Monday, December 23, 2024
Google search engine
Homeಚಳುವಳಿಪ್ಯೂಡಲ್ ಪಾಲಿಟಿಕ್ಸ್, ಕ್ಯಾಪಿಟಲೀಸಂ, ಕೋಮುವಾದದ ಕುರಿತು ರೈತ ನಾಯಕರಿಗೆ ಸ್ಪಷ್ಟ ನಿಲುವು ಇಲ್ಲ - ದೊರೈರಾಜ್

ಪ್ಯೂಡಲ್ ಪಾಲಿಟಿಕ್ಸ್, ಕ್ಯಾಪಿಟಲೀಸಂ, ಕೋಮುವಾದದ ಕುರಿತು ರೈತ ನಾಯಕರಿಗೆ ಸ್ಪಷ್ಟ ನಿಲುವು ಇಲ್ಲ – ದೊರೈರಾಜ್

ರೈತ ಹೋರಾಟಗಾರರು (ಟಿಕಾಯತ್ ಬೆಂಬಲಿಗರು) ಪ್ಯೂಡಲ್ ರಾಜಕೀಯ, ಬಂಡವಾಳಶಾಹಿ ಮತ್ತು ಕೋಮುವಾದದ ಬಗ್ಗೆ ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳದೆ, ಉಡಾಫೆಯ ಉತ್ತರಗಳನ್ನು ನೀಡುತ್ತಿರುವುದರಿಂದ ಚಳವಳಿಗಳು ಯಶಸ್ವಿಯಾಗುತ್ತಿಲ್ಲ ಎಂದು ಜನಪರ ಚಿಂತಕ ಕೆ.ದೊರೈರಾಜ್ ವಿಶ್ಲೇಷಿಸಿದರು.

ತುಮಕೂರಿನ ಕನ್ನಡ ಭವನದಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾಡುವ ಕೆ.ಬಿ.ಯ ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಟಿಕಾಯತ್ ಜೊತೆಯಲ್ಲಿದ್ದ ರೈತ ನಾಯಕರಿಗೆ, ಪ್ಯೂಡಲ್ ಪಾಲಿಟಿಕ್ಸ್, ಕ್ಯಾಪಿಟಲಿಸಂ ಮತ್ತು ಕೋಮುವಾದದ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೇಳಿದಾಗ “ಬಂಡವಾಳಶಾಹಿ ವ್ಯವಸ್ಥೆ ಅಂತಾರಾಷ್ಟ್ರೀಯ ಸಮಸ್ಯೆ. ಎಲ್ಲಾ ರಾಷ್ಟ್ರಗಳು ಕೂಡಿ ತೆಗೆದುಕೊಳ್ಳುವ ನಿಲುವುಗಳು ಅದು ಎಂದರು.

ಪ್ಯೂಡಲ್ ಪಾಲಿಟಿಕ್ಸ್ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಯಾಗಿ ತೀರ್ಮಾನವಾದರೆ ನಂತರ ಆ ಬಗ್ಗೆ ನೋಡೋಣ ಎಂದರು. ಕೋಮುವಾದದ ಕುರಿತು ಕೂಡ ಜನಾಂಗೀಯ ಘರ್ಷಣೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿವೆ. ಇಲ್ಲೂ ಕೂಡ ಕೋಮುವಾದ ಗಲಭೆಗಳು ಸಾಮಾನ್ಯ ಎಂದರು. ಹೀಗಾಗಿ ಅವರಲ್ಲಿ ಈ ಮೂರು ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ರೈತ ಚಳವಳಿಗಳು ಭೂಮಿಯ ಒಡೆತನ ಇಟ್ಟುಕೊಂಡಿವೆ. ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತವೆ. ಆದರೆ ಪ್ರಜಾಪ್ರಭುತ್ವದ ತತ್ವಗಳನ್ನು, ಸಂವಿಧಾನದ ಆಶಯಗಳನ್ನು ಚಳವಳಿಯ ಭಾಗವಾಗಿ ಇಟ್ಟುಕೊಳ್ಳಲು ಒಪ್ಪಿಕೊಳ್ಳುವುದಿಲ್ಲ. ಊಳಿಮಾನ್ಯ ವ್ಯವಸ್ಥೆಯನ್ನು ಹಾಗೆ ಕಾಪಾಡಿಕೊಂಡು ಬರುತ್ತಿವೆ. ಅವು ಸಮಾನತೆಯ ಕಡೆಗೆ ಹೋಗುವುದಿಲ್ಲ. ಪ್ರಭುತ್ವ ಅವರ ವಿರುದ್ಧ ಮಾಡಿದ ತೀರ್ಮಾನಗಳನ್ನು ವಿರೋಧಿಸುವುದಷ್ಟ ಅವರ ಪ್ರಮುಖ ಉದ್ದೇಶ ಎಂದು ವಿವರಿಸಿದರು.

ದೇಶದಲ್ಲಿ ಶೇ. 9ರಷ್ಟು ದಲಿತರು ಭೂಮಿ ಹೊಂದಿದ್ದಾರೆ. ಉಳಿದ 91ರಷ್ಟು ಕೃಷಿ ಕಾರ್ಮಿಕರಿದ್ದಾರೆ. ಈ ಕೃಷಿ ಕಾರ್ಮಿಕರಿಂದ ಕೃಷಿ ಇದೆ. ಭೂಮಾಲಿಕರ ಕೈಯ್ಯಲ್ಲಿ ಕೃಷಿ ಇಲ್ಲ. ಆದರೆ ಇತ್ತೀಚೆಗೆ ಕಾರ್ಪೋರೇಟ್ ಶಕ್ತಿಗಳಿಗೆ ಭೂಮಿ ವರ್ಗಾಯಿಸುವ ಯತ್ನ ನಡೆಯುತ್ತಿದೆ. ಇದು ಸಾಧ್ಯವಾದರೆ ಭೂಮಾಲಿಕ ಕೃಷಿಕರು ಕೃಷಿ ಕಾರ್ಮಿಕರ ಜೊತೆ ಸೇರುವುದು ಕಷ್ಟ. ಆಗಲೂ ದಲಿತರು ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಬೆಂಬಲಿಸುತ್ತಿಲ್ಲ ಎಂಬ ಹುಯ್ಯಿಲು ಎಬ್ಬಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ದಲಿತರು, ರೈತರು ಸ್ತ್ರೀಯರು ಹೀಗೆ ಎಲ್ಲಾ ಜಾತಿಯವರನ್ನು ಒಳಗೊಳ್ಳುವ ಆಲೋಚನೆ ಒಳ್ಳೆಯದು. ಇಂತಹ ವಿಚಾರಗಳನ್ನು ಇಟ್ಟುಕೊಂಡು ಗ್ರಾಮಗಳಲ್ಲಿ ಪ್ಯೂಡಲ್ ರಚನೆಯನ್ನು ಬಿಟ್ಟು ಸಾಮಾಜಿಕವಾಗಿ ಬೆರೆಯುವುದಾದರೆ ದೌರ್ಜನ್ಯಗಳು ಇರುವುದಿಲ್ಲ, ಭೂಕಬಳಿಕೆಗಳು ಇರುವುದಿಲ್ಲ. ಅತ್ಯಾಚಾರಗಳು ನಡೆಯುವುದಿಲ್ಲ ದ್ವೇಷಗಳು ಇರುವುದಿಲ್ಲ ಎಂದು ಪ್ರತಿಪಾದಿಸಿದರು.

ನಮ್ಮ ಮುಂದಿನ ವೈರುದ್ಯವನ್ನು ಬಗೆಹರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಬೇಕು. ದಲಿತ ಸಂಘರ್ಷ ಸಮಿತಿಗಳು ಕೇವಲ ಜಾತಿಯ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿವೆ. ಮೀಸಲಾತಿಯೂ ಕೂಡ ಅಂತಹದ್ದೇ. ಇದು ಕಾರ್ಪೋರೇಟ್ ವ್ಯವಸ್ಥೆಯ ಪ್ರತಿಫಲ. ಜಾತಿ ಸಂಘರ್ಷಗಳು ಹೆಚ್ಚುಹೆಚ್ಚು ಆಗಿ ಜಾತಿಯಲ್ಲೇ ನರಳುವಂತೆ ಆಯಿತು. ಹೀಗಾಗಿ ಜಾತಿ ನೆಲೆಯಲ್ಲಿ ಯೋಚನೆ ಮಾಡುವುದನ್ನು ಬಿಟ್ಟು ಸರ್ಕಾರ ಜನವಿರೋಧಿ ನಿಲುಗಳನ್ನು ವಿರೋಧಿಸಬೇಕಾಗಿದೆ ಎಂದು ಸಲಹೆ ಮಾಡಿದರು.

ಒಳಗೊಳ್ಳುವ ಪ್ರಜಾಪ್ರಭುತ್ವದ ಅಗತ್ಯವಿದೆ. ತನ್ನೊಳಗಿರುವ ಜಾತಿಯನ್ನು ಕಳೆದುಕೊಳ್ಳಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಸಂಘಟನೆಗಳು ಜಾಸ್ತಿಯಾಗಿ ಇರುವ ಪರಿಸ್ಥಿತಿಯ ಲಾಭಮಾಡಿಕೊಳ್ಳಲು ಯೋಚಿಸುತ್ತಿವೆಯೇ ಹೊರತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ನಾಯಕರು ಜಾಸ್ತಿಯಾದಂತೆ ವಿಘಟನೆ ಹೆಚ್ಚಾಯ್ತು ಎಂದರು.

ದಲಿತ, ರೈತ, ಸ್ತ್ರೀ ಮತ್ತು ಭಾಷಾ ಚಳವಳಿಗಳು ಆಲೋಚನಾ ಕ್ರಮವನ್ನು ರೂಪಿಸಿವೆ. ದೇಶದ ಚಳವಳಿಗಳನ್ನು ನೋಡಿದರೆ ಕರ್ನಾಟಕದಲ್ಲಿ ವಿಚಾರಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿರುವುದನ್ನು ನೋಡಿದ್ದೇವೆ ಎಂದರು. ಚಳವಳಿಗಳು ನಿರಂತರ ವಾಗಿರುತ್ತವೆ. ಯಾವುದೇ ಸರ್ಕಾರಗಳಿದ್ದರೂ ಕೂಡ ಇವು ನಡೆಯುತ್ತವೆ. ಕಾಂಗ್ರೆಸ್ ವಿರುದ್ಧವೂ ಚಳವಳಿಗಳು ನಡೆದಿವೆ. ಜನತಾದಳದ ವಿರುದ್ಧವೂ ಚಳವಳಿಗಳು ನಡೆದಿವೆ. ಪ್ರೊ.ಬಿ.ಕೃಷ್ಣಪ್ಪ ಹೇಳುವಂತೆ ಚಳವಳಿಗಳೇ ವಿರೋಧ ಪಕ್ಷಗಳು ಎನ್ನುತ್ತಿದ್ದರು. ನಿಜವಾಗಿಯೂ ವಿರೋಧ ಪಕ್ಷಗಳು ಇಲ್ಲ ಎಂದಿದ್ದರು ಎಂದು ಸ್ಮರಿಸಿಕೊಂಡರು.

ದಲಿತ ಮತ್ತು ರೈತ ಚಳವಳಿಗಳು ಒಂದಾಗಬೇಕು ಅಂದರೆ, ಅವುಗಳಲ್ಲಿ ನೈತಿಕತೆ ಇದೆ. ದಲಿತ ಮತ್ತು ರೈತ ಚಳವಳಿಗಳಿಗೆ ಹಿನ್ನೆಲೆ ಇದೆ. ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಹುಟ್ಟುಕೊಂಡ ಇವು ಎರಡು ಸಂಘಟನೆಗಳು ಸರಿಯಾಗಿ ಅರ್ಥ ಮಾಡಿಕೊಂಡು ಹೊಸ ಚಳವಳಿಯನ್ನು ಕಟ್ಟಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೈತ ನಾಯಕಿ ಅನಸೂಯಮ್ಮ, ದಲಿತ ಮುಖಂಡ ಕುಂದೂರು ತಿಮ್ಮಯ್ಯ, ಟ್ರಸ್ಟ್ ಗೌರವಾಧ್ಯಕ್ಷೆ ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಅಧ್ಯಕ್ಷ ಎ.ರಾಮಚಂದ್ರ, ಡಾ.ಬಸವರಾಜು ಹಾಜರಿದ್ದರು. ಡಾ. ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ಕೊಟ್ಟ ಶಂಕರ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular