ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಕರ್ನಾಟಕ ಯುವಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿ ‘ನಿರುದ್ಯೋಗ ದಿನವನ್ನಾಗಿ ಆಚರಿಸಿದರು.
ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ದಾಖಲೆ ಪ್ರಮಾಣದಲ್ಲಿ ಹೆಚ್ಚಾಯಿತು. ಕೋಟ್ಯಂತರ ಯುವ ಜನರು ಬೀದಿಗೆ ಬಂದರು. ಉದ್ಯೋಗ ಸೃಷ್ಟಿಗೆ 7 ವರ್ಷದಲ್ಲಿ ಯಾವುದೇ ಕಾರ್ಯಕ್ರಮ ರೂಪಿಸದೇ ಇರುವ ಬಿಜೆಪಿ ಸರ್ಕಾರ ಪ್ರಗತಿ ವಿರೋಧಿ ಎಂದು ಟೀಕಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಬಿಟ್ಟು ಮತ್ತೇನಿಲ್ಲ. ಬೋಂಡಾ ಬಜ್ಜಿ ಮಾರುವುದು ಕೂಡ ಉದ್ಯೋಗ ಎಂದು ಹೇಳುವ ಮೋದಿಯವರೆ ಬೋಂಡಾ ಕರಿಯುವ ಎಣ್ಣೆ ಬೆಲೆಯಾದರೂ ಇಳಿಕೆ ಮಾಡಿ. ನಿಮ್ಮ ಹೇಳಿಕೆಗಳು ನಿಮ್ಮ ಬೇಜವಾಬ್ದಾರಿತನ ಮತ್ತು ವಿಫಲ ಆಡಳಿತವನ್ನು ತೋರಿಸುತ್ತದೆ ಎಂದು ಯುವ ಕಾಂಗ್ರೆಸ್ ಮುಖಂಡರು ಲೇವಡಿ ಮಾಡಿದ್ದಾರೆ.
ನಿರುದ್ಯೋಗ ಬಗ್ಗೆ ಪ್ರಧಾನಿಯ ಹೇಳಿಕೆಗಳು ನಿಮ್ಮ ಬೇಜವಾಬ್ದಾರಿತನ ಮತ್ತು ವಿಫಲ ಆಡಳಿತವನ್ನು ತೋರಿಸುತ್ತದೆ. ಉದ್ಯೋಗ ಸೃಷ್ಟಿ ಮೋದಿಯ ಭರವಸೆಯಲ್ಲೆ ಉಳಿದಿದೆ ಎಂದು ಕುಟುಕಿದ್ದಾರೆ.
ನಿರುದ್ಯೋಗ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಆರೋಗ್ಯ ಇಲಾಖೆಯಲ್ಲಿ, ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಮೋದಿ ಸರ್ಕಾರಕ್ಕೆ ಕಣ್ಣು ಕುರುಡು, ಕಿವಿ ಕೆಪ್ಪು. ಆದರೆ ಬಾಯಿ ಮಾತ್ರ ದೊಡ್ಡದು. ಬಣ್ಣದ ಮಾತುಗಳೆ ಫಕಿರನ ಬಂಡವಾಳ ಮತ್ತು ನಿರುದ್ಯೋಗ ಸೃಷ್ಟಿಸಿದ್ದೆ ಮೋದಿಯ ಸಾಧನೆ ಎಂದು ಆಪಾದಿಸಿದ್ದಾರೆ.


