Tuesday, January 20, 2026
Google search engine
Homeಮುಖಪುಟಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ನಿಧನ-ಗಣ್ಯರ ಕಂಬನಿ

ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ನಿಧನ-ಗಣ್ಯರ ಕಂಬನಿ

ಹಿರಿಯ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು. ಅವರು ಮೂವರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು ಮತ್ತು ಅಪಾರ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಅಗಲಿದ್ದಾರೆ.

ಭೀಮಣ್ಣ ಖಂಡ್ರೆ ಪುತ್ರ ಈಶ್ವರ್ ಖಂಡ್ರೆ ಈಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾರೆ. ಇನ್ನೊಬ್ಬ ಪುತ್ರ ವಿಜಯಕುಮಾರ್ ಖಂಡ್ರೆ ಕೂಡ ರಾಜಕಾರಣಿಯಾಗಿದ್ದಾರೆ.

1925, ನವೆಂಬರ್ 1ರಂದು ಹೈದರಾಬಾದ್ ರಾಜ್ಯದ ಭಾಲ್ಕಿಯಲ್ಲಿ ಜನಿಸಿದ್ದ ಭೀಮಣ್ಣ ಖಂಡ್ರೆ ಬಿಎ ಎಲ್ಎಲ್ ಬಿ ವ್ಯಾಸಂಗ ಮಾಢಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿ, ಶಿಕ್ಷಣ ತಜ್ಞರಾಗಿ ಮತ್ತು ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದಾರೆ.

1992 ರಿಂದ 1994ರವರೆಗೆ ಕರ್ನಾಟಕ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ.

1953ರಲ್ಲಿ ಭಾಲ್ಕಿ ತಾಲೂಕು ಪುರಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಪ್ರವೇಶ ಮಾಡಿದರು. 1962, 1967, 1978, 1983ರಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇದೇ ವೇಳೆ ಬೀದರ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಂತಾಪ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಶಾಸಕರು, ಮಾಜಿ ಸಚಿವರಾದ ಶ್ರೀ ಭೀಮಣ್ಣ ಖಂಡ್ರೆ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.

ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಭೀಮಣ್ಣ ಅವರು, ನೇರ, ನಿಷ್ಠುರ, ಸ್ವಾಭಿಮಾನದ ವ್ಯಕ್ತಿಯಾಗಿದ್ದರು. ಯಾವುದೇ ಜನಪರ ಹೋರಾಟವಿದ್ದರೂ ಮುಂಚೂಣಿಯಲ್ಲಿರುತ್ತಿದ್ದರು. ಮಹಾತ್ಮ ಗಾಂಧಿ ಅವರಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ್ದರು.  ಕರ್ನಾಟಕ ಏಕೀಕರಣ ಹೋರಾಟಕ್ಕಾಗಿ ಅವರ ನಡೆದ ಹಾದಿ ಮರೆಯಲು ಸಾಧ್ಯವಿಲ್ಲ. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

ಭೀಮಣ್ಣ ಖಂಡ್ರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ:

ಮಾಜಿ‌ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳು ಆದ ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದ್ದಾರೆ.

ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಎಂದು ಹೇಳಿದ್ದಾರೆ.

ಬದುಕು ಕೊಟ್ಟ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕಾಗಿ ದುಡಿದ ಸಾರ್ಥಕ ಜೀವಕ್ಕೆ ಅಂತಿಮ ನಮನಗಳು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ‌ ಎಂದು ಸಿಎಂ ಪ್ರಾರ್ಥಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular