ಫಿಲಿಪ್ಪೀನ್ಸ್ ಗೆ ಪ್ರಬಲ ಚಂಡಮಾರುತ ಅಪ್ಪಳಿಸಿದ್ದು ಕನಿಷ್ಟ 75 ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚಂಡಮಾರುತದಿಂದ ಧ್ವಂಸಗೊಂಡಿರುವ ದ್ವೀಪಗಳಿಗೆ ನೀರು ಮತ್ತು ಆಹಾರವನ್ನು ತಲುಪಿಸುವ ಪ್ರಯತ್ನಗಳು ತೀವ್ರಗೊಂಡಿವೆ.
ರೈ ಚಂಡಮಾರುತ ದ್ವೀಪಸಮೂಹದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಿಗೆ ಅಪ್ಪಳಿಸಿದೆ. ಸಾವಿರಾರು ಮನೆಗಳು ಧ್ವಂಸಗೊಂಡಿದ್ದು 3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳು ಮತ್ತು ರೆಸಾರ್ಟ್ ಗಳನ್ನು ತೊರೆದಿದ್ದಾರೆ.
ಚಂಡಮಾರುತ ಅಪ್ಪಳಿಸಿದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿವೆ. ಸಂಪರ್ಕ ಕಡಿತಗೊಂಡಿದೆ. ಮನೆಗಳ ಮೇಲ್ಛಾವಣಿ ಗಳು ಕಿತ್ತು ಹೋಗಿವೆ. ಬಹುತೇಕ ಹಳ್ಳಿಗಳು ಜಲಾವೃತವಾಗಿವೆ ಎಂದು ವರದಿಗಳು ಹೇಳಿವೆ.
ಗಂಟೆಗೆ 195 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು ಚಂಡಮಾರುತ ತೀವ್ರಗೊಂಡಿದೆ. ಪ್ರವಾಹ ಪೀಡಿತ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು, ಅಲ್ಲಿ ಕೆಲವು ನಿವಾಸಿಗಳನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಜನರ ಹುಡುಕಾಟ, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ವಿದ್ಯುತ್ ಕಂಬಗಳು ಮತ್ತು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಅವುಗಳನ್ನು ತೆರವುಗೊಳಿಸಲು ಭಾರೀ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.
ದ್ವೀಪದ ಉತ್ತರ ಭಾಗದಲ್ಲಿ ಆಗಿರುವ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದ್ದು, ಮನೆಗಳು, ಬೆಳೆಗಳು ನಾಶವಾಗಿದದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಯಾಹ್ಅ ಹೇಳಿದರು.