ಕರ್ನಾಟಕ ಒಕ್ಕೂಟ ವ್ಯವಸ್ಥೆಯ ಭಾಗವಾಗಿದೆ. ಕನ್ನಡ ಸಂವಿಧಾನಬದ್ಧ ಭಾಷೆಯಾಗಿದ್ದರೂ ಕನ್ನಡ ಭಾಷೆಯಲ್ಲಿ ಯುಪಿಎಸ್ಸಿ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.
ರಾಜ್ಯದ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿರುವ ಅವರು, ಕನ್ನಡಿಗರ ಸ್ವಾಭಿಮಾನದ ದಿನವಾದ ಈಮದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಸಂವಿಧಾನಬದ್ದವಾದ ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅವಕಾಶ ಕನ್ನಡಿಗರ ಹಕ್ಕು, ಹಿಂದಿ, ಇಂಗ್ಲೀಷ್ ನಂತೆ ಕೇಂದ್ರ ಸರ್ಕಾರ ನಡೆಸುವ ಎಲ್ಲ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯುವ ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ಬಳಿಸಿಕೊಳ್ಳವ ಅವಕಾಶದ ವಿಚಾರ ಚರ್ಚಾರ್ಹ ಎಂದರು.
ಹಿಂದಿ ಬಾರದ, ಆಂಗ್ಲಭಾಷೆ ಪರಿಣಿತಿ ಇಲ್ಲದ ಕಾರಣಕ್ಕೆ ಕನ್ನಡ ಭಾಷಿಕ ಪ್ರತಿಭಾವಂತ ಯುವಜನತೆ ಅವಕಾಶಗಳಿಂದ ವಂಚಿತರಾಗಬಾರದು. ಕನ್ನಡಕ್ಕೆ ಸೂಕ್ತ ಪ್ರಾತಿನಿಧ್ಯ ಇಲ್ಲದೆ ಬ್ಯಾಂಕಿಮಗ್ ಮತ್ತಿತರ ವ್ಯವಹಾರ ನಡೆಸಲು ಸಾರ್ವಜನಿಕರಿಗೆ ಅನಾನುಕೂಲ ಆಗಬಾರದು ಎಂದು ಹೇಳಿದರು.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್, ಐಪಿಎಸ್ ಮತ್ತಿತರ ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕಿಂಗ್, ರೈಲ್ವೆ ಮತ್ತಿತರ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಎಲ್ಲ ಹಂತದಲ್ಲಿ ಕನ್ನಡ ಭಾಷೆಯಲ್ಲಿ ಬರೆದು ಪ್ರತಿಭೆಗೆ ತಕ್ಕಂತೆ ಅವಕಾಶಗಳು ಕನ್ನಡದ ಯುವಜನರಿಗೂ ಸಿಗಬೇಕು. ಇದು ಕನ್ನಡಿಗರ ರಾಜ್ಯಾಂಗ ಬದ್ದವಾದ ಹಕ್ಕು ಎಂದು ತಿಳಿಸಿದರು.
ಇಂಗ್ಳೀಷ್, ಹಿಂದಿ ಬಾರದ ಕನ್ನಡಿಗರು ಬ್ಯಾಂಕ್ ಗಳಲ್ಲಿ ವ್ಯವಹರಿಸಲು ಕಷ್ಟವಾಗಿದೆ. ಹಣ ಡ್ರಾ ಮಾಡುವುದೂ ಸೇರಿ ಎಲ್ಲ ಫಾರ್ಮ್ ಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿರುವುದು ಇದಕ್ಕೆ ಕಾರಣ. ಕೇಂದ್ರ ಮತ್ತು ರಾಜ್ಯದಲ್ಲಿ ಅದಿಕಾರದಲ್ಲಿರುವ ಡಬಲ್ ಇಂಜಿನ್ ಬಿಜೆಪಿ ಸರ್ಕಾರದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಿಗಬೇಕಾದ ಪ್ರಾತಿನಿಧ್ಯ , ಅವಕಾಶಗಳು ಸಿಗುತ್ತಿಲ್ಲ. ಇದರ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ದನಿ ಎತ್ತುತ್ತಿಲ್ಲ ಎಂದು ಆಪಾದಿಸಿದರು.