ಖಾಯಮಾತಿ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಂಟನೇ ದಿನವೂ ಧರಣಿ ಮುಂದುವರೆಸಿರುವ ಅತಿಥಿ ಉಪನ್ಯಾಸಕರಿಂದ ಸರ್ಕಾರದ ಮೌನ ನಡವಳಿಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ರಾಜ್ಯದಲ್ಲೆಡೆ ನಡೆಯುತ್ತಿರುವ ಧರಣಿಯ ಭಾಗವಾಗಿ ತುಮಕೂರಿನಲ್ಲೂ ಅತಿಥಿ ಉಪನ್ಯಾಸಕರು ಧರಣಿ ಮುಂದುವರೆಸಿದ್ದಾರೆ. ದಲಿತ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಸಾಹಿತ್ಯ ಪರಿಷತ್ ಸದಸ್ಯರು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಬಿಜೆಪಿ ಹೊರತುಪಡಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಧರಣಿಗೆ ಬೆಂಬಲ ನೀಡಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಿ ನ್ಯಾಯ ಕಲ್ಪಿಸುವಂತೆ ಒತ್ತಡ ಹೇರಿವೆ.
ಮಂಡಿ ಮತ್ತು ಪಾಕೆಟ್ ನಿಂದ ಕೊಡಿ ಅಂತ ಕೇಳುತ್ತಿಲ್ಲ – ಡಾ.ಶಿವಣ್ಣ ತಿಮ್ಲಾಪುರ
ದಿ ನ್ಯೂಸ್ ಕಿಟ್.ಇನ್ ಜೊತೆ ಮಾಹಿತಿ ಹಂಚಿಕೊಂಡು ಅತಿಥಿ ಉಪನ್ಯಾಸಕರ ಸಂಘದ ಸದಸ್ಯ ಡಾ.ಶಿವಣ್ಣ ತಿಮ್ಲಾಪುರ, ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮಂಡಿಯಿಂದಲೋ, ಉನ್ನತ ಶಿಕ್ಷಣ ಸಿಚಿವ ಅಶ್ವತ್ಥನಾರಾಯಣ ಅವರ ಪಾಕೇಟ್ ನಿಂದ ಹಣ ಕೊಡಿ ಎಂದು ಕೇಳುತ್ತಿಲ್ಲ. ನಾವು ಇಷ್ಟು ವರ್ಷಗಳು ಕಡಿಮೆ ವೇತನಕ್ಕೆ ಮಾಡಿರುವ ಸೇವೆಯನ್ನು ಪರಿಗಣಿಸಿ ಆ ಪಾಲನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರನ್ನು ದೆಹಲಿ ಸರ್ಕಾರ ಖಾಯಂ ಮಾಡಿದೆ. ಈ ಕ್ರಮ ಕೈಗೊಳ್ಳಲು ಯೋಗ್ಯತೆ ಇಲ್ಲವೆಂದರೆ ರಾಜ್ಯ ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿ ಸೇವಾ ಭದ್ರತೆ ನೀಡುರುವಂತೆ ನಮಗೂ ನೀಡಲಿ. ಆಂಧ್ರಪ್ರದೇಶ, ಹರ್ಯಾಣ, ಪಂಜಾಬ್, ಪಶ್ಚಿಮ ಬಂಗಾಳ, ಕೇರಳದಲ್ಲಿ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿಯಂತೆ ವೇತನ ನೀಡಿ ಸೇವಾ ಭದ್ರತೆ ನೀಡಲಾಗಿದೆ. ಅದನ್ನು ರಾಜ್ಯದಲ್ಲೂ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ಖಾಯಂ ಉಪನ್ಯಾಸಕರಿಗೆ ನೀಡುವ ಅರ್ಧಕ್ಕಿಂತ ಹೆಚ್ಚಿನ ವೇತನ ಕೊಡಬೇಕು ಎಂದು ನಿಯಮಾವಳಿಯಲ್ಲಿ ಹೇಳಿದೆ. ಅದರಂತೆ ವಾರದಲ್ಲಿ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರಿಗೆ 8 ಗಂಟೆ, ತಿಂಗಳಿಗೆ 32 ಗಂಟೆ ಪಾಠ ಮಾಡಲು ಅವಕಾಶ ನೀಡಿದೆ. ಅಂದರೆ ತಿಂಗಳಿಗೆ 57-60 ಸಾವಿರ ರೂ ಕೊಡಬೇಕು. ಆದರೆ ರಾಜ್ಯ ಸರ್ಕಾರಗಳು ನಮ್ಮ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಇದುವರೆಗೂ ಕಡಿಮೆ ವೇತನ ನೀಡಿ ಆಧುನಿಕ ಜೀತದಂತೆ ದುಡಿಸಿಕೊಂಡು ಬಂದಿವೆ ಎಂದು ದೂರಿದರು.
ವಿದ್ಯಾರ್ಥಿಗಳು ಕೂಡ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಾಗಾಗಿ ಅವರಿಗೆ ನಿಮ್ಮ ಸಿಲಬಸ್ ಪೂರ್ಣಗೊಳಿಸಿಕೊಡುವ ಜವಾಬ್ದಾರಿ ನಮ್ಮದು. ಆತಂಕಪಡುವ ಅಗತ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಸಾಂತ್ವನ ಹೇಳಿದ್ದೇವೆ. ಅಷ್ಟೇ ಅಲ್ಲ ನ್ಯಾಯ ಸಿಗುವವರೆಗೂ ಪ್ರತಿಭಟನೆಯಿಂದ ಬರುವುದಿಲ್ಲ. ನ್ಯಾಯ ಸಿಕ್ಕಿದ ಕೂಡಲೇ ಹಗಲು ರಾತ್ರಿಯಾಗಲಿ ನಿಮಗೆ ಸಿಲಬಸ್ ಪೂರ್ಣಗೊಳಿಸುತ್ತೇವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇರುವಂತೆ ಮನವಿ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಶೇಕಡ 30ರಷ್ಟು ಮಂದಿಯ ವಯೋಮಾನ ಮೀರಿದೆ. ಅವರು ಮತ್ತು ಅವರನ್ನೇ ನೆಚ್ಚಿಕೊಂಡಿರುವ ಕುಟುಂಬದ ಪರಿಸ್ಥಿತಿ ಏನು? 25 ವರ್ಷ ಸೇವೆ ಅಂದರೆ ಕಾಲು ಶತಮಾನ ಪಾಠ ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿರುವ ಇವರ ಭವಿಷ್ಯ ಮಂಕಾಗಿದೆ. ಅದರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಶೇ.10ರಷ್ಟು ಮಂದಿ 5 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಶೇ.50ರಷ್ಟು ಮಂದಿ 5-15 ವರ್ಷ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಶೇ.10ರಷ್ಟು ಮಂದಿ ಹೊಸದಾಗಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಹಿತವನ್ನೂ ಸರ್ಕಾರ ಕಾಪಾಡಬೇಕು. ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದರು.