ಇತ್ತೀಚೆಗೆ ಮೂಡಿಗೆರೆಯಲ್ಲಿ ನಿಧನರಾದ ಲೇಖಕಿ ರಾಜೇಶ್ವರಿ ತೇಜಸ್ವಿ ಅವರಿಗೆ ತುಮಕೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಮಮನೋಹರ ಲೋಹಿಯ ಸಮತಾ ವಿದ್ಯಾಲಯ ಮತ್ತು ನೆಲಸಿರಿ ಸಾಂಸ್ಕೃತಿ ವೇದಿಕೆಯಿಂದ ಗೌರವ ನಮನ ಸಲ್ಲಿಸಲಾಯಿತು. ರಾಜೇಶ್ವರಿ ತೇಜಸ್ವಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.
ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿದರು. ಮೂಡಿಗೆರೆಗೆ ಹೋಗಿ ಅಲ್ಲಿ ರಾಜೇಶ್ವರಿ ಅವರೊಂದಿಗೆ ಮಾತನಾಡಿ, ತೋಟ ನೋಡಿಕೊಂಡು ಬಂದ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ರಾಜೇಶ್ವರಿ ತೇಜಸ್ವಿ ಅವರು ನಮಗೆ ಸ್ಫೂರ್ತಿಯಾಗಿದ್ದರು. ಅವರು ನಮ್ಮ ಮನೆಗೂ ಬಂದರು ಗಾಂಧೀಜಿ ಕೃತಿ ಬರೆಯುವವರೆಗೂ ತನ್ನ ಜಾತಿ ಯಾವುದು ಎಂಬುದನ್ನು ಹೇಳಿಕೊಂಡೇ ಇರಲಿಲ್ಲ. ದೇವಾಂಗ (ನೇಕಾರ) ಕುಟುಂಬದಿಂದ ಬಂದ ರಾಜೇಶ್ವರಿ ಅವರು ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದವರು. ನನ್ನ ತೇಜಸ್ವಿ ಕೃತಿ ಓದಿದರೆ ಅವರ ಆದರ್ಶಮಯ ಬದುಕು ಕೃತಿಯಲ್ಲಿ ಅನಾವರಣಗೊಂಡಿರುವುದು ತಿಳಿಯುತ್ತದೆ.
ರಾಜೇಶ್ವರಿ ತೇಜಸ್ವಿ ಅವರು ತುಮಕೂರಿಗೆ ಬಂದಾಗ ನಮ್ಮೊಡನೆ ಅತ್ಯಂತ ಆಪ್ತವಾಗಿ ಬೆರೆತರು. ಅವರು ಮಾನಾಡುತ್ತಿದ್ದರೆ ಮತ್ತಷ್ಟು ಕೇಳಬೇಕು ಅನಿಸುತ್ತಿತ್ತು. ಎಲ್ಲರಿಗೂ ಮಾದರಿಯಾಗಿದ್ದರು ಎಂದು ಸ್ಮರಿಸಿದರು.
ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ರಾಜೇಶ್ವರಿ ತೇಜಸ್ವಿಯವರು ಚಳವಳಿಗೆ ಸಹಕಾರ ನೀಡಿದರು ಚಳವಳಿ ಜೊತೆಗೆ ಗುರುತಿಸಿಕೊಂಡರು. ತುರ್ತುಪರಿಸ್ಥಿತಿಯಲ್ಲಿ ಚಳವಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜೇಶ್ವರಿ ಅವರನ್ನು ಪೊಲೀಸರು ಬಂಧಿಸಿ ಧಾರವಾಡದ ಜೈಲಿನಲ್ಲಿ ಇಟ್ಟಿದ್ದರು. ನನ್ನನ್ನೂ ಕೂಡ ಅದೇ ಜೈಲಿನಲ್ಲಿ ಇರಿಸಿದ್ದರು.
ಪ್ರೊ.ನಂಜುಂಡಸ್ವಾಮಿ ಮತ್ತು ನನಗೆ 1972ರಲ್ಲಿ ಪರಿಚಯವಾಯಿತು. ನಾವು ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದೆವು. ಅಲ್ಲಿ ಮಲ್ಲೇಶ್ ಪ್ರೆಸ್ ನಲ್ಲಿ ಸೇರುತ್ತಿದ್ದೆವು. ನಂತರ ಪ್ರೊ.ಕೆ.ರಾಮದಾಸ್ ಮನೆಗೆ ಶಿಫ್ಟ ಆಯಿತು. ಅಲ್ಲಿಗೆ ತೇಜಸ್ವಿ ಬರುತ್ತಿದ್ದರು. ಅಲ್ಲಿ ನನಗೆ ತೇಜಸ್ವಿ ಪರಿಚಯವಾಯಿತು. ನಾನು ಭೂಗತನಾದಾಗ ಮೂಡಿಗೆರೆಯ ತೇಜಸ್ವಿ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ರಾಜೇಶ್ವರಿ ಅವರ ಪರಿಚಯವಾಯಿತು ನಮ್ಮದು 50 ವರ್ಷದ ಸ್ನೇಹವಾಗಿತ್ತು ಎಂದರು.
ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಇಂದು ಬಹುತೇಕರ ಬರಹ, ಮಾತು, ಬದುಕು ತಾಳೆ ಆಗುತ್ತಿಲ್ಲ. ಆದರೆ ರಾಜೇಶ್ವರಿ ಅವರ ಬದುಕು ಬರಹ ಒಂದೇ ಆಗಿತ್ತು. ರಾಜೇಶ್ವರಿ ಅವರ ನನ್ನ ತೇಜಸ್ವಿ ಕೃತಿ ಓದಿದರೆ ಜೀವನದಲ್ಲಿ ಬದಲಾವಣೆಯ ಬದುಕನ್ನು ಬದುಕಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲರೂ ಆ ಕೃತಿಯನ್ನು ಓದಬೇಕು ಎಂದು ಸಲಹೆ ಮಾಡಿದರು.
ಸಾಹಿತಿ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿ, ನನ್ನ ತೇಜಸ್ವಿ ಕೃತಿ ಅತ್ಯುತ್ತಮ ಕೃತಿ. ರಾಜೇಶ್ವರಿ ತೇಜಸ್ವಿ ಅವರ ಈ ಕೃತಿ ಆದರ್ಶಪ್ರಾಯವಾಗಿದೆ. ತೇಜಸ್ವಿ ಮರಣದ ನಂತರ ರಾಜೇಶ್ವರಿ ಅವರು ಕ್ರಿಯಾಶೀಲವಾಗಿದ್ದರು ಎಂದು ಹೇಳಿದರು.