ಕಳೆದ ವರ್ಷದ ಅಕ್ಟೋಬರ್ ನಲ್ಲಿ ಲಖಿಂಪುರಖೇರಿ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಸೋಮವಾರ 5 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ತೇನಿ ಪುತ್ರ ಅಶಿಶ್ ಮಿಶ್ರಾ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.
ಈಗಾಗಲೇ ಬಂಧಿತನಾಗಿರುವ ಅಶಿಶ್ ಮಿಶ್ರಾ ನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದ್ದಂತೆ ಪ್ರಕರಣದ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಚಾರ್ಜ್ ಶೀಟ್ ನಲ್ಲಿ ವೀರೇಂದ್ರ ಶುಕ್ಲಾ ಎಂಬ ಮತ್ತೊಬ್ಬ ವ್ಯಕ್ತಿಯ ಹೆಸರನ್ನು ಸೇರಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 201ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ವಕೀಲರು ಹೇಳಿದ್ದಾರೆ.
ಅಕ್ಟೋಬರ್ 3ರಂದು ನಡೆದ ಹತ್ಯಾಕಾಂಡದಲ್ಲಿ ನಾಲ್ವರು ರೈತರು, ಪತ್ರಕರ್ತ ಸೇರಿ 8 ಮಂದಿ ಹತ್ಯೆಗೈಯಲಾಗಿತ್ತು. ಅಶಿಶ್ ಮಿಶ್ರಾ ಮತ್ತು ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ ಅಂಕಿತ್ ದಾಸ್ ಸೇರಿ ಒಟ್ಟು 13 ಮಂದಿ ಆರೋಪಿಗಳಾಗಿದ್ದಾರೆ.
ಆರೋಪಿಗಳನ್ನು ಲಖಿಂಪುರಖೇರಿ ಜೈಲಿನಲ್ಲಿ ಇರಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ ಅಶಿಶ್ ಮಿಶ್ರಾ ಸಲ್ಲಿಸಿರುವ ಜಾಮೀನು ಅರ್ಜಿಗಳು ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇವೆ.
ಪೂರ್ವ ಯೋಜಿತ ಪಿತೂರಿಯ ಭಾಗವಾಗಿ ಹಿಂಸಾಚಾರದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಎಸ್ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ನಿರ್ಲಕ್ಷ್ಯ ಅಥವಾ ನಿರ್ಲಕ್ಷ್ಯತನದಿಂದ ಸಾವು ಸಂಭವಿಸಿಲ್ಲ ಮತ್ತು ಆರೋಪಿಗಳ ಕ್ರಮಗಳು ಉದ್ದೇಶಪೂರ್ವಕವಾಗಿ ಕೊಲ್ಲುವ ಉದ್ದೇಶದಿಂದ ಎಂದು ಎಸ್ಐಟಿ ವರದಿಯಲ್ಲಿ ಬರೆದಿದೆ.


