ಕಥೆ, ಸಂಗೀತ, ಸಾಹಿತ್ಯ ಧರ್ಮ ಇವೆಲ್ಲಾ ಒಂದು ಹಂತಕ್ಕೆ ಮೈಮರೆಸುತ್ತವೆ. ಇದು ಒಳ್ಳೆಯದಲ್ಲ. ಯಾವುದೇ ಕಥೆ, ದರ್ಶನ, ಕಲೆಯಾಗಲಿ ಅಂತಿಮವಾಗಿ ತತ್ವವಾಗಿ ಪರಿಣಮಿಸದೇ ಹೋದರೆ ಅದರ ಉದ್ದೇಶವೇ ಅರ್ಥವಾಗುವುದಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ತುಮಕೂರಿನ ಕನ್ನಡ ಭವನದಲ್ಲಿ ಬೋಧಿಮಂಡಲ ಮತ್ತು ಪ್ರೀತಿ ಪುಸ್ತಕ ಪ್ರಕಾಶನ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಡಾ.ಜಿ.ವಿ.ಆನಂದಮೂರ್ತಿ ಅವರ ಬುದ್ಧನ ಕಥೆಗಳು ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಿತ್ಯದ ಭಾಷೆಯನ್ನು ದಾಟದೆ ಹೋದರೆ ಬೌದ್ದ ತಾತ್ವಿಕತೆಯನ್ನು ಹೇಳಲು ಸಾಧ್ಯವಿಲ್ಲ. ಹಾಗೆಯೇ ಕಸುಬನ್ನು ಅತ್ಯಂತ ಶ್ರದ್ಧೆಯಿಂದ ಮಾಡುವುದರ ಮೇಲೆ ಬೌದ್ಧ ತಾತ್ವಿಕತೆ ನಿಂತಿದೆ. ಚಮ್ಮಾರ, ಕಮ್ಮಾರನ ಅಡಿಗಲ್ಲಿನ ಮೇಲೆ ಮಾಡುವ ಕೆಲಸದಲ್ಲಿ ಸಾಲು ಪಕ್ಕ ಸಾಲು ಉಳುವ ಸಾಲಿನಲ್ಲಿ, ದಶದಿಕ್ಕಿನಿಂದ ಎಳೆಗಳನ್ನು ಎಳೆತಂದು ಸೀರೆಯನ್ನು ನೇಯ್ಗೆ ಮಾಡುವ ಕಾಯಕದಲ್ಲಿ ಬೌದ್ಧ ತಾತ್ವಿಕತೆ ಇದೆ. ಇದು ಒಂದು ಮಾರ್ಗ ಎಂದರು.
ಮತ್ತೊಂದು ಮಾರ್ಗ, ನಿನ್ನ ಒಳಗನ್ನು ನೀನು ನೋಡಿಕೊಂಡು ಹೋಗುವುದು. ಕತ್ತಲು ಇರುವ ಕಡೆ ಒಂದು ದೀಪ ಹಚ್ಚುವುದು. ಆ ದೀಪವನ್ನು ಅಂಗೈಯಲ್ಲಿ ಹಿಡಿದು ನಡೆದುಕೊಂಡು ಹೋಗುವುದು. ಇಲ್ಲಿ ಯಾರ ಹಂಗೂ ಇಲ್ಲ, ಯಾವ ಗುರುವು, ಶಿಷ್ಯನೂ ಇರುವುದಿಲ್ಲ. ಹಾಗಾಗಿ ಅಂಗೈಯಲ್ಲಿನ ಜ್ಯೋತಿಯನ್ನು ಒಳಗಿನಿಂದ ಹಚ್ಚುತ್ತಾ ತನ್ನನ್ನು ತಾನು ಕಂಡುಕೊಳ್ಳುವುದೇ ಅಗಿದೆ. ಬುದ್ದತತ್ವ ಅನ್ನೋದು ಹೊರಗಿನಿಂದ ಆವಾಹಿಸಿಕೊಳ್ಳಬೇಕಾದ ಸತ್ವವಲ್ಲ. ಅದು ನನ್ನೊಳಗೆ ಇರುವ ದೀಪವನ್ನು ಹಚ್ಚಿಕೊಳ್ಳಬೇಕು. ಈ ದೀಪವನ್ನು ಹಚ್ಚಿಕೊಳ್ಳಬೇಕಾದ ಕಿಡಿಯ ಹಾಗೆ ಈ ಬುದ್ದನ ಕಥೆಗಳು ಇವೆ ಎಂದು ಹೇಳಿದರು.
ಬುದ್ದು ಗುರು ಒಬ್ಬ ಅಲ್ಲ. ಸಾವಿರಾರು ಬುದ್ದನ ಕಲ್ಪನೆಗಳು ಇವೆ. ಅದರಲ್ಲಿ ನಾನೂ ಒಬ್ಬ ಅಂದುಕೊಳ್ಳಬಹುದು. ಎಷ್ಟು ಜನರಿದ್ದಾರೋ ಅಷ್ಟು ಬುದ್ದರಿದ್ದಾರೆ. ಬುದ್ದ ಹೀಗೆ ಹೇಳಿದ ಎಂದು ಯಾರೂ ಹೇಳುವುದಿಲ್ಲ. ನಾನು ಏನು ಕೇಳಿಸಿಕೊಂಡೆ ಎಂಬುದನ್ನಷ್ಟೇ ಭಿಕ್ಕುಗಳು ಹೇಳುತ್ತಾರೆ. ಬುದ್ದನನ್ನು ನಾನು ಹೇಗೆ ಕೇಳಿಸಿಕೊಂಡೆ ಎಂಬುದು ಮುಖ್ಯ. ಬುದ್ದ ಒಬ್ಬ ವಿಜ್ಞಾನಿ. ಇದೇ ರೀತಿಯಲ್ಲಿ ಕೇಳಿಸಿಕೊಳ್ಳುವ ಅಗತ್ಯವಿದೆ. ಬುದ್ದ ಲೋಕವನ್ನು ಸರಿಯಾಗಿ ವಿವರಿಸಿಕೊಟ್ಟ ವಿಜ್ಞಾನಿ ಎಂದು ವಿವರಿಸಿದರು.
ಬುದ್ದನ ಎದುರಿಗೆ ನಿಲ್ಲಬೇಕು. ಸಮಾನವಾಗಿ ನಿಲ್ಲಬೇಕು. ಇದು ಬುದ್ದ ಬಯಸಿದ್ದು. ಪಾದದ ಬಳಿ ನಿಲ್ಲುವುದಲ್ಲ. ಅದು ಭಕ್ತಿಯಾಗುತ್ತದೆ. ಬುದ್ದ ಭಕ್ತಿಯನ್ನು ಬಯಸಿದವನು ಅಲ್ಲ. ಸಮಾನತೆ ಬಯಸಿದವನು. ಬುದ್ದನ ಬಳಿ ಸಂಪೂರ್ಣ ಸಮರ್ಪಣೆ ಅಲ್ಲ. ವೈದ್ಯನ ಮುಂದೆ ಕುಳಿತಹಾಗೆ. ವೈದ್ಯ ಹೇಳಿದ್ದೆಲ್ಲವನ್ನೂ ರೋಗಿ ನಂಬಬಾರದು. ಅದನ್ನು ಪ್ರಶ್ನಿಸಬೇಕು. ಆನಂತರವೇ ಚಿಕಿತ್ಸೆಗೆ ಒಡ್ಡಿಕೊಳ್ಳಬೇಕು. ಹಾಗಾಗಿ ಬುದ್ದ ಒಬ್ಬ ವೈದ್ಯನ ಥರ ಎಂದು ವಿಶ್ಲೇಷಿಸಿದರು.
ಬುದ್ದಮಾರ್ಗ ಉತ್ತು ಬಿತ್ತಿ ಬೆಳೆದ ರೀತಿಯದು. ಅದು ಓದಿನಿಂದ, ಕೇಳಿಸಿಕೊಳ್ಳುವುದರಿಂದ ಮತ್ತು ಇತರೆ ಆವರಣಗಳಿಂದ ಪಡೆದುಕೊಳ್ಳುವುದಲ್ಲ. ಅದು ಲಿಂಗಾಯತದಂತೆ. ಲಿಂಗ ಕಟ್ಟಿಕೊಳ್ಳುವುದರಿಂದ, ಹುಟ್ಟಿನಿಂದ ಲಿಂಗಾಯತನಾಗುವುದಿಲ್ಲ. ಅದು ಉತ್ತು, ಬಿತ್ತು ಬೆಳೆಯಬೇಕು. ಹಾಗೆಯೇ ಬೌದ್ಧ ತಾತ್ವಿಕತೆ ಉತ್ತು ಬಿತ್ತಿ ಬೆಳೆಯಬೇಕಾದುದು ಎಂದು ಹೇಳಿದರು.
ಸರಿಯಾಗಿ ಬಾಳುವುದು. ಹೀಗೆಂದರೆ ಹೋಗುತ್ತಹೋಗುತ್ತಲೇ ಕೇಳಿಕೊಂಡು ಹೋಗುವ ಮತ್ತು ಸರಿಪಡಿಸಿಕೊಂಡು ಹೋಗುವುದು ಬೌದ್ಧ ತಾತ್ವಿಕತೆ ಎಂದರು.
ಜನರು ವಾಸ್ತವದಿಂದ ಕಥೆಗೆ ಹೋಗುವ ಮನಸ್ಥಿತಿಗೆ ಹೊಂದಿಕೊಂಡವರು. ಕಥೆ, ದರ್ಶನಕ್ಕೆ ಕಾಲ್ಪನಿಕ ಭಾಷೆ ಬಳಸಿರುವುದೇ ಹೆಚ್ಚು. ಕನ್ನಡ ಸಾಹಿತ್ಯ ಬೂಸ ಸಾಹಿತ್ಯ ಎಂಬ ಮಾತನ್ನು ಕುವೆಂಪು, ಬಸವಲಿಂಗಪ್ಪ ಹೇಳಿದ್ದರು. ಆದರೆ ಅದು ಇಡೀ ವಿಶ್ವಸಾಹಿತ್ಯಕ್ಕೆ ಸಂಬಂಧಿಸಿದ್ದು, ಈ ಬೂಸಾ ಸಾಹಿತ್ಯ ಸುಮ್ಮನಿರುವುದಿಲ್ಲ. ಅದು ಬೆಳೆಯುತ್ತ ಹೋಗುತ್ತದೆ. ಅಜ್ಞಾನವನ್ನು ತುಂಬುತ್ತದೆ. ಇದನ್ನು ತೊಡೆದುಹಾಕುವುದೇ ಜ್ಞಾನ ಎಂದು ಹೇಳಿದರು.
ಯಾವುದು ಸಾದು, ಯಾವುದು ಅಸಾದು ಎಂಬುದನ್ನು ಹೋಗುತ್ತಲೇ ನಿವಾರಿಸಿಕೊಳ್ಳಬೇಕು. ಬೌದ್ಧ ತಾತ್ವಿಕತೆ ತಿಳಿದುಕೊಂಡು ಗುಡ್ಡೆಹಾಕುವುದಲ್ಲ. ಇರುವುದನ್ನು ಕಳೆದುಕೊಳ್ಳುವುದು. ಸುಮ್ಮನಿರುವುದು ಹೇಗೆ ಎಂದರೆ ಏನು ಹೇಳುವುದು. ಬೌದ್ಧ ತಾತ್ವಿಕತೆ ಸುಮ್ಮನಿರುವುದು. ಮಹಾವಿಜ್ಞಾನಿ ಏನನ್ನು ಹೇಳಲಿಲ್ಲ ಎಂಬುದಕ್ಕಿಂತ ಏನು ಹೇಳಿಲ್ಲ ಎಂಬುದು ಮುಖ್ಯ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.