ಕೃಷಿ ಕಾನೂನುಗಳ ರದ್ದತಿಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ರೈತರ ಪ್ರತಿಭಟನೆ ಅಮಾನತುಗೊಳಿಸಲಾಗಿದೆ. ಅನ್ಯಾಯವಾದರೆ ಅದು ಮತ್ತೆ ಆರಂಭವಾಗಲಿದೆ ಎಂದು ಹರಿಯಾಣದ ಚಾರ್ಖಿ ದಾದ್ರಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಮತ್ತು ಎಂಎಸ್.ಪಿಗೆ ಖಾತರಿ ನೀಡಲು ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಇದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ಸರ್ಕಾರ ರೈತರು ಪ್ರತಿಭಟನೆ ನಿಲ್ಲಿಸಿದ್ದಾರೆ ಎಂದು ಭಾವಿಸಿದರೆ ಅದು ಸರಿಯಲ್ಲ. ಕೇವಲ ಅಮಾನತುಗೊಳಿಸಿದೆ. ರೈತರಿಗೆ ಅನ್ಯಾಯವಾದರೆ, ಭರವಸೆ ಈಡೇರಿಕೆಗೆ ವಿಳಂಬ ಮಾಡಿದರೆ ಆಂದೋಲನ ಮತ್ತೆ ಆರಂಭವಾಗುತ್ತದೆ ಎಂದರು.
ರೈತರ ಪರವಾಗಿ ಹೇಳಿಕೆ ನೀಡುತ್ತಿರುವುದರಿಂದ ತನ್ನ ಹುದ್ದೆಯಿಂದ ಕೆಳಗಿಳಿಯುವಂತೆ ಕೇಳಿದರೆ ಹೆದರುವುದಿಲ್ಲ. ನಾನು ಯಾವಾಗಲೂ ರೈತರ ಪರವಾಗಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜಮ್ಮು ಮತ್ತು ಕಾಶ್ಮೀರದಿಂದ ಬೇರೆ ರಾಜ್ಯಗಳಿಗೆ ರಾಜ್ಯಗಳಿಗೆ ರಾಜ್ಯಪಾಲರಾಗಿ ನೇಮಕ ಮಾಡಿದ ನಂತರ ಸತ್ಯಪಾಲ್ ಮಲಿಕ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಭಿವಾನಿಯ ದಡಮ್ ಮೈನಿಂಗ್ ವಲಯದಲ್ಲಿ ಭೂಕುಸಿತದಲ್ಲಿ ಮೃತರಾದವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಘಟನೆ ಬಗ್ಗೆ ತನಿಖೆ ನಡೆಸಬೇಕು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲಿಕ್ ಹೇಳಿದ್ದಾರೆ.
ಸೊಕ್ಕಿನ ಪ್ರಧಾನಿ ಜೊತೆ ಜಗಳ – ಸತ್ಯಪಾಲ್
ಇತ್ತೀಚೆಗೆ ರೈತರ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಹೋದಾಗ ಅತ್ಯಂತ ಸೊಕ್ಕಿನ ಪ್ರಧಾನಿ ಜೊತೆ ಜಗಳವಾಡಿದ್ದೇನೆ ಎಂದು ಹೇಳಿಕೆ ನೀಡಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಡಿಯೋ ವೈರಲ್ ಆಗಿದೆ.
ಪ್ರಧಾನಿ ತುಂಬಾ ಸೊಕ್ಕಿನವರಾಗಿದ್ದರು. ನಮ್ಮ 500 ಮಂದಿ ರೈತರು ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ಅದಕ್ಕೆ ಅವರು ನನಗಾಗಿ ಸತ್ತಿದ್ದಾರೆಯೇ ಎಂದು ಕೇಳಿದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ‘ಅದರಲ್ಲಿ ನಾನು ಅಮಿತ್ ಶಾ ಅವರನ್ನು ಭೇಟಿಯಾದಾಗ ಅವರು ನನಗೆ, ಸತ್ಯ ಅವರು ಮನಸ್ಸು ಕಳೆದುಕೊಂಡಿದ್ದಾರೆ. ನೀವು ನಿರಾತಂಕವಾಗಿರಿ. ನಮ್ಮನ್ನು ಭೇಟಿ ಮಾಡಿ ಎಂದು ಹೇಳಿರುವುದು ದಾಖಲಾಗಿದೆ.
ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ರೈತರ ವಿಷಯದಲ್ಲಿ ಪ್ರಧಾನಿ ಅಹಂಕಾರಿ ಎಂದು ಹೇಳುತ್ತಿದ್ದಾರೆ. ಎಚ್ಎಂ ಅಮಿತ್ ಶಾ ಪ್ರಧಾನಿಯನ್ನು ಹುಚ್ಚು ಎಂದು ಹೇಳಿದ್ದಾರೆ. ಸಾಂವಿಧಾನಿಕ ನಾಯಕರು ಪರಸ್ಪರ ತಿರಸ್ಕಾರದಿಂದ ಮಾತನಾಡುತ್ತಾರೆ. ನರೇಂದ್ರ ಮೋದಿಜಿ ಇದು ನಿಜವೇ? ಎಂದು ಪ್ರಶ್ನಿಸಿದ್ದಾರೆ.


