ ಬಿಸಿಲು ಕುಣಿಯುತ್ತಿದೆ ಎಂಬಂತೆ ಕಾಣುತ್ತಿತ್ತು. ಹೊಸಬಾವಿ, ಬಾಲಪ್ಪನ ಕುಂಟೆ, ಚಿಕ್ಕೆಂಪಣ್ಣೋರು ಹೊಲ, ಅಗಸರ ಹೊಲ, ವೀರ್ಲಗೊಂದಿ ನರಸಪ್ಪನ ಜಮೀನು, ಕುಂಟ ಗೋವಿಂದನ ಜಬ್ಬಲು, ದೋಳುಗುಡ್ಡದ ಸಮೀಪ, ನಾಯಕನ ಕುಂಟೆ ಹೊಲ, ಕೃಷ್ಣಪ್ಪನ ಮಾವಿನ ತೋಪು, ಮಾದಯ್ಯನ ಗುಟ್ಟೆ ಹೀಗೆ ಎಲ್ಲಾ ಕಡೆ ತಿರುಗಿ ಸಿಕ್ಕಷ್ಟು ಮುತ್ತುಗದ ಎಲೆಯನ್ನು ತರುತ್ತಿದ್ದೆವು. ನಮ್ಮಂತೆ ಇತರರೂ ಮುತ್ತುಗದ ಎಲೆ ಸಂಗ್ರಹಕ್ಕೆ ಬರುತ್ತಿದ್ದರು. ಇಲ್ಲಿ ಪೈಪೋಟಿ ಇರಲಿಲ್ಲ. ಯಾರಿಗೆ ಸಿಗುತ್ತೋ ಅವರಿಗೆ ಸಿಗಲಿ ಎಂಬ ಭಾವನೆ ಇತ್ತು. ಇಲ್ಲಿ ಕೃತ್ರಿಮಕ್ಕೆ ಜಾಗವೇ ಇರಲಿಲ್ಲ. ಯಾಕೆಂದರೆ ಮುತ್ತುಗದ ಎಲೆ ಕಿತ್ತುಕೊಂಡು ಹೋಗಲು ಬಡವರೇ ಅದರಲ್ಲಿ ಹೆಂಗಸರೇ ಬರುತ್ತಿದ್ದರು.
ಹೊಲದ ಬಯಲಲ್ಲಿ ಬಿಸಿಲು ನಿಗಿನಿಗಿ ಹೊಳೆಯುತ್ತಿದ್ದರೆ ನಮಗೆ ಅದರ ಬಗ್ಗೆ ಪರಿವೆಯೇ ಇರಲಿಲ್ಲ. ನಮ್ಮ ಗುರಿ ಒಂದೇ ಆಗಿತ್ತು. ಅದು ಏನೆಂದ್ರ ಇವತ್ತು ಜಾಸ್ತಿ ಎಲೆ ಸಿಕ್ಕಿದರೆ ಸಾಕು ಎಂದು ಮನಸಿನೊಳಗೆ ಅಂದುಕೊಳ್ಳುತ್ತಿದ್ದೆವು. ಬಾಯಾರಿಕೆ ಆದರೆ ಕುಡಿಯಲು ಎಲ್ಲೂ ನೀರು ಸಿಗುತ್ತಿರಲಿಲ್ಲ. ಬಾಯಾರಿಕೆ ಕಳೆಯಬೇಕೆಂದರೆ ಮನೆಗೇ ಬರಬೇಕಿತ್ತು. ಎಂಟಾಣೆ, ಒಂದೈದು ರೂಪಾಯಿ ಎಂಗೋ ಜೀವನ ಸಾಗಿಸ್ಬಹುದು ಅಂತ ಹೇಳುತ್ತಿದ್ದಳು.
ಮುತ್ತುಗದ ಎಲೆ ಬೇಟೆಗೆ ಹೋದವರು ಗೋಣಿಚೀಲ ಮತ್ತು ಬೆಡ್ ಶೀಟ್ ಗಳಲ್ಲಿ ತುಂಬಿಕೊಂಡು ಮನೆಯ ಮುಂದಿನ ಮರಗಳಿಗೆ ಎಲೆಗಳನ್ನು ದಬ್ಬಳದಿಂದ ಹೂವಿನ ಹಾರದಂತೆ ಕಟ್ಟಿ ನೇತುಹಾಕುತ್ತಿದ್ದೆವು. ಮುತ್ತುಗದ ಎಲೆಗಳನ್ನು ಯಾವುದೇ ಸಾಕು ಪ್ರಾಣಿ ತಿನ್ನುತ್ತಿರಲಿಲ್ಲ. ಎಲೆಗಳು ಬಿಸಿಲಲ್ಲಿ ಚೆನ್ನಾಗಿ ಒಣಗಿದಾಗ, ಹೂವಿನಂತೆ ಪೋಣಿಸಿದ್ದ ಎಲೆಗಳನ್ನು ಬಿಡಿಬಿಡಿಯಾಗಿ ಬಿಳಿಸಿ, ನೀರು ತೆಳ್ಳಗೆ ಚಿಮುಕಿಸಿ ಭಾರವನ್ನು ಹೇರುತ್ತಿದ್ದೆವು. ಮುತ್ತುಗದ ಎಲೆಗಳ ಮೇಲೆ ರಾಗಿ ಕಲ್ಲನ್ನು ಇಟ್ಟು, ಎಲೆಗಳು ಹಸನುಗೊಳ್ಳುವಂತೆ (ಮಡಿಚಿಕೊಂಡಿರುವುದನ್ನು ಬಿಡಿಸುತ್ತಿದ್ದ ರೀತಿ) ಮಾಡುತ್ತಿದ್ದೆವು.
ಬಳಿಕ ಈಚಲ ಮರದ ತುಂಡೊಂದನ್ನು ಚನ್ನಾಗಿ ಒಣಗಿಸಿ ಅದನ್ನು ಚೆನ್ನಾಗಿ ಬಡಿದು ಕಡ್ಡಿಗಳನ್ನು ತಯಾರಿ ಮಾಡಿಕೊಳ್ಳುತ್ತಿದ್ದೆವು. ಈಚಲ ಗಿಡದ ಕಡ್ಡಿಗಳಿಂದ ಅಚ್ಚಿರುವ ಮುತ್ತುಗದ ಇಸ್ತ್ರಿದೆಲಗಳನ್ನು ಬ್ರಾಹ್ಮಣರು ಮುಟ್ಟುತ್ತಿರಲಿಲ್ಲ. ಈಚಲ ಮರದ ಕೆಳಗೆ ಮಜ್ಜಿಗೆ ಕುಡಿದರು ಹೆಂಡ ಕುಡ್ದಂಗೆ ಅಂತ ತಿಳುಕೊಂಡಿದ್ದಾರೋ ಏನೋ ಗೊತ್ತಿಲ್ಲ. ಈಚಲು ಕಡ್ಡಿಯಲ್ಲಿ ಅಚ್ಚಿರುವ ಎಲೆಯಲ್ಲಿ ಊಟ ಮಾಡಿದರೆ ನಾವು ಹೆಂಡ ಕುಡಿದಂತೆ ಆಗುತ್ತದೋ ಏನೋ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಆದ್ದರಿಂದ ನಾವು ಕೂಡ ಅಂಚಿಕಡ್ಡಿಯನ್ನು ಎರಡು ಓಳಾಗಿ ಸೀಲಿ ಇಸ್ತ್ರಿದೆಲೆಗಳನ್ನು ತಯಾರು ಮಾಡುತ್ತಿದ್ದೆವು. ಅಪ್ಪ ಕೂಡ ಒಮ್ಮೊಮ್ಮೆ ಎಲೆಗಳನ್ನು ಹಚ್ಚು ನಮಗೆ ಸಹಾಯ ಮಾಡುತ್ತಿದ್ದ. ಇಸ್ತ್ರಿದಲೆಗಳು ಸಂಪೂರ್ಣವಾಗಿ ಅಚ್ಚಿದ ಮೇಲೆ ಮತ್ತೆ ಎಲೆಗಳಲ್ಲಿರುವ ಒರಟು ಹೋಗುವುದಕ್ಕಾಗಿ ರಾಗಿ ಕಲ್ಲನ್ನು ಹೇರುತ್ತಿದ್ದೆವೆ.
ಇಸ್ತ್ರಿದೆಲೆಗಳು 10-15 ಕಟ್ಟುಗಳು ಆಗುತ್ತಿದ್ದಂತೆ ಅವುಗಳನ್ನು ಎರಡು ಪೆಂಡಿಗಳನ್ನಾಗಿ ಮಾಡಿ ಪಾವಗಡದ ಸೋಮವಾರ ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದೆವು. ಚಿಕ್ಕವನು ಅಂಬೋ ಕಾರಣಕ್ಕೆ ನನಗೆ 5 ಕಟ್ಟುಗಳುಳ್ಳ ಪೆಂಡಿಯೊಂದನ್ನು ಹೊರಿಸುತ್ತಿದ್ದಳು. ಅಮ್ಮ 8-10 ಕಟ್ಟುಗಳ ದೊಡ್ಡ ಪೆಂಡಿಯನ್ನು ಹೊರುತ್ತಿದ್ದಳು. ಇಬ್ಬರು ಪಾವಗಡದ ಸಂತೆಗೆ ನಡೆದೇ ಹೋಗಬೇಕಿತ್ತು. ಬಸ್ ಗಾಗಿ ಕಾಯುತ್ತ ಕೂರುವಂತೆ ಇರಲಿಲ್ಲ.
ಬಿಸಿಲನ್ನೂ ಲೆಕ್ಕಿಸದೆ ತಲೆ ಮೇಲೆ ಹಲವು ಕಟ್ಟುಗಳುಳ್ಳ ಪೆಂಡಿಗಳನ್ನು ಹೊತ್ತುಕೊಂಡು ಹೋಗಿ ನಾಗರಕಟ್ಟೆಯಿಂದ ಸ್ವಲ್ಪ ಮುಂಭಾಗಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದೆವು. ಆಗ ಒಂದು ಕಟ್ಟು ಬೆಲೆ 2.50ರೂ ಇತ್ತು. ಎಷ್ಟೋ ವರ್ಷಗಳ ನಂತರ 5 ರೂಪಾಯಿಗೆ ಒಂದು ಕಟ್ಟಿನಂತೆ ಮಾರಿದೆವು. ಅಮ್ಮ ದುಡ್ಡನ್ನು ನಾಲ್ಕೈದು ಪದರು ಇರುವ ಅಡಿಕೆ ಎಲೆ ಚೀಲದಲ್ಲಿ ಯಾವುದಾರೂ ಒಂದು ಪದರಿನೊಳಗೆ ಇಡುತ್ತಿದ್ದಳು. ನಂತರ ಜೋಪಾನವಾಗಿ ಮನೆಗೆ ಬರುತ್ತಿದ್ದೆವು. ಅಮ್ಮ ನನ್ನನ್ನು ಬಿಟ್ಟು ಇನ್ನಿಬ್ಬರು ಮಕ್ಕಳಿಗಾಗಿ ಬೆಂಡು-ಬೆತ್ತಾಸ ತೆಗೆದುಕೊಂಡು ಬರುತ್ತಿದ್ದಳು.
ಮುಂದುವರೆಯುವುದು (ಫೋಟೋ:ಕರಿಸ್ವಾಮಿ ಕೆಂಚನೂರು)
ಕೆ.ಈ.ಸಿದ್ದಯ್ಯ,