ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನರೇಂದ್ರ ಮೋದಿಯವರು ಹುಟ್ಟೇ ಇರಲಿಲ್ಲ. ಅಂಥವರಿಗೆ ದೇಶಭಕ್ತಿ, ತ್ಯಾಗಬಲಿದಾನದ ಬಗ್ಗೆ ಗೊತ್ತೇ ಇಲ್ಲ. ಆದರೂ ದೇಶ ರಕ್ಷಿಸುತ್ತಿದ್ದೇವೆ ಎಂದು ಢೋಂಗಿ ಬಿಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯಸ್ಮರಣೆ ಮತ್ತು ಸರ್ದಾರ ವಲ್ಲಭಭಾಯ್ ಪಟೇಲ್ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಪಟೇಲ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಪಟೇಲರನ್ನು ಕಡೆಗಣಿಸಿದರು. ಅಂಬೇಡ್ಕರ್ ಅವರನ್ನು ಸೋಲಿಸಿದರು. ಹೀಗೆ ಬಿಜೆಪಿ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ತಮ್ಮ ಆಸ್ತಿಪಾಸ್ತಿ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ. ಸ್ವಾತಂತ್ರ್ಯ ತರಲು ಮತ್ತು ದೇಶ ಕಟ್ಟುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ ಎಂದು ಹೇಳಿದರು.
ಮೋದಿ ಅವರು ದೇಶಕ್ಕಾಗಿ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಾರೆ. ದೇಶದಲ್ಲಿ ವಿದ್ಯುದ್ದೀಕರಣ, ದೂರವಾಣಿ ಸಂಪರ್ಕ ಕೊಟ್ಟಿದ್ದು ರಾಜೀವ್ ಗಾಂಧಿ. ಇಂದಿರಾಗಾಂಧಿ ಭೂಸುಧಾರಣೆ ಕಾಯ್ದೆ ತಂದರು. ರಾಜಧನ ರದ್ದು ಮಾಡಿದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು. ಇದರಿಂದ ದೇಶದ ಕಟ್ಟಕಡೆಯ ವ್ಯಕ್ತಿಯೂ ಬ್ಯಾಂಕ್ ಖಾತೆ ತೆರೆಯಲು ಅವಕಾಶವಾಯಿತು ಎಂದು ತಿಳಿಸಿದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ನೆಹರೂ ಕುಟುಂಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಸೋನಿಯಾಗಾಂದಿ ಪ್ರಧಾನಿ ಆಗುವ ಅವಕಾಶ ಇದ್ದರೂ ದೇಶಕ್ಕಾಗಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ದೇಶದ ಬಗ್ಗೆ ಬದ್ದತೆ ಇದ್ದರೆ ಮಾತ್ರ ಇದು ಸಾಧ್ಯ ಎಂದರು.
ಕಾಂಗ್ರೆಸ್ ನಾಯಕಿ ರಾಣಿ ಸತೀಶ್ ಮಾತನಾಡಿ, ಮಹಿಳೆಯರು ಮುಂದೆ ಹೆಜ್ಜೆ ಇಡಬೇಕು ಎಂದು ಇಂದಿರಾ ಬಯಸಿದ್ದರು. ಅಲಿಪ್ತ ರಾಷ್ಟ್ರಗಳನ್ನು ಒಂದುಗೂಡಿಸಿದರು. ವಿಶ್ವದ ಹಲವು ದೇಶಗಳು ಭಾರತಕ್ಕೆ ಹತ್ತಿರವಾಗುವಂತೆ ಮಾಡಿದರು. 20 ಅಂಶಗಳ ಕಾರ್ಯಕ್ರಮ. ದೇಶದ ಬಡತನ ನಿರ್ಮೂಲನೆಗೆ ಶ್ರಮಿಸಿದರು ಎಂದು ಹೇಳಿದರು.
ಮಾಜಿ ಸಚಿವ ಉಮಾಶ್ರೀ ಮಾತನಾಡಿ, ಇಂದಿರಾ ಸ್ತ್ರೀಶಕ್ತಿ. ಅವರು ಮಾಡಿದ ಕೆಲಸಗಳ ಸದಾಸ್ಮರಣೀಯ. ಬಡವರ ಪರ ಕೆಲಸ ಮಾಡಿದ ಅವರನ್ನು ದುಷ್ಟಶಕ್ತಿಗಳು ಹತ್ಯೆ ಮಾಡಿದವು. ಆದರೆ ಅವರ ಕೆಲಸ, ಆದರ್ಶ ಕೊನೆಯಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.