ತುಮಕೂರು ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರಿನ ಯುವಜನತೆ ಇದರ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.
ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ -2025 – 2026ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಇದರ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆಗಳು ಎಂದರು.
ನಾನು ವಿದ್ಯಾರ್ಥಿದೆಸೆಯಲ್ಲಿ ಕಬ್ಬಡ್ಡಿ ಪಟುವಾಗಿದ್ದೆ, ಅದರೊಂದಿಗೆ ಫುಟ್ ಬಾಲ್, ಕ್ರಿಕೆಟ್ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದೆ. ಅದರಿಂದ ಈಗಾಗಲೂ ಆಗಾಗ್ಗೆ ಏಕದಿನ ಕ್ರಿಕೆಟ್, ಟಿ.-20 ಕ್ರಿಕೆಟ್ ನೋಡುತ್ತೇನೆ. ಕೆಲಸದೊತ್ತಡದ ನಡುವೆಯೂ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದನ್ನು ತಪ್ಪಿಸುವುದಿಲ್ಲ ಎಂದು ಹೇಳಿದರು.
ಕ್ರೀಡೆಯಲ್ಲಿ ಸೋಲು – ಗೆಲುವು ಮುಖ್ಯವಲ್ಲ, ಕ್ರೀಡಾಸ್ಪೂರ್ತಿ ಮುಖ್ಯ. ಪ್ರತಿ ಕ್ರೀಡಾಪಟುವು ಇದನ್ನು ಪಾಲಿಸಬೇಕು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಕಠಿಣ ಶ್ರಮ ಅತ್ಯಗತ್ಯ. ಪರಿಶ್ರಮದಿಂದ ಗುರಿ ಸಾಧಿಸಲು ಉತ್ತಮ ತರಬೇತಿ ಅಗತ್ಯ ಎಂದು ತಿಳಿಸಿದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ನಿಯಮವನ್ನು ಜಾರಿಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯವರೆಗೆ ಶೇ.3 ರಷ್ಟು ಮೀಸಲಾತಿಯನ್ನು ಸರ್ಕಾರ ನೀಡುತ್ತಿದೆ. ಒಲಂಪಿಕ್ಸ್ , ಪ್ಯಾರಾ ಒಲಂಪಿಕ್ಸ್ , ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ/ಭಾಗವಹಿಸುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ ಶೇ.2 ರ ಮೀಸಲಾತಿಯನ್ನು ನೀಡಲಾಗುತ್ತಿದೆ. ಒಲಂಪಿಕ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ತುಮಕೂರು ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವದರ್ಜೆಯ ಈಜುಕೊಳದ ಬೇಡಿಕೆಯಿದ್ದು, ಕ್ರೀಡೆಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರು ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು, ವಿಶ್ವಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಹೆಚ್ಚಿಸಲೆಂದು ಸಿದ್ದರಾಮಯ್ಯ ತಿಳಿಸಿದರು.


