ದೇಶದ ವಿವಿಧ ಹೈಕೋರ್ಟ್ ಗಳಿಗೆ ಎಂಟು ಮುಖ್ಯನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ.
ಪಶ್ಚಿಮಬಂಗಾಳದ ಕಲ್ಕತ್ತಾ ಹೈಕೋರ್ಟ್ ಹಾಲಿ ಮುಖ್ಯನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಸೇರಿದಂತೆ 8 ಮಂದಿ ನ್ಯಾಯಮೂರ್ತಿಗಳನ್ನು ಉಚ್ಛನ್ಯಾಯಾಲಯಗಳಿಗೆ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅಧ್ಯಕ್ಷತೆಯ ಕೊಲಿಜಿಯಂ ಶಿಫಾರಸು ಮಾಡಿದೆ.
ಏಪ್ರಿಲ್ 29ರಂದು ಬಿಂದಾಲ್ ಕಲ್ಕತ್ತಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಈಗ ಬಿಂದಾಲ್ ಅವರನ್ನು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯನ್ನಾಗಿ ವರ್ಗಾವಣೆ ಮಾಡಲು ಶಿಫಾರಸಿನಲ್ಲಿ ತಿಳಿಸಿದೆ.
ತ್ರಿಪುರ ಹೈಕೋರ್ಟ್ ನ್ಯಾಯಮೂರ್ತಿ ಅರುಲ್ ಖುರೇಶಿ ಅವರನ್ನು ರಾಜಸ್ಥಾನ ಹೈಕೋರ್ಟ್ ಗೆ ವರ್ಗಾವಣೆ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.
ಅಲಹಾಬಾದ್, ಕಲ್ಕತ್ತಾ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್, ಮೇಘಾಲಯ ಹೈಕೋರ್ಟ್ ಗಳಿಗೆ ಮುಖ್ಯನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೂಡ ಶಿಫಾರಸು ಮಾಡಿದೆ.
ಆಂಧ್ರಪ್ರದೇಶದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಅವರನ್ನು ಛತ್ತೀಸ್ ಗಡಕ್ಕೆ, ಮಧ್ಯಪ್ರದೇಶದ ಹೈಕೋರ್ಟ್ ಸಿಜೆ ಮೊಹಮದ್ ರಫಿಕ್ಅ ಅವರನ್ನು ಹಿಮಾಚಲ ರಾಜ್ಯದ ಉಚ್ಚನ್ಯಾಯಾಲಯಕ್ಕೆ, ಮೇಘಾಲಯ ಹೈಕೋರ್ಟ್ ಸಿಜೆ ಬಿಸ್ವನಾಥ್ ಸೋಮದ್ದರ್ ಅವರನ್ನು ಸಿಕ್ಕಿ ಹೈಕೋರ್ಟ್ ಗೆ ವರ್ಗಾಯಿಸುವಂತೆ ಕೊಲಿಜಿಯಂ ಹೇಳಿದೆ.
ನ್ಯಾ.ಬಿಂದಾಲ್, ನ್ಯಾ. ಪ್ರಕಾಶ್ ಶ್ರೀವಾಸ್ತವ್, ನ್ಯಾ.ಪ್ರಶಾಂತ ಕುಮಾರ್ ಮಿಶ್ರಾ, ನ್ಯಾ.ರಿತು ರಾಜ್ ಅಶ್ವತಿ, ನ್ಯಾ. ಸತೀಶ್ ಚಂದ್ರ ಶರ್ಮಾ, ನ್ಯಾ. ರಂಜಿತ್ ವಿ ಮೋರ್, ನ್ಯಾ. ಅರವಿಂದ ಕುಮಾರ್, ನ್ಯಾ. ಆರ್.ವಿ. ಮಳಿಮಠ್ ಅವರನ್ನು ದೇಶದ ವಿವಿಧ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.
ಕಲ್ಕತ್ತಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯನ್ನಾಗಿ ಪ್ರಕಾಶ್ ಶ್ರೀವಾಸ್ತವ್, ಆಂದ್ರಪ್ರದೇಶ ಹೈಕೋರ್ಟ್ ಸಿಜೆಯನ್ನಾಗಿ ಪ್ರಶಾಂತ್ ಕುಮಾರ್ ಮಿಶ್ರ ಮತ್ತು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯನ್ನಾಗಿ ರಿತು ರಾಜು ಅಶ್ವತಿ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.


