ಆಧ್ಯಾತ್ಮ ಮತ್ತು ಧರ್ಮದ ಮೂಲಕ ಕೋಮುವಾದವನ್ನು ಪಸರಿಸಲಾಗುತ್ತಿದ್ದು ಇದನ್ನು ತಡೆಯಲು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಕೃತಿ ಸೌಹಾರ್ದ ಭಾರತ ಸಹಕಾರಿಯಾಗಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ತಿಳಿಸಿದರು.
ಸೌಹಾರ್ದ ಕರ್ನಾಟಕ, ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಸಮುದಾಯ ಸಂಘಟನೆಗಳ ವತಿಯಿಂದ ತುಮಕೂರಿನಲ್ಲಿ ನಡೆದ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಸೌಹಾರ್ದ ಭಾರತ ಕಟ್ಟುವವರ ಸಂಖ್ಯೆ ಹೆಚ್ಚಾಗಬೇಕು. ಆದರೆ ನಾವು ಯಾರನ್ನು ವಿರೋದಿಸುತ್ತಿದ್ದೇವೊ ಅವರಿಗೆ ಮತ ಹಾಕುತ್ತಿದ್ದೇವೆ. ದ್ವೇಷ ಹುಟ್ಟುಹಾಕುವವರಿಗೆ ಓಟು ಹಾಕುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಅಸಹಾಯಕತೆ, ಸಂಕಷ್ಟಗಳಿಂದ ಜನ ರೋಸಿಹೊಗಿರುವ ದಿನಮಾನದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಮಾಡುತ್ತಿರುವುದು ಚೈತನ್ಯದಾಯಕವಾಗಿದೆ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಬಹುತ್ವದ ಆಶಯಗಳನ್ನು ಪ್ರತಿಬಿಂಬಿಸುವ, ಸದಾ ಎಚ್ಚರದ ಸ್ಥಿತಿಯನ್ನು ಸ್ಥಿರೀಕರಿಸುವ ಇಂತಹ ಪುಸ್ತಕಗಳು ಪದೇ ಪದೇ ಓದಬೇಕಾದ ತುರ್ತು ಇದೆ ಎಂದರು.
ಕನ್ನಡ ಉಪನ್ಯಾಸಕ ಅಶ್ವತ್ಥನಾರಾಯಣ ಗುಟ್ಟೆ ಮಾತನಾಡಿ, ಬರಗೂರು ರಾಮಚಂದ್ರಪ್ಪ ಸಾಮಾಜಿಕ ಸಂಕಷ್ಠಗಳಿಗೆ ಯಾವುದೇ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ಬದಲಾಗಿ ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಕುವೆಂಪು ಹೀಗೆ ಹಲವು ದಾರ್ಶನಿಕರ ವಿಚಾರಗಳನ್ನು ಅಳವಡಿಸಿಕೊಂಡು ಅದನ್ನೆ ಪ್ರತಿಪಾದಿಸುತ್ತಾರೆ ಎಂದು ಪ್ರತಿಪಾದಿಸಿದರು.
ಪುಸ್ತಕ ಕುರಿತು ಸಹಾಯಕ ಪ್ರಾಧ್ಯಪಕಿ ಡಾ.ಎಸ್.ಜ್ಯೋತಿ, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಓ. ನಾಗರಾಜು ಮಾತನಾಡಿದರು. ಲೇಖಕರಾದ ಬಿ.ಸಿ.ಶೈಲಾನಾಗರಾಜ್, ಮಿರ್ಜಾಬಷೀರ್, ಪ್ರೊ. ಪದ್ಮಪ್ರಸಾದ್, ಡಾ.ಲಕ್ಷ್ಮಣ್ ದಾಸ್, ರಾಜೇಂದ್ರ ನಾಯಕ್, ಲಕ್ಷ್ಮಿಕಾಂತರಾಜೇ ಅರಸ್, ಎ. ರಾಮಚಂದ್ರ, ಲಕ್ಷ್ಮಣ್ಕ್ಷ, ಎಚ್.ಗೋವಿಂದಯ್ಯ ದ್ವಾರನಕುಂಟೆ ಇದ್ದರು. ಎಸ್.ರಾಘವೇಂದ್ರ ಸ್ವಾಗತಿಸಿ, ಅಶ್ವತ್ಥಯ್ಯ ವಂದಿಸಿ, ಪವನ್ ಗಂಗಾಧರ್ ನಿರೂಪಿಸಿದರು.


