ರಾಜ್ಯದ ಡ್ರಗ್ಸ್ ಮತ್ತು ಬಿಟ್ ಕಾಯಿನ್ ಹಗರಣದಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ಖಾಸಗಿ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಮುಖ್ಯಮಂತ್ರಿಗಳು “ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಕರ್ನಾಟಕ ಸರ್ಕಾರ 2020ರಲ್ಲಿ ಪ್ರಕರಣ ದಾಖಲಿಸಿದೆ. ನಾವು ಮೂರು ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಿದ್ದೇವೆ. ದೋಷಾರೋಪ ಪಟ್ಟಿಯನ್ನು ರಚಿಸಲಾಗಿದೆ.” ಎಂದು ಹೇಳಿದರು.
ರಾಜ್ಯದಲ್ಲಿ ಬಿಟ್ ಕಾಯಿನ್, ಡ್ರಗ್ಸ್ ಮತ್ತು ಆನ್ ಲೈನ್ ಜೂಜಾಟವನ್ನು ತಡೆಯಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಎಎನ್ಐ ವರದಿಯನ್ನು ಉಲ್ಲೇಖಿಸಿ ಡೆಕನ್ ಕ್ರಾನಿಕಲ್ ತಿಳಿಸಿದೆ.
ಅಂತಾರಾಷ್ಟ್ರೀಯ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಮತ್ತು ಬಿಟ್ ಕಾಯಿನ್ ಹಗರಣವನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ವಹಿಸಲಾಗಿದೆ. ಇಲ್ಲಿ ಯಾವುದನ್ನು ಮುಚ್ಚಿಡುವುದಿಲ್ಲ. ಬಿಟ್ ಕಾಯಿನ್, ಡ್ರಗ್ಸ್ ಮತ್ತು ಆನ್ ಲೈನ್ ಜೂಜಾಟದ ವಿರುದ್ಧ ನಾನು ಯುದ್ದ ಸಾರಿದ್ದೇನೆ” ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ತನಿಖಾ ಸಂಸ್ಥೆಗಳು ಇವರನ್ನು ರಕ್ಷಿಸುತ್ತಿವೆ ಎಂದು ಆಪಾದಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ‘ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವ್ಯಾಪಾರಿಗಳು ಭಾಗಿಯಾಗಿರುವುದಕ್ಕೆ ಆಘಾತ ವ್ಯಕ್ತಪಡಿಸಿದ್ದರು.
ಕರ್ನಾಟಕ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ದೊಡ್ಡ ಸುದ್ದಿಯಾಗಿತ್ತು. ನಾನು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ. ಈ ಹಗರಣದಲ್ಲಿ ರಾಜಕಾರಣಿಗಳು ಮತ್ತು ಪೊಲೀಸ್ ಆದಿಕಾರಿಗಳು ಮತ್ತು ವ್ಯಾಪಾರಿಗಳ ಹೆಸರು ಕೇಳಿಬಂದಿರುವುದು ಆಘಾತ ತಂದಿದೆ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದರು.