ತುಮಕೂರು ಜಿಲ್ಲೆಯ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಇತರೆ ಜನಾಂಗದವರು ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿದ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ನಮ್ಮ ಜನಾಂಗಕ್ಕೆ ಸೇರಬೇಕಾದ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಹಂದಿಜೋಗಿಸ್ ಸಂಘದ ಅಧ್ಯಕ್ಷ ಹೆಚ್.ಆರ್.ಮುಕುಂದ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಸುಳ್ಳು ದಾಖಲಾತಿಗಳನ್ನು ನೀಡಿ ಬೇರೆ ಜಾತಿಯವರು ಪಡೆದಿರುವ ಹಂದಿಜೋಗಿಸ್ ಜಾತಿ ಪ್ರಮಾಣಪತ್ರಗಳನ್ನು ರದ್ದುಮಾಡುವಂತೆ ಕೋರಲಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ನಿಜವಾದ ಹಂದಿಜೋಗಿಸ್ ಜನಾಂಗದವರ ಅನಕ್ಷರತೆ, ಬಡತನ ಮತ್ತು ತಮ್ಮ ಜನಾಂಗದ ಬಗ್ಗೆ ಧ್ವನಿ ಎತ್ತದ ನಾಯಕರಿಲ್ಲದ ಕಾರಣ ಕಳೆದ 10-15 ವರ್ಷಗಳಿಂದ ಜಿಲ್ಲೆಯಲ್ಲಿ ಇತರೆ ಜನಾಂಗದವರು, ಅತಿ ಹೆಚ್ಚಾಗಿ ಹೆಳವ ಜನಾಂಗದವರು ಹಂದಿ ಸಾಕುವ ಹಾಗೂ ಹಂದಿ ಮಾರಾಟ ಮಾಡುವ ಹೆಸರಿನಲ್ಲಿ ನಾವೇ ಹಂದಿಜೋಗಿಸ್ ಎಂದು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ನಿಜವಾದ ಹಂದಿಜೋಗಿಸ್ ಜನಾಂಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಅಕ್ರಮವಾಗಿ ಅಥವಾ ಸುಳ್ಳು ದಾಖಲಾತಿಗಳನ್ನು ನೀಡಿ ಪಡೆದಿರುವ ಹಂದಿಜೋಗಿಸ್ ಜಾತಿ ಪ್ರಮಾಣವನ್ನು ರದ್ದುಮಾಡಬೇಕು ಹಾಗೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗುಬ್ಬಿ ತಾಲೂಕಿನ ಸಾತೇನಹಳ್ಳಿಯ ನಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ. 49ರಲ್ಲಿ ನಮ್ಮ ಜನಾಂಗಕ್ಕೆ ಮೀಸಲಾಗಿದ್ದ 2 ಎಕರೆ ಜಮೀನಿನಲ್ಲಿ ಹೆಳವ ಜಾತಿಯವರು ತಾವು ಹಂದಿಜೋಗಿಸ್ ಎಂದು ಸುಳ್ಳು ದಾಖಲೆ ಒದಗಿಸಿ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ತಾಲೂಕಿನ ಬಂಗ್ಲೊಪಾಳ್ಯ ಸರ್ಕಾರಿ ಕಿರಿಯ ಶಾಲಾ ದಾಖಲಾತಿಗಳಲ್ಲಿ ಹೆಳವ ಜಾತಿ ಇರುತ್ತದೆ. ಸಾತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರ ಜಾತಿ ಹೆಳವ ಬದಲು ಹಂದಿ ಜೋಗಿಸ್ ಎಂದು ದಾಖಲಿಸಿರುತ್ತಾರೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟಿವೆ. ಸರಿಯಾದ ತಪಾಸಣೆ ಮಾಡಿ ನಿಜವಾದ ಹಂದಿಜೋಗಿಸ್ ಜಾತಿಯವರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಕ್ಕೆ ಸೇರಿರುವ ಹಂದಿಜೋಗಿಸ್ ಜಾತಿಯವರಿಗೆ ಸಾಂವಿಧಾನಿಕವಾಗಿ ಸಿಗಬೇಕಾಗಿರುವ ಸವಲತ್ತು, ಅವಕಾಶಗಳನ್ನು ಅನ್ಯ ಜಾತಿಯವರು ಕಬಳಿಸಿ ನಮಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಪಾಲು ನಮಗೆ, ನಿಮ್ಮ ಪಾಲು ನಿಮಗೆ, ಆದರೆ ನಾವೆಲ್ಲಾ ಒಟ್ಟಿಗೆ ಎಂಬ ಆಶಯದೊಂದಿಗೆ ಈ ಹೋರಾಟ ಮಾಡುತ್ತಿದ್ದೇವೆ ಎಂದರು.
ಹಂದಿ ಸಾಕಾಣಿಕೆ, ಹಂದಿ ಮಾಂಸ ಮಾರಾಟ ಮಾಡುವುದು ಹಂದಿಜೋಗಿಸ್ ಜಾತಿಯವರ ಕುಲವೃತ್ತಿ. ಹಾಗೆಂದು ಹಂದಿ ಸಾಕಾಣಿಕೆ, ಮಾರಾಟ ಮಾಡುವವರೆಲ್ಲಾ ಹಂದಿಜೋಗಿಸ್ ಜಾತಿಗೆ ಸೇರುವುದಿಲ್ಲ. ಹಂದಿಜೋಗಿಸ್ ಜಾತಿಗೆ ಆಗುತ್ತಿರುವ ವಂಚನೆ ತಪ್ಪಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹೈಕೊರ್ಟ್ ನ್ಯಾಯವಾದಿ ಹೆಚ್.ವಿ.ಮಂಜುನಾಥ್ ಮಾತನಾಡಿ, ಹಂದಿಜೋಗಿಸ್ ಜಾತಿಗೆ ಸೇರಬೇಕಾದ ಸವಲತ್ತು, ಅವಕಾಶಗಳನ್ನು ಸುಳ್ಳು ದಾಖಲಾತಿ ನೀಡಿ ಕಬಳಿಸಿರುವ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಅದಕ್ಕೆ ಸಂಬAಧಿಸಿದ ದಾಖಲೆ, ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ನಮ್ಮ ತಟ್ಟೆಯ ಅನ್ನವನ್ನು ಬೇರೆಯವರು ಕಿತ್ತುಕೊಳ್ಳುವಾಗ ಅದನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ ಎಂದರು.
ಸಂಘದ ರಾಜ್ಯ ಸಂಚಾಲಕ ವೆಂಕಟರಾಮಯ್ಯ ಮಾತನಾಡಿದರು. ಕಾರ್ಯದರ್ಶಿ ಚಂದ್ರಶೇಖರ್, ವಕ್ತಾರ ರಾಜಣ್ಣ ಹಾಜರಿದ್ದರು.


