ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿಯಾಗಿದ್ದು ಈಗ ಕ್ಷೇತ್ರಗಳ ಪುನರ್ ವಿಂಗಡಣೆಗೆ ಆಯೋಗ ರಚನೆ ಮಾಡಿ ಮೀಸಲಾತಿಯನ್ನು ನಾಶ ಮಾಡುವ ಹುನ್ನಾರ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚುನಾವಣಾ ಆಯೋಗವು ಕ್ಷೇತ್ರಗಳ ಮೀಸಲಾತಿ ವಿಂಘಡನೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಬಿಜೆಪಿ ಸರ್ಕಾರಕ್ಕೆ ಇದ್ದಿದ್ದರೆ ಈ ಹಿಂದೆಯೇ ವಿಧೇಯಕಕ್ಕೆ ತಿದ್ದುಪಡಿ ಮಾಡಬೇಕಿತ್ತು, 2 ವರ್ಷದಿಂದ ಸುಮ್ಮನಿದ್ದು ಚುನಾವಣೆ ಸಮೀಪಿಸುವ ವೇಳೆ ತಿದ್ದುಪಡಿ ಮಾಡಲು ಹೊರಟಿರುವುದರ ಹಿಂದೆ ರಾಜಕೀಯ ಹುನ್ನಾರ ಇದೆ ಎಂದು ಆರೋಪಿಸಿದ್ದಾರೆ.
ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿಗೆ 1994ರಲ್ಲಿ ಜನತಾ ದಳದ ಸರ್ಕಾರ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿತ್ತು. ಭೈರೇಗೌಡ, ನಾಣಯ್ಯ ಮತ್ತು ಪಿ.ಜಿ.ಆರ್ ಸಿಂಧ್ಯಾ ಜೊತೆ ನಾನೂ ಸಮಿತಿ ಸದಸ್ಯನಾಗಿದ್ದೆ. ಆ ಸಮಿತಿ ವರದಿ ಆಧಾರದಲ್ಲಿಯೇ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿ ಜಾರಿಗೊಳಿಸಲಾಗಿತ್ತು.
ಮಹಿಳೆಯರಿಗೆ 33% , ಹಿಂದುಳಿದ ಜಾತಿಗಳಿಗೆ 26.4% , ಹಿಂದುಳಿದ ಜಾತಿಗೆ ಸೇರದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 6.6% ಮೀಸಲಾತಿ ನೀಡಬೇಕು ಎಂದು ನಮ್ಮ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿ ಜಾರಿಗೊಳಿಸಲಾಯಿತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ನಮ್ಮ ಸಮಿತಿ ಮಾಡಿದ್ದ ಶಿಫಾರಸ್ಸನ್ನು ಪರಿಗಣಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೂ ಮೀಸಲಾತಿ ನೀಡಲಾಯಿತು.
ಪ್ರಧಾನಿ ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದ್ದರು. ಈ ಮೀಸಲಾತಿಯನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ದಿವಂಗತ ರಾಮಾ ಜೊಯಿಷ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು ಎಂದು ಸಂವಿಧಾನ ತಿದ್ದುಪಡಿ ಮಾಡಿ, ಕಾನೂನು ಜಾರಿ ಮಾಡಿತು. ಇದರಿಂದ ಮಹಿಳೆಯರಿಗೆ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 50% ಮೀಸಲಾತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.