2023ರಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮೇಕೆದಾಟು ಅಪ್ಪಟ ಕುಡಿಯುವ ನೀರಿನ ಯೋಜನೆ. ಇದರಿಂದ 7 ಜಿಲ್ಲೆಗಳಿಗೆ ಕುಡಿಯುವ ನೀರು ದೊರೆಯಲಿದೆ. ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆಯೂ ಆಗಲಿದೆ ಎಂದು ಹೇಳಿದರು.
ಕುಡಿಯುವ ನೀರಿನ ಯೋಜನೆಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಈ ಯೋಜನೆ ಅನುಷ್ಠಾನದಿಂದ 2.5 ಕೋಟಿ ಜನರಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ ಮೇಕೆದಾಟು ಅಣೆಕಟ್ಟೆಯಲ್ಲಿ 62 ಟಿಎಂಸಿ ನೀರು ಸಂಗ್ರಹಿಸಿ ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ನೀರು ಕೊಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಆರಂಭಿಸುವಂತೆ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಗೆ ನಡುಕ ಶುರುವಾಗಿದೆ. ಇದನ್ನು ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಮಾಜಿ ಸಿಎಂ. ಕುಮಾರಸ್ವಾಮಿ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಮುಖಂಡರು ತೂಕ ಇಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕುರಿತು ದಾಖಲೆಗಳು ಇವೆ ಎಂದು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ಈಗಲೇ ಬಿಡುಗಡೆ ಮಾಡಿ. ಅದು ಬಿಟ್ಟು ಭೂತ ತೋರಿಸಬೇಡಿ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಇತ್ತು. ಆಗ ಏನು ಮಾಡದ ಕಾಂಗ್ರೆಸ್ ಈಗ ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ನಮಗೆ ರಾಜಕೀಯ ಗಿಮಿಕ್ ಮಾಡುವ ಅವಶ್ಯಕತೆ ಇಲ್ಲ ಎಂದು ಟೀಕಿಸಿದರು.
ಬಿಜೆಪಿ ತಮಿಳುನಾಡು ಬಿಜೆಪಿಯನ್ನು ಎತ್ತಿಕಟ್ಟುತ್ತಿದ್ದು, ರಾಜಕೀಯಕ್ಕಾಗಿ ಕ್ಯಾತೆ ಮಾಡುತ್ತಿದೆ. 2013ರಲ್ಲೇ ಡಿಪಿಆರ್ ಕಳಿಸಿದ್ದರೂ ಅದನ್ನು ಅನುಷ್ಟಾನಕ್ಕೆ ತರದೆ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ. 25 ಸಂಸದರಿದ್ದರೂ ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕೆ ಮಾಡುವುದು ತರವಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಖಾಸಗಿಯವರಿಗೆ ಕೊಡುತ್ತಿರುವುದರ ಹಿಂದೆ ಆರ್.ಎಸ್.ಎಸ್ ಹುನ್ನಾರ ಇದೆ. ಮತಾಂತರ ನಿಷೇಧದ ಹಿಂದೆಯೂ ಆರ್.ಎಸ್.ಎಸ್ ಕೈವಾಡವಿದೆ. ಪ್ರೀತಿಸಿ ಮದುವೆಯಾದವರನ್ನು ಬೇರ್ಪಡಿಸಿ ಶಿಕ್ಷೆ ಕೊಡುವುದು ಸಂವಿಧಾನ ವಿರೋಧಿಯಾಗಿದೆ ಎಂದರು.


