ತುಮಕೂರು ನಗರದ ಗಂಗಸಂದ್ರ ರಸ್ತೆಯಲ್ಲಿರುವ ಶೇಷಾದ್ರಿಪುರಂ ಶಾಲೆಯವರು ತಮ್ಮ ಸಂಸ್ಥೆಗೆ 2025-26ನೇ ಸಾಲಿನಲ್ಲಿ ಸಿಬಿಎಸ್‌ಸಿಗೆ ಅವಕಾಶ ಇಲ್ಲದಿದ್ದರೂ ಮಕ್ಕಳನ್ನು ಸಿಬಿಎಸ್ಸಿ ಪಠ್ಯಕ್ರಮವೆಂದು ಸುಳ್ಳು ಹೇಳಿ, ಹೆಚ್ಚಿನ ಶುಲ್ಕ ಪಡೆದು ದಾಖಲಾತಿ ಮಾಡಿಕೊಂಡಿದ್ದು, ಈ ಶಾಲೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೆಲ ಕಾಲ ಧರಣಿ ನಡೆಸಿದ ಕರುನಾಡ ವಿಜಯಸೇನೆ ಕಾರ್ಯಕರ್ತರು, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಕೂಡಲೇ ಶೇಷಾದ್ರಿಪುರಂ ಶಾಲೆಯ ವಿರುದ್ದ ಕಾನೂನು ಕ್ರಮಕೈಗೊಂಡು, ಸಾರ್ವಜನಿಕರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
ಕರುನಾಡು ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಮಾತನಾಡಿ, ಗಂಗಸಂದ್ರ ರಸ್ತೆಯಲ್ಲಿರುವ ಶೇಷಾದ್ರಿಪುರಂ ಕಾಲೇಜು, ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. ಸದರಿ ಶಾಲೆಗೆ ಸರಕಾರದ ರಾಜ್ಯ ಪಠ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಿದ್ದು, 01-04-2026 ರಿಂದ 31-03-2031ವರೆಗೆ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ತರಗತಿ ನಡೆಸಲು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ನೀಡಿದೆ. ಆದರೆ ಶಾಲೆಯವರು 2025-26ನೇ ಸಾಲಿನಲ್ಲಿಯೇ ನಮ್ಮ ಶಾಲೆ ಸಿಬಿಎಸ್ಸಿಗೆ ಅಪಿಲೇಟೆಡ್ ಆಗಿದೆ ಎಂದು ಹೇಳಿ ಪೋಷಕರಿಂದ ಹೆಚ್ಚುವರಿ ಶುಲ್ಕ ಪಡೆದು ಮಕ್ಕಳನ್ನು ಅಡ್ಮೀಷನ್ ಮಾಡಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಶಾಲೆಯ ಆಡಳಿತ ಮಂಡಳಿ ಕೇಳಿದರೆ ಉಡಾಫೆ ಉತ್ತರ ನೀಡಿ, ಪೋಷಕರನ್ನು ಬೆದರಿಸುವ ತಂತ್ರಗಳು ನಡೆದಿವೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆ ಎಂದರು.
ಶಾಲೆಗೆ ಸಿಬಿಎಸ್ಸಿಗೆ ಅನುಮತಿ ಇಲ್ಲದಿದ್ದರೂ ಸಿಬಿಎಸ್ಸಿ ಎಂದು ಶುಲ್ಕು ಪಡೆದ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಿರುವ ಶೇಷಾದ್ರಿಪುರಂ ಶಾಲೆಯ ಆಡಳಿತ ಮಂಡಳಿ, ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಾವ ಶಿಕ್ಷಣ ಪದ್ದತಿ ಅಡಿ ಕಲಿತಿದ್ದಾರೆ ಎಂದು ಪ್ರಮಾಣ ಪಾತ್ರ ನೀಡುತ್ತಾರೆ. ಅದಕ್ಕೆ ಇಲಾಖೆಯಲ್ಲಿ ಮಾನ್ಯತೆ ಇದೆಯೇ ಎಂಬ ಗೊಂದಲ ಮತ್ತು ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ, ಬಿಇಓ, ಡಿಡಿಪಿಐ ಎಲ್ಲರಿಗೂ ಕಳೆದ 15 ದಿನಗಳ ಹಿಂದೆಯೇ ಮನವಿ ಕೊಟ್ಟರೂ ಇದುವರೆಗೂ ಕ್ರಮ ಆಗಿಲ್ಲ. ಮುಂದಿನ 15 ದಿನಗಳಲ್ಲಿ ಸೂಕ್ತ ಕ್ರಮವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಕೈಗೊಳ್ಳದಿದ್ದರೆ ಶಾಲೆಯ ಬಳಿಯೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ, ಈ ವಿಚಾರವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರುನಾಡು ವಿಜಯ ಸೇನೆ ಪ್ರಧಾನ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ಆದೇಶ್, ತನ್ವೀರ್, ಮಹಿಳಾ ಅಧ್ಯಕ್ಷೆ ಯಾಸ್ಮೀನ್ ತಾಜ್, ನಗರ ಅಧ್ಯಕ್ಷೆ ಕಾವ್ಯ, ರಾಧಾಮಣಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪವನ್, ಮುಖಂಡರಾದ ರುದ್ರೇಶ್, ಪುಷ್ಪ, ಮಮತ ಶಿವಕುಮಾರ್, ರಾಜ್ಯ ಕಾರ್ಯದರ್ಶಿ ರಾಧಾ ಗಂಗಾಧರ್ ಇದ್ದರು.


