ಹೊಸ ವರ್ಷದ ಉಡುಗೊರೆಯಾಗಿ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇಕಡ 50ರಷ್ಟು ಹೆಚ್ಚಿಸಲು ಒಡಿಶಾ ಸರ್ಕಾರ ಸೋಮವಾರ ನಿರ್ಧರಿಸಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೆಗೆದುಕೊಂಡಿರುವ ನಿರ್ಧಾರದಿಂದ ರಾಜ್ಯದ 33,038 ಕಿರಿಯ ಶಿಕ್ಷಕರಿಗೆ ಪ್ರಯೋಜನವಾಗಲಿದೆ.
ಮುಖ್ಯಮಂತ್ರಿಗಳ ಕಚೇರಿ ಪ್ರಕಾರ 13,324 ಗುತ್ತಿಗೆ ಶಿಕ್ಷಕರು ಮತ್ತು 19,714 ನಿಯಮಿತ ಶಿಕ್ಷಕರು ಶೇ.50ರಷ್ಟು ಹೆಚ್ಚುವರಿ ವೇತನವನ್ನು ಪಡೆಯಲಿದ್ದಾರೆ.
ಇದುವರೆಗೆ 7,400 ರೂ ನೀಡಲಾಗುತ್ತಿತ್ತು. ಒಡಿಶಾ ಸರ್ಕಾರದ ನಿರ್ಧಾರದಿಂದ ಕಿರಿಯ ಶಿಕ್ಷಕರ ವೇತನ 11,000 ರೂಗೆ ಏರಿಕೆಯಾಗಿದೆ. 9,200 ರೂ ಇದ್ದ ಸಾಮಾನ್ಯ ಕಿರಿಯ ಶಿಕ್ಷಕರ ವೇತನವನ್ನು 13,800 ರೂಗೆ ಹೆಚ್ಚಿಸಲಾಗಿದೆ.
ಈ ನಿರ್ಧಾರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ 168 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯನ್ನು ಹೊರಬೇಕಾಗುತ್ತದೆ.