ಪಕ್ಷದ ಕಚೇರಿ ಮತ್ತು ಸದಸ್ಯರ ಫೋನ್ ಗಳನ್ನು ಉತ್ತರ ಪ್ರದೇಶ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿದಿನ ಧ್ವನಿಮುದ್ರಣಗಳನ್ನು ಆಲಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗಂಭೀರವಾಗಿ ಆರೋಪಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲಿನತ್ತ ಮುಖ ಮಾಡಿರುವುದರಿಂದ ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷದ ಮುಖಂಡರ ಮೇಲೆ ದಾಳಿ ನಡೆಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿಯವರೆಗೆ ಈ ಏಜೆನ್ಸಿಗಳು ಅಧಿಕಾಋದಲ್ಲಿರುವ ಸರ್ಕಾರಗಳನ್ನು ತೆಗೆದುಹಾಕಲು ಬಳಸಲಾಗುತ್ತಿತ್ತು. ಈಗ ಅವರು ಅದನ್ನು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಆದಾಯ ತೆರಿಗೆ ಇಲಾಖೆಯು ಅಖಿಲೇಶ್ ಅವರ ಆಪ್ತ ಸಹಾಯಕರ ಮನೆಗಳ ಶೋಧ ನಡೆಸಿದ ಒಂದು ದಿನದ ನಂತರ ಈ ಹೇಳಿಕೆ ಹೊರಬಿದ್ದಿದೆ. ನಿಮ್ಮ ಶೋಧ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಯಾದವ್ ಹೇಳಿದರು.
ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಯೋಗಿಜಿ ತಮ್ಮ ಸರ್ಕಾರ ಶೀಘ್ರವೇ ಅಧಿಕಾರದಿಂದ ಹೊರಗುಳಿಯುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಸರಿಸುತ್ತಿರುವ ತಂತ್ರಗಳು ನಿಮ್ಮ ಸೋಲಿನ ಬಗ್ಗೆ ಮನವರಿಕೆಯಾಗಿದೆ ಎಂದು ತೋರಿಸುತ್ತದೆ ಎಂದು ಅಖಿಲೇಶ್ ತಿಳಿಸಿದರು.