ಶಿಕ್ಷಣ ಸಚಿವ ಚರಂಜಿತ್ ಸಿಂಗ್ ಚೆನ್ನಿ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಶನಿವಾರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ಸ್ಥಾನಕ್ಕೆ ಚರಂಜಿತ್ ಸಿಂಗ್ ಚೆನ್ನಿ ಆಯ್ಕೆಯಾಗಿದ್ದಾರೆ.
ಚೆನ್ನಿ ಅವರು ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅಲ್ಲದೆ ಶಾಸಕಾಂಗ ಪಕ್ಷದ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
ರಾಜ್ಯದಲ್ಲಿ ಚೆನ್ನಿ ದಲಿತ ವಿಷಯಗಳನ್ನು ಎತ್ತಿಕೊಂಡು ಹೋರಾಟ ನಡೆಸಿದ್ದರು. ಅಲ್ಲದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯವೆದ್ದಿದ್ದರು.
ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ. ಚೆನ್ನಿ ಜಾಟ್ ಸಿಖ್ ಸಮುದಾಯದವರಾಗಿದ್ದಾರೆ. ಸಿಖಿಂದರ್ ಸಿಂಗ್ ರಥವ ಅವರನ್ನು ಸಿಎಲ್.ಪಿ ನಾಯಕರಾಗಿ ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಇದಕ್ಕೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಹೀಗಾಗಿ ಸಿಎಲ್.ಪಿ ನಾಯಕನ ಆಯ್ಕೆ ವಿಚಾರ ಕಗ್ಗಂಟಾಗಿತ್ತು. ಆದರೆ ಭಾನುವಾರ ಸಭೆ ಸೇರಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಮತ್ತು ವೀಕ್ಷಕರಾಗಿ ಆಗಮಿಸಿದ್ದ ಅಜಯ್ ಮಾಕನ್ ಮತ್ತು ಹರೀಶ್ ಚೌದರಿ ಶಾಸಕರನ್ನು ಭೇಟಿಯಾಗಿ ಪ್ರತ್ಯೇಕ ಮಾಹಿತಿ ಸಂಗ್ರಹಿಸಿದ್ದರು.
ಸಂಜೆ ಸಿಎಲ್.ಪಿ ನಾಯಕರನ್ನಾಗಿ ಚೆನ್ನಿ ಅವರನ್ನು ಆಯ್ಕೆ ಮಾಡುತ್ತಿದ್ದಂತೆ ಬೆಂಬಲಿಗರು ಚಂಡೀಗಡದ ರಾಜಭವನದ ಹೊರಭಾಗದಲ್ಲಿ ಕುಣಿದು ಸಂಭ್ರಮಿಸಿದರು.