Friday, September 20, 2024
Google search engine
Homeಮುಖಪುಟಅತಿಥಿ ಉಪನ್ಯಾಸಕರ ಕುರಿತ ಹೇಳಿಕೆ ಶಿಕ್ಷಣ ಸಚಿವರಿಗೆ ಶೋಭೆ ತರುವಂತದ್ದಲ್ಲ - ಪ್ರೊ.ಜಿ.ಎಂ.ಶ್ರೀನಿವಾಸಯ್ಯ

ಅತಿಥಿ ಉಪನ್ಯಾಸಕರ ಕುರಿತ ಹೇಳಿಕೆ ಶಿಕ್ಷಣ ಸಚಿವರಿಗೆ ಶೋಭೆ ತರುವಂತದ್ದಲ್ಲ – ಪ್ರೊ.ಜಿ.ಎಂ.ಶ್ರೀನಿವಾಸಯ್ಯ

ನಾನು ಕೂಡ ಅವಮಾನ ಅನುಭವಿಸಿದ್ದೇನೆ. ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅವಮಾನಕ್ಕೆ ಒಳಗಾಗಿದ್ದೇನೆ. ಕಷ್ಟ, ನೋವು, ಸಂಕಟ ಅನುಭವಿಸಿದವರಿಗೆ ಮಾತ್ರ ಅದು ಗೊತ್ತಾಗುತ್ತದೆ. ಬೇರೆಯವರಿಗೆ ಹೇಗೆ ಗೊತ್ತಾಗಬೇಕು ಹೇಳಿ? ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡುವಾಗ ಈತ ಅತಿಥಿ ಉಪನ್ಯಾಸಕ ಅಂತಾ ಬೇಧಭಾವ ಮಾಡುವುದಕ್ಕೆ ಸರ್ಕಾರವೇ ಕಾರಣ ಎಂದು ತಿಳಿಸಿದರು.

ಸಚಿವರು ಸರ್ಕಾರದ ಬಾಗ. ಸರ್ಕಾರದ ನೀತಿಗಳಿಗೆ ಅವರು ಬದ್ದರಾಗಿರಬೇಕು. ಅನೇಕ ಕಷ್ಟ-ನೋವುಗಳನ್ನು ಅನುಭವಿಸುತ್ತಾ ಅಲ್ಪ ಹಣಕ್ಕೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ನಿಮಗೆ ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನುವ ಶಿಕ್ಷಣ ಸಚಿವರಿಗೆ ಇಂತಹ ಮಾತುಗಳು ಶೋಭೆ ತರುವಂತದ್ದಲ್ಲ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ.ಎಂ.ಶ್ರೀನಿವಾಸಯ್ಯ ಕಿಡಿಕಾರಿದ್ದಾರೆ.

ಶಿಕ್ಷಣಕ್ಕೆ ಕ್ಷೇತ್ರಕ್ಕೆ ಸೇರಿದ ಒಬ್ಬ ಮಂತ್ರಿ ಆ ಮಾತಾಡೋದು ಒಳ್ಳೆಯದಲ್ಲ. ಶೋಭೆ ತರುವಂತಹದ್ದಲ್ಲ. ಯಾಕೆಂದರೆ ಅತಿಥಿ ಉಪನ್ಯಾಸಕರಲ್ಲಿ ಬಹುತೇಕರು ಮದುವೆಯಾಗಿದ್ದಾರೆ. ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳಬೇಕು. ಅವರಿಗೆ ಬೇರೆ ದಾರಿ ಇಲ್ಲ. ಅಸಹಾಯಕರಾಗಿ ದುಡಿಯುತ್ತಿದ್ದಾರೆ. ಹಾಗೆ ದುಡಿಯುತ್ತಿರುವವರ ಬಗ್ಗೆ ಮಾನವೀಯ ಗುಣಗಳನ್ನೇ ಸಂಪೂರ್ಣವಾಗಿ ಮರೆತು ಮಾತನಾಡುವುದು ಕ್ರೂರವಾದುದು ಎಂದು ಹೇಳಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಸಚಿವರು ಸಾಂತ್ವನ ಹೇಳಬೇಕಾಗಿತ್ತು. ಸರ್ಕಾರದ ನೀತಿ ಹೀಗಿದೆ; ನಾವು ಈ ಬಗ್ಗೆ ಪ್ರಯತ್ನಪಡುತ್ತೇವೆ. ಆದಷ್ಟು ನಿಮಗೆ ಸಹಾಯ ಮಾಡುತ್ತೇವೆ. ನಿಮಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಹೇಳಬೇಕಾಗಿತ್ತು. ಅದು ಬಿಟ್ಟು ನಿಮ್ಮನ್ನೇನು ಕರೆದಿದ್ದೆವಾ? ಬೇರೆ ಕೆಲಸ ಹುಡುಕಿಕೊಳ್ಳಬೇಕಿತ್ತು ಅಂದ್ರೆ, ಬೇರೆ ಏನ್ ಕೆಲ್ಸಕ್ಕೆ ಹೋಗ್ತಾರೆ. ಸರ್ಕಾರ ಯಾವ ಕೆಲಸ ಕೊಡುತ್ತೆ ಯುವಕರಿಗೆ? ಬೀದಿಬೀದಿ ಅಲೆಯುತ್ತಿದ್ದಾರಲ್ಲ, ಅವರಿಗೆ ಯಾವ ಕೆಲಸ ಕೊಡುತ್ತೆ ಸರ್ಕಾರ. ಈ ಥರ ಮಾತಾಡೋದು ಒಳ್ಳೇದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರದ್ದು ಆತ್ಮಗೌರವದ ಪ್ರಶ್ನೆ. ಈ ಕಡೆ ಸಂಸಾರ ತಾಪತ್ರಯ ನೋಡಿಕೊಳ್ಳಬೇಕು. ಸ್ವಾಭಿಮಾನದ ಬದುಕು ನಡೆಸಬೇಕು. ಇನ್ನೊಂದು ಕಡೆ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಬೇಕು. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು, ಎಲ್ಲಾ ರೀತಿಯ ಅವಮಾನ ಅನುಭವಿಸುತ್ತಾ ಇರುವ ಅತಿಥಿ ಉಪನ್ಯಾಸಕರ ಬಗ್ಗೆ ಆ ಮನುಷ್ಯ ಈ ರೀತಿ ಮಾತನಾಡುತ್ತಾರೆ ಅಂದ್ರೆ ಏನನ್ನಬೇಕು?

ನಾನು ಕೂಡ ಅವಮಾನ ಅನುಭವಿಸಿದ್ದೇನೆ. ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅವಮಾನಕ್ಕೆ ಒಳಗಾಗಿದ್ದೇನೆ. ಕಷ್ಟ, ನೋವು, ಸಂಕಟ ಅನುಭವಿಸಿದವರಿಗೆ ಮಾತ್ರ ಅದು ಗೊತ್ತಾಗುತ್ತದೆ. ಬೇರೆಯವರಿಗೆ ಹೇಗೆ ಗೊತ್ತಾಗಬೇಕು ಹೇಳಿ? ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡುವಾಗ ಈತ ಅತಿಥಿ ಉಪನ್ಯಾಸಕ ಅಂತಾ ಬೇಧಭಾವ ಮಾಡುವುದಕ್ಕೆ ಸರ್ಕಾರವೇ ಕಾರಣ ಎಂದು ತಿಳಿಸಿದರು.

ಒಂದೊಂದು ಕಾಲೇಜಿನಲ್ಲಿ 50 ಮಂದಿ ಅತಿ ಉಪನ್ಯಾಸಕರು ಇದ್ದಾರೆ. ಅವರನ್ನು ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ಶಿಕ್ಷಣ ಸಚಿವರು ಶೋಷಣೆ ಅಂದ್ರೆ ಗೊತ್ತೇನ್ರಿ ಎಂದು ಪ್ರಶ್ನಿಸುತ್ತಾರೆ. ಅವಮಾನ ಮಾಡೋದು, ಬೇಧಭಾವ ಮಾಡೋದು ಶೋಷಣೆ ಅಲ್ದೆ ಇನ್ನೇನು? ಶೋಷಣೆ ಅಂದ್ರೆ ಕಾಲಿಗೆ ಬೇಡಿ ಹಾಕಿ ಇಟ್ಟಿಕೊಳ್ಳುವುದು ಮಾತ್ರವೇ? ಮನುಷ್ಯನ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಕುಂದುಂಟಾಗುತ್ತೋ ಅದೇ ನಿಜವಾದ ಶೋಷಣೆ ಎಂದು ಪ್ರೊ. ಜಿ.ಎಂ.ಶ್ರೀನಿವಾಸಯ್ಯ ವ್ಯಾಖ್ಯಾನಿಸಿದರು.

ಸಂಸ್ಕಾರ ಇಲ್ಲದ ನಾಲಿಗೆ – ಪರಿಸರವಾದಿ ಸಿ.ಯತಿರಾಜ್ ಆಕ್ರೋಶ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಂಸ್ಕಾರವೇ ಇಲ್ಲ. ಇದೇನಾ ಆರ್.ಎಸ್.ಎಸ್. ಕಲಿಸಿರುವ ಸಂಸ್ಕಾರ? ಶಿಕ್ಷಣ ಸಚಿವರ ಹೇಳಿಕೆ ಖಂಡನೀಯ. ದೊರೆ ಹತ್ತಿರ ದೂರು ತೆಗೆದುಕೊಂಡು ಬಂದರೆ ಜನರ ದೂರನ್ನು ಸಮಾಧಾನದಿಂದ ಆಲಿಸಬೇಕು. ಆದರೆ ತಾಳ್ಮೆ ಕಳೆದುಕೊಳ್ಳುವುದು ಸರಿಯಲ್ಲ ಎಂದು ಹಿರಿಯ ಪರಿಸರವಾದಿ ಸಿ.ಯತಿರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿ ಮಾತನಾಡುವ ಮಾತಲ್ಲ ಅದು. ಹಾಗೇ ಮಾತನಾಡಕೂಡದು. ಜನಪ್ರತಿನಿಧಿಗಳು ಕ್ರೂರವಾಗಿ, ವ್ಯಂಗ್ಯವಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಶೋಷಣೆಗೆ ಇವರದ್ದೇ ಒಂದು ವ್ಯಾಖ್ಯಾನವೇ? ಶೋಷಣೆ ಅನ್ನೋ ಪದ ಕೇಳುತ್ತಿದ್ದಂತೆ ಯಾಕೆ ಉರಿದು ಬೀಳಬೇಕು? ಸಮಾಧಾನವಾಗಿ ಕೇಳಬೇಕು. ಅದು ಅವರ ಮೊದಲ ಕರ್ತವ್ಯ. ಜನರ ಸಮಸ್ಯೆಗಳನ್ನು ಕೇಳುವ ತಾಳ್ಮೆ ಇಲ್ಲವೆಂದರೆ ಶಿಕ್ಷಣ ಸಚಿವರಾಗಿ ಮುಂದುವರೆಯಲು ನಾಲಾಯಕ್. ಅಧಿಕಾರಕ್ಕೆ ನಾಲಾಯಕ್ ಎಂದರು.

ಜನಪ್ರತಿನಿಧಿ ತಾಳ್ಮೆ ಇಟ್ಟುಕೊಂಡು ದೂರನ್ನು ಕೇಳಬೇಕು. ನಿನ್ ಮನೆ ಬಾಗಿಲಿಗೆ ಬಂದಿದ್ದೆನಾ ಅನ್ನೋದು ಏನ್ ಸಂಸ್ಕಾರ? ಶೋಷಣೆ ಅನ್ನೋ ಪದ ಕೇಳುತ್ತಿದ್ದಂತೆ ಕಮ್ಯೂನಿಸ್ಟರನ್ನು ಜ್ಞಾಪಿಸಿಕೊಂಡು ರೇಗಿಬೀಳುವುದು ಸರಿಯಲ್ಲ. ವಾಜಪೇಯಿ ಹೇಳಿದ ರಾಜಧರ್ಮ ಇದೇನಾ? ಏನ್ ಇದು ಅಸಹ್ಯ ಎಂದು ಕಿಡಿಕಾರಿದರು.

ಘನತೆ ತಕ್ಕ ನಡವಳಿಕೆ ಅಲ್ಲ – ಜನಸಂಗ್ರಾಮ ಪರಿಷತ್ ಅಧ್ಯಕ್ಷ ಜವಾಹರ್ ಟೀಕೆ

ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಸರಳ ನಡೆಯ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು, ಅನಿರ್ದಿಷ್ಟ ಮುಷ್ಕರ ನಡೆಸುತ್ತಿರುವ, ಅತಿಥಿ ಉಪನ್ಯಾಸಕರು ಮನವಿ ಕೊಡಲು ಬಂದಾಗ ಮನವಿ ಸ್ವೀಕರಿಸಿ ಸಾಂತ್ವನದ ನುಡಿಗಳನ್ನು ಹೇಳದೆ, ಇಷ್ಟ ಇದ್ದರೆ ಕೆಲಸ ಮಾಡಿ ಇಲ್ಲ ಬೇರೆ ಕೆಲಸಗಳನ್ನು ನೋಡಿಕೊಂಡು ಹೋಗಿ ಎಂದು ಹೇಳಿರುವುದು ಅವರ ಘನತೆಗೆ ತಕ್ಕುದಾದ ನಡವಳಿಕೆ ಅಲ್ಲ ಎಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷ ಪಂಡಿತ್ ಜವಾಹರ್ ಟೀಕಿಸಿದ್ದಾರೆ.

ರಾಜ್ಯದ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರು ಜೀವನ ನಡೆಸಲು ತುಂಬಾ ಕಷ್ಟ ಆಗಿದ್ದರಿಂದ ಅನಿವಾರ್ಯವಾಗಿ ಮುಷ್ಕರ ಕುಳಿತಿದ್ದಾರೆ. ಸ್ನಾತಕೋತ್ತರ ಪದವಿ ಪಡೆದರೂ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇದು ಅವರ ಜೀವನದ ಬದುಕಿನ ಪ್ರಶ್ನೆಯಾಗಿದೆ.

ಯಾವ್ಯಾವುದಕ್ಕೋ ಕೋಟ್ಯಂತರ ಹಣ ವ್ಯರ್ಥ ಮಾಡುತ್ತಿರುವ ಸರ್ಕಾರ, ಬದುಕಿಗೆ ಬೇಕಾದ ಅಗತ್ಯ ವ್ಯವಸ್ಥೆ ಮಾಡದಿರುವುದು ನಿಜಕ್ಕೂ ಖಂಡನೀಯ. ಇದು ಯಾವುದೇ ಸರ್ಕಾರಕ್ಕೆ ಮರ್ಯಾದೆ ತರುವ ವಿಚಾರವಲ್ಲ. ನಮ್ಮ ದೇಶ ಮತ್ತು ರಾಜ್ಯದಲ್ಲಿ ಆರ್ಥಿಕ ಅಸಮಾನತೆ ಅಗಾಧವಾಗಿ ಇರುವುದರಿಂದ ಕೆಲವು ವರ್ಗಗಳು ಇವತ್ತಿಗೂ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ ಎಂಬ ಅರಿವು ಆಡುವ ವರ್ಗದವರಿಗೆ ಇರಬೇಕು.

ಧರ್ಮದಿಂದ ಆಡಳಿತ ನಡೆಸುತ್ತಿದ್ದೇವೆ ಎಂದು ಹೇಳುವ ಸರ್ಕಾರವು ಕೂಡಲೇ ಅತಿಥಿ ಉಪನ್ಯಾಸಕರನ್ನು ಕರೆದು ಅವರ ಬೇಡಿಕೆಗಳು ಏನು ಅಂತ ಕೇಳಿ ಅವರ ಕಷ್ಟಗಳಿಗೆ ಸ್ಪಂದಿಸಿ ಮಾನವೀಯತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಸಮರ್ಥ ಶಿಕ್ಷಣ ಸಚಿವ – ಈ.ಶಿವಣ್ಣ

ಅಹವಾಲು ಹೇಳಿಕೊಳ್ಳಲು ಬಂದ ಅತಿಥಿ ಉಪನ್ಯಾಸಕರ ಬಗ್ಗೆ ಅವಹೇಳನ ಮಾಡಿರುವ ಪ್ರಾರ್ಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಒಬ್ಬ ಅಸಮರ್ಥ ಎನ್ನುವುದು ಅವರ ನಡವಳಿಕೆಯಿಂದ ಸಾಬೀತಾಗಿದೆ. ಶಿಕ್ಷಣ ಸಚಿವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅತಿಥಿ ಉಪನ್ಯಾಸಕರ ಅವಮಾನಿಸಿರುವುದು ಖಂಡನೀಯ ಎಂದು ವಿದ್ಯಾರ್ಥಿ ನಾಯಕ ಈ.ಶಿವಣ್ಣ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular