ವಿಶ್ವದಲ್ಲಿ ಬೌದ್ದ ಸಾಹಿತ್ಯದೊಂದಿಗೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಜೀಸಸ್ ಹಿಂಸೆ ಮಾಡಬಾರದೆಂದು ತನ್ನ ಅನುಯಾಯಿಗಳಿಗೆ ಹೇಳಿದ ಮೇಲೂ ದೊಡ್ಡ ಹಿಂಸೆಗೆ ಕಾರಣವಾಗಿದೆ. ಹಾಗೆಯೇ ಪಕ್ಕದ ರಾಷ್ಟ್ರಗಳಲ್ಲಿ ಮಾತ್ರ ಹಿಂಸೆ ನಡೆಯುತ್ತಿಲ್ಲ. ಭಾರತ ದೇಶದಲ್ಲೂ ಹಿಂಸೆ ತಾಂಡವವಾಡುತ್ತಿದೆ ಎಂದು ಹಿರಿಯ ಚಿಂತಕ ಹಾಗೂ ದಲಿತ ಸಂಘರ್ಷ ಸಮಿತಿ ಸ್ಥಾಪಕರಲ್ಲೊಬ್ಬರಾದ ಎಚ್.ಎಂ.ರುದ್ರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಜಿ.ವಿ.ಆನಂದಮೂರ್ತಿ ಅವರ ಬುದ್ದನ ಕಥೆಗಳು ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಡಂಬರ, ಅತಿರಂಜಕತೆ ಎಲ್ಲರ ಬದುಕನ್ನು ಕಿತ್ತುಕೊಂಡಿದೆ ಎಂದು ತಿಳಿಸಿದರು. ಕುವೆಂಪು ತಮ್ಮ ಕೃತಿಗಳಲ್ಲಿ ಸನಾತನ ಧರ್ಮ ಆಧ್ಯಾತ್ಮಿಕ ಸಮಾನತೆಯನ್ನು ನಿರಾಕರಿಸುತ್ತದೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಇದು ಸತ್ಯವೂ ಕೂಡ. ಹೀಗಾಗಿ ಬುದ್ದನ ಬೆಳಕಿನಲ್ಲಿ ಸರಿಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು.
ಬುದ್ದನ ವಿಚಾರಗಳಲ್ಲಿ ಬಿಡುಗಡೆಯ ಮಾರ್ಗವಿದೆ. ವೈಚಾರಿಕ ಶಕ್ತಿ ಇದೆ. ಮಾನಸಿಕ ಗುಲಾಮಗಿರಿಯಿಂದ ಹೇಗೆ ಬಿಡುಗಡೆ ಪಡೆಯಬಹುದು ಎಂಬುದನ್ನು ತೋರಿಸುತ್ತದೆ ಎಂದರು. ಇದೇ ಕಾರಣಕ್ಕಾಗಿ ಡಾ.ಬಿ.ಆರ್. ಆಂಬೇಡ್ಕರ್ ಸಂವಿಧಾನದಲ್ಲಿ ಬುದ್ದನ ತತ್ವಗಳನ್ನು ಅಳವಡಿಸಿದರು. ಸಮಾನತೆಗೆ ಅವಕಾಶ ಕಲ್ಪಿಸಿಕೊಟ್ಟರು ಎಂದು ತಿಳಿಸಿದರು.
ಕೃತಿಕಾರ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿ, ಬೌದ್ಧದರ್ಶನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಬುದ್ದನ ಕಥೆಗಳು ನೆಲದಲ್ಲಿ ಎಲ್ಲೆಲ್ಲೋ ಚದುರಿಹೋಗಿದ್ದವು. ಎಲ್ಲೋ ಬಿದ್ದ ಬೀಜಗಳು, ಓದಿ ಕಂಡುಕೊಂಡ ಕಥೆಗಳನ್ನು ಇಲ್ಲಿ ಪೋಣಿಸಿದ್ದೇನೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದರು.
ಬೌದ್ಧ ವಿಚಾರ ಜೀವನ ತತ್ವ. ಇಡೀ ಸಮಾಜ, ವ್ಯಕ್ತಿಯ ಬದುಕನ್ನು ಶ್ರೇಷ್ಟಗೊಳಿಸುವುದು ಬುದ್ದನ ಮಾರ್ಗ ಎಂದು ನಾನು ತಿಳಿದಿದ್ದೇನೆ. ಬೌದ್ಧ ಒಂದು ಧರ್ಮವಲ್ಲ. ಯಾವಾಗ ಧರ್ಮವಾಗುತ್ತದೋ ಆಗ ಅದು ಬದಲಾವಣೆಯನ್ನು ನಿರಾಕರಿಸುತ್ತದೆ. ತಾನು ಹೇಳಿದ್ದೇ ಸತ್ಯವೆಂದು ಬಿಂಬಿಸುತ್ತದೆ. ಆದ್ದರಿಂದ ಬೌದ್ಧ ಒಂದು ಜೀವನ ಕ್ರಮ ಎಂದರು.
ಶಂಕರಪ್ಪ, ವೀಚಿ ಮತ್ತು ಕೆ.ಬಿ.ಸಿದ್ದಯ್ಯ ನನ್ನಲ್ಲಿ ಬೌದ್ಧ ಮಾರ್ಗದ ಹಾದಿ ತೋರಿದ ಚೇತನಗಳು. ಕೃತಿಯಲ್ಲಿ ಒಳ್ಳೆಯದಿದ್ದರೆ ಆ ಚೇತನಗಳಿಗೆ ಸೇರಬೇಕು. ಕೃತಿಯಲ್ಲಿ ಕೆಟ್ಟದ್ದಿದ್ದರೆ ಅದು ನನಗೆ ಸೇರಬೇಕು. ಬುದ್ದನಲ್ಲಿ ಆಕಸ್ಮಿಕವಿಲ್ಲ. ಎಲ್ಲದಕ್ಕೂ ಕಾರ್ಯಕಾರಣ ಸಂಬಂಧವಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಚಲನಚಿತ್ರ ಇತಿಹಾಸಕಾರ ದೊಡ್ಡಹುಲ್ಲೂರು ರುಕ್ಕೋಜಿ, ಸಾಮಾಜಿಕ ಚಿಂತಕಿ ಚೇತನಾ ಬಾಲಕೃಷ್ಣ ಉಪಸ್ಥಿತರಿದ್ದರು ಬೋಧಿಮಂಡಲದ ಮುಖ್ಯಸ್ಥ ಡಾ.ಬಸವರಾಜ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕವಿ ಕಂಟಲಗೆರೆ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.