ಜೈಲು ಖೈದಿಗಳ ಗುರುತು (ಕರ್ನಾಟಕ ತಿದ್ದುಪಡಿ) ಮಸೂದೆ-2021, ಕರ್ನಾಟಕ ಜೈಲು ಅಭಿವೃದ್ಧಿ ಮಂಡಲಿ ಬಲಪಡಿಸುವ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ಕರ್ನಾಟಕ ವಿಧಾನಸಭೆಯಲ್ಲಿ ಸೆಪ್ಟೆಂಬರ್ 17ರಂದು ಮಂಡಿಸಿ ಅಂಗೀಕರಿಸಲಾಯಿತು.
ಜೈಲು ಖೈದಿಗಳ ಗುರುತು (ಕರ್ನಾಟಕ ತಿದ್ದುಪಡಿ ) ಮಸೂದೆ ಅಂಗೀಕಾರದಿಂದ ಖೈದಿಗಳ ರಕ್ತ, ಡಿಎನ್ಎ, ಧ್ವನಿ, ಕಣ್ಣಿನ ಪಾಪೆಗಳನ್ನು ಸಂಗ್ರಹಿಸಬಹುದಾಗಿದೆ. ಖೈದಿಗಳನ್ನು ಪರಿಣಾಮಕಾರಿ ಪತ್ತೆ, ಅಪರಾಧ ಮತ್ತು ಶಾಂತಿಭಂಗ ತಡೆಗೆ ಈ ಮಸೂದೆ ಮೂಲಕ ಕ್ರಮ ಕೈಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಖೈದಿಗಳ ಪತ್ತೆಗೆ ಆಗುತ್ತಿದ್ದ ವಿಳಂಬ ಮತ್ತು ಕೆಲಸದ ಒತ್ತಡವನ್ನು ತಪ್ಪಿಸಲು ಹಾಗೂ ಖೈದಿಗಳ ರಕ್ತ ಮಾದರಿ, ಡಿಎನ್ಎ, ಧ್ವನಿ, ಕಣ್ಣಿನ ಪಾಪೆ(ಐರಿಸ್)ಗಳನ್ನು ಸಂಗ್ರಹಿಸುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಪ ಪೊಲೀಸ್ ಆಯುಕ್ತರ ನೀಡಲಾಗಿದೆ.
ವಿಧಾನಸಭೆಯಲ್ಲಿ ಈ ಮಸೂದೆ ಮಂಡಿಸಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, “ಈವರೆಗೆ ಪಾದದ ಬೆರಳುಗಳ ಗುರುತು ಮಾತ್ರ ಸಂಗ್ರಹ ಮಾಡಲಾಗುತ್ತಿತ್ತು. ಈ ಮಸೂದೆ ಅಂಗೀಕಾರದಿಂದ ಖೈದಿಗಳ ರಕ್ತ ಮಾದರಿ, ಡಿಎನ್ಎ, ಧ್ವನಿ, ಮತ್ತು ಐರಿಸ್ ಸ್ಕ್ಯಾನ್ ಸ್ಯಾಂಪಲ್ ಸಂಗ್ರಹಿಸಬಹುದು ಎಂದು ಹೇಳಿದರು.
ರಾಜ್ಯದಲ್ಲಿ 10 ವರ್ಷದ ಬಳಿಕ ನಾವು ಖೈದಿಯ ಗುರುತು ಮಾದರಿಗಳನ್ನು ಪಡೆಯಲು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರಿಗೆ ಅಧಿಕಾರ ಇರುವುದು ಬಿಟ್ಟರೆ ನ್ಯಾಯಾಲಯ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಖೈದಿಯ ಗುರುತು ಮಾದರಿ ಪಡಯಲು ಅನುಮತಿ ನೀಡಬಹುದು ಎಂದರು.
ಕಾಂಗ್ರೆಸ್ ಸದಸ್ಯರಾದ ತನ್ವೀರ್ ಸೇಠ್ ಮಾತನಾಡಿ, ಖೈದಿಗಳ ಗುರುತು ಪತ್ತೆ ಇದು ಅವಶ್ಯಕ. ಆದರೆ ಆಧಾರ್ ಮಾಹಿತಿ ಇದೆಯಲ್ಲ ಎಂದು ತಿಳಿಸಿದರು. ಪ್ರಿಯಾಂಕ ಖರ್ಗೆ ಮಾತನಾಡಿ ಖೈದಿಗಳ ಗುರುತು ಪಡೆಯುವುದು ಅವಶ್ಯಕವಾದರೂ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಏನು ಪ್ರಯೋಜನ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಜೈಲು ಅಭಿವೃದ್ಧಿ ಮಂಡಳಿಯನ್ನು ಬಲಪಡಿಸುವ, ಜೈಲುಗಳನ್ನು ಸುಧಾರಿಸುವ, ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಮಸೂದೆಗೂ ಅಂಗೀಕಾರ ದೊರೆಯಿತು. ಅಲ್ಲದೆ ಕರ್ನಾಟಕ ಪ್ರಿಜನ್ ಡೆವೆಲಪ್ಮೆಂಟ್ ಮಸೂದೆ ಮಂಡಿಸಿ ಅಂಗೀಕಾರ ಪಡೆದಿದ್ದು, ಇದರ ಮೂಲಕ ಖೈದಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು, ಖೈದಿಗಳ ಕಲ್ಯಾಣ, ಜೈಲುಗಳ ವಿಸ್ತರಣೆ, ಸಿಬ್ಬಂದಿ ನೇಮಕಕ್ಕೆ ಅವಕಾಶ ದೊರಕಿದೆ.