Saturday, July 27, 2024
Google search engine
Homeಮುಖಪುಟದನಿ ಏರಿದರೆ ಧಣಿ ಇಳಿಯುವ ಧರೆಗೆ, ಸರಿವ ಮರೆಗೆ

ದನಿ ಏರಿದರೆ ಧಣಿ ಇಳಿಯುವ ಧರೆಗೆ, ಸರಿವ ಮರೆಗೆ

ದೇಶದಲ್ಲಿ ದನಿ ಏರುತ್ತಿದೆ. ಏಳು ತಿಂಗಳು ಕಳೆದರೂ ಆ ದನಿ ದಣಿದಿಲ್ಲ. ಬದಲಿಗೆ ದನಿ ಜೋರಾಗಿದೆ. ಕಿವುಡ ಧಣಿಗೆ ಆ ದನಿ ಹೃದಯದ ಸಂಕಟ ಮುಟ್ಟಿಸುವ ಯತ್ನ ಮಾಡುತ್ತಿದೆ. ಧಣಿ ಕುಂಭಕರ್ಣನ ನಿದ್ರೆಯಲ್ಲಿ ನಿರತನಾಗಿದ್ದಾನೆ. ಯಾವುದ್ಯಾವುದೋ ಹತಾರಗಳು ಮೂಲಕ ತಿವಿದರೂ ಗೊರಕೆಯ ಸದ್ದು ನಿಂತಿಲ್ಲ. ಆತ ನಿದ್ರೆಯಿಂದ ಏಳುವುದಕ್ಕೆ ಇನ್ನು ಕೆಲ ವರ್ಷಗಳು ಬೇಕು. ಎದ್ದರೆ ಅಪಾರ “ಆಹಾರವೂ” ಬೇಕು. ಅದಕ್ಕೆ “ಧಣಿಗಣ” ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ನಡುವೆ ದನಿ ಅಡಗಿಸುವ ಕೆಲಸವು ನಡೆಯುತ್ತಿದೆ. ಆದರೆ ಆ ದನಿಯ ಬಿಸಿಯುಸಿರು ಧಣಿಯ ಕುರ್ಚಿಗೆ ಕುತ್ತು ತರುವುದು ಮಾತ್ರ ಖಚಿತ.

ಇತಿಹಾಸದ ಪುಟುಗಳು ಒಂದೊಂದೇ ತೆರೆದುಕೊಳ್ಳುತ್ತಿವೆ. ಅಲ್ಲಿ ದಾಖಲುಗೊಂಡಿರುವ ಪದಗಳ ಅರ್ಥದ ಅರಿವು ಆಗುತ್ತಿದೆ. ಗದ್ದುಗೆ ಏರಿದ ಧಣಿಗಳು ಕುಣಿದು ದಣಿದು ಇಳಿದುಹೋದ ನಿದರ್ಶನಗಳು, ರಾಜ್ಯಗಳು ಅಳಿದುಹೋದ ಚಿತ್ರಣವೂ ಗೋಚರಿಸುತ್ತಿದೆ. ಆ ‘ದನಿ’ ಅಡಗಿಸಿದ ಎಲ್ಲಾ ಸಾಮ್ರಾಜ್ಯಗಳು ನಾಶವಾದ ಉದಾಹರಣೆಗಳು ಇವೆ. ಮಹಾರಾಜರು, ಸಾಮಾಂತರು, ಪಾಳೇಗಾರರು ಹೀಗೆ ಎಲ್ಲರೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದ್ದಾರೆ.

‘ಭರತ ಚಕ್ರವರ್ತಿ’ ಜಗತ್ತನ್ನು ಗೆದ್ದು ಬಂದಾಗ ‘ಚಕ್ರರತ್ನ’ (ಕುದುರೆ) ಧರ್ಮಶಾಲೆಗೆ ಬಂದು ನಿಲ್ಲುತ್ತದೆ. ತಾನು ಇಡೀ ಜಗತ್ತನ್ನೇ ಗೆದ್ದಿದ್ದೇನೆ ಎಂದು ಬೀಗುವ ಭರತ ಚಕ್ರವರ್ತಿಗೆ ಸಣ್ಣದೊಂದು ಸವಾಲು ಎದುರಾಗುತ್ತದೆ. ಧರ್ಮಶಾಲೆಯ ಹೊರಗೆ ನಿಲ್ಲಲು ಕಾರಣವೇನು? ಎಂದು ಚಕ್ರರತ್ನವನ್ನು ಭರತ ಕೇಳುತ್ತಾನೆ. ಆಗ ಚಕ್ರರತ್ನ ‘ನಿನ್ನ ತಮ್ಮ ಬಾಹುಬಲಿ’ಯನ್ನು ಗೆಲ್ಲದೆ ನೀನು ಜಗತ್ತನ್ನು ಗೆದ್ದಿದ್ದೇನೆ ಎಂದು ಬೀಗುವಂತಿಲ್ಲ ಎಂದು ಹೇಳುತ್ತದೆ. ಆ ‘ದನಿ’ಗೆ ಭರತ ಚಕ್ರವರ್ತಿಯ ಮನಸ್ಸು ಅಳುಕುತ್ತದೆ. ಆದರೂ ಅದನ್ನು ತೋರಗೊಡದೆ ‘ಬಾಹುಬಲಿ’ಯ ಜೊತೆ ಮಲ್ಲಯುದ್ದ, ದೃಷ್ಟಿಯುದ್ದ ಹೀಗೆ ಹಲವು ಯುದ್ದಗಳನ್ನು ಮಾಡಿ ಭರತ ಸೋಲುತ್ತಾನೆ. ಭರತನ “ಗರ್ವರಸ” ಭಂಗವಾಗುತ್ತದೆ. ನಾಚಿಕೆಯಿಂದ ತಲೆ ತಗ್ಗಿಸುತ್ತಾನೆ ಭರತ.

ಆದರೆ ಬಾಹುಬಲಿ ಗೆದ್ದೆನೆಂದು ಬೀಗಲಿಲ್ಲ. ರಾಜ್ಯವನ್ನು ಭರತನಿಗೆ ನೀಡಿ ತಾನು ಗೆದ್ದ ಪ್ರದೇಶವನ್ನು ಬಿಟ್ಟು ತಪಸ್ಸಿಗೆ ಹೋಗುತ್ತಾನೆ. ಭರತ ತನ್ನ ಹೋರಾಟ, ಸಾಹಸ ಕಾರ್ಯಗಳನ್ನು ಕೆತ್ತಿಸಲು ಗೊಮ್ಮಟಗಿರಿಗೆ ಬರುತ್ತಾನೆ. ಅಲ್ಲಿ ಭರತನ ಹೆಸರು ಕೆತ್ತಿಸಲು ಜಾಗವೇ ಇರುವುದಿಲ್ಲ. ಎಷ್ಟೋ ಮಂದಿ ಸಾಮ್ರಾಟರ ಹೆಸರುಗಳಿಂದ ಗೊಮ್ಮಟಗಿರಿಯ ಬಂಡೆ ತುಂಬಿಹೋಗಿರುತ್ತದೆ. ಆಗ ಮತ್ತೊಮ್ಮೆ ಗರ್ವಭಂಗವಾಗುತ್ತದೆ ಭರತನಿಗೆ. ನಂತರ ನಿರ್ಮಲ ಧರ್ಮದಿಂದ ಧರೆಯನ್ನು ಪಾಲಿಸುತ್ತಾನೆ. ಚಕ್ರರತ್ನದ ‘ದನಿ’ ಎತ್ತದಿದ್ದರೆ ಭರತ ಬೀಗುತ್ತಲೇ ಇರುತ್ತಿದ್ದ. ಗರ್ವದರಸ ಏರುತ್ತಲೇ ಇರುತ್ತಿತ್ತು. ಧಣಿಯ ಗರ್ವರಸ ಏರುತ್ತಿದೆ. ‘ಚಕ್ರರತ್ನದ ದನಿ’ ಮೊಳಗುತ್ತಿದೆ. ‘ಪ್ರಜೆಯಂ ಪಾಲಿಸು ನಿರ್ಮಲ ಧರ್ಮದಿಂ’ ಎಂದು.

ಸೋಮನಾಥ ಕವಿ ಅರಸ ಹೇಗಿರಬೇಕು. ಆತ ಜನರಿಗೆ ಹೇಗೆ ರಕ್ಷಣೆ ನೀಡಬೇಕು. ಪ್ರಜಾಪಾಲಕ ಅಂದರೆ ಹೇಗಿರಬೇಕು ಎಂದು ಹೇಳುತ್ತಾನೆ. “ಪ್ರಜೆಯಂ ಪಾಲಿಸ ಬಲ್ಲೊಡೆ ಆತನ್ ಅರಸಂ, ಕೈಯಾಸೆಯಂ ಮಾಡದಂ ನಿಜಮಂತ್ರಿ, ಸಲಹಲ್ ಬಲ್ಲೊಡೆ ಯೋಗಿ” ಇದ್ಯಾವುದೂ ಇಂದು ನಡೆಯುತ್ತಿಲ್ಲ. ಪ್ರಜೆಗಳ ಸಂಕಟ ಕೇಳಬೇಕಾದ ದೊರೆ/ಧಣಿಯ ಕಿವಿ ಜಡ್ಡುಗಟ್ಟಿದೆ. ಆತನ ಮನಸ್ಸು ತುಪ್ಪೇರಿದ ದರ್ಪಣದಂತೆ ಆಗಿದೆ. ಧಣಿಯ ‘ಸಂರಕ್ಷಕರ’ ಪಾಲನೆಗೆ ಒತ್ತು ನೀಡಲಾಗುತ್ತಿದೆ. ಸಾಮಾನ್ಯ ಪ್ರಜೆಗಳು ಸಂಕಟ ಅನುಭವಿಸುತ್ತಲೇ ದನಿ ಹೊರಡಿಸುತ್ತಿದ್ದಾರೆ. ನಿಜಮಂತ್ರಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾನೆ. ಯೋಗಿ ಸಲಹುವ ಬದಲು ಕಲಹವಿಕ್ಕುವ ಕುವರನಾಗಿದ್ದಾನೆ. ನಿರ್ಮಲ ಧರ್ಮ ಕಾಡು ಸೇರಿದೆ.

“ಚಕ್ರರತ್ನ” ಧಣಿಗೆ ದನಿ ಏರಿಸಿ ಹೇಳುತ್ತಿದೆ. ನಡೆಗೂ ನುಡಿಗೂ ಹೊಂದಾಣಿಕೆ ಇಲ್ಲ. ಗಾಂಧೀಜಿ ಅಹಿಂಸೆಯ ಮಂತ್ರ ಜಪಿಸುತ್ತ ಚರಕ ಹಿಡಿದು ಕುಳಿತು ನೂಲಿದಂತೆ ಮಾಡಿ, ಗುಹೆಯ ಸೇರಿ ತಪಸ್ಸು ಮಾಡಿದರೂ ಮನಸ್ಸಿನ ಗರ್ವರಸ ಮಡುಗಟ್ಟಿ ಹರಿಯುತ್ತಿದೆ. ಇದು ನಿಲ್ಲದಿದ್ದರೆ ದನಿ ಏರುತ್ತಲೇ ಇರುತ್ತದೆ. ಧಣಿ ಇಳಿಯಲೇ ಬೇಕು ಧರೆಗೆ ನಂತರ ಧಣಿ ಮರೆಗೆ ಸರಿಯುವುದು ಇತಿಹಾಸದ ಪುಟ ಸೇರುವುದು ಸೂರ್ಯಸತ್ಯ.

ಕಾಲ ಉರುಳುತ್ತಿದೆ. ಕಪ್ಪು, ಬಿಳಿದಾಗಿ, ಮಾಂಸಖಂಡಗಳಿಂದ ತುಂಬಿಕೊಂಡಿದ್ದ ಮೈಕೈಮುಖ ಸುಕ್ಕುಗಟ್ಟುವ ಮುನ್ನ ‘ಧಣಿ ಮಾಡಿದ್ದು ತಪ್ಪಲ್ಲ’ ಎಂಬ ಭಾವನೆಯಿಂದ ಹೊರಬಂದು ನಿರ್ಮಲ ಧರ್ಮದಿಂದ ಪಾಲಿಸು ಧರೆಯಂ. ಪೊರೆ ಸರ್ವರನು. “ಕೆರೆಯಂ ಕಟ್ಟಿಸು, ಬಾವಿಯಂ ಸವೆಸು…” ‘ನೇಗಿಲ ಕುಳದೊಳಗೆ ಅಡಗಿದೆ ಧರ್ಮ’ ಅನ್ನದೊಳಡಗಿದೆ ಜಗದ ಜೀವ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular