Tuesday, January 20, 2026
Google search engine
Homeಮುಖಪುಟದೇಶದಲ್ಲಿ ಸೌಹಾರ್ದತೆಗೆ ಧಕ್ಕೆ-ಕಳವಳ

ದೇಶದಲ್ಲಿ ಸೌಹಾರ್ದತೆಗೆ ಧಕ್ಕೆ-ಕಳವಳ

ನೂರಾರು ಮಹನಿಯರು ಜನಿಸಿದ ಶಾಂತಿ ಪ್ರಿಯ ದೇಶದಲ್ಲಿ ಇಂದು ಸೌಹಾರ್ದತೆ, ಸಮಾನತೆ ಮತ್ತು ಜಾತ್ಯತೀತ ಭಾವನೆಗಳಿಗೆ ಅಪಾಯ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಕಸಾಪ ಅಧ್ಯಕ್ಷ ಎಂ.ಬಸವರಾಜಪ್ಪ, ವಿವೇಕಾನಂದ, ಮಹಾತ್ಮಗಾಂಧಿ, ಅಂಬೇಡ್ಕರ್ ಅವರ‌ ಆಶಯಗಳನ್ನು ಮೈಗೂಡಿಸಿಕೊಂಡು ಜನರು ತಮ್ಮಲ್ಲಿನ ಕಲುಶಿತ ತನವನ್ನು ಕಳೆದುಕೊಳ್ಳಬೇಕು ಎಂದು ಹೇಳಿದರು.

ತುಮಕೂರು ಜಿಲ್ಲೆಯ ತಿಪಟೂರು ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಸೌಹಾರ್ದ ತಿಪಟೂರು, ಜನಸ್ಪಂದನ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಿವೃತ್ತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಈ ಪುಸ್ತಕ ಮನೆ ಮನ ತಲುಪಿ ಸೌಹಾರ್ದತೆ ಹೆಚ್ಚಿ ನಮ್ಮಲ್ಲಿರುವ ಸಂಕುಚಿತ ಭಾವನೆಯನ್ನು ಹೊಗಲಾಡಿಸಿಕೊಂಡರೆ ಮಾತ್ರ ಭಾರತ ಶಾಂತಿಯ ಅಭಿವೃದ್ದಿ ದೇಶವಾಗಿ ಹೊರಹೊಮ್ಮುತ್ತದೆ ಎಂದರು.

ಜನಸ್ಪಂದನ ಟ್ರಸ್ಟ್‌‌ ಅಧ್ಯಕ್ಷ ಸಿ ಬಿ‌ ಶಶಿಧರ್ ಟೂಡಾ ಮಾತನಾಡಿ, ದೇಶ ಸಮಾಜ‌ ಎರಡು ವಾದಗಳಲ್ಲಿ ವಿಭಜನೆಗೊಂಡಿದೆ ಮೊದಲನೆಯದು ಬಲಪಂಥೀಯ ಆರ್ ಎಸ್ ಎಸ್ ಅನ್ನು‌ ಬಹಿರಂಗವಾಗಿ‌ ಹಾಗೂ‌ ಅಂತರಂಗದಲ್ಲಿ ಒಪ್ಪಿಕೊಂಡಿದೆ. ಮತ್ತೊಂದು ಬುದ್ದ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರ ತತ್ವಾದರ್ಶಗಳನ್ನು ಅನುಸರಿಸುವ ವರ್ಗ ಎಂದು ತಿಳಿಸಿದರು.

ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ನಡೆದ ಘಟನೆಗಳ ಕುರಿತು ಪ್ರತಿಭಟನೆ ಮಾಡುವ ಧಾರ್ಮಿಕ ಮನಸ್ಸುಗಳು, ಸೌಹಾರ್ದತೆಗೆ ಧಕ್ಕೆ ಬರುವಂತಹ ಮರ್ಯಾದ ಹತ್ಯೆ, ದಲಿತರು ಸಮಾನವಾಗಿ ಕುಳಿತಾಗ ನಡೆದ ಹತ್ಯೆಯ ಘಟನೆಗಳ ಕುರಿತು ಯಾಕೆ ಪ್ರತಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಮನಸ್ಸುಗಳು ಸೌಹಾರ್ದಯುತವಾಗಿ ಆಲೋಚನೆ ಮಾಡುವ ಕ್ರಮವನ್ನು ಕಳೆದುಕೊಳ್ಳುಳ್ಳುತ್ತಿವೆ. ಹಾಗಾಗಿ ನಾವೀಗ ನಮ್ಮ‌‌ ಧರ್ಮವನ್ನು ಪ್ರೀತಿಸುತ್ತಾ ಇತರೆ ಧರ್ಮಗಳನ್ನೂ ಗೌರವಿಸುವ ದೊಡ್ಡತನವನ್ನು ಮೈಗೂಡಿಸಿಕೊಳ್ಳಬೇಕಿದೆ. ಇದೇ ಸೌಹಾರ್ದ ಭಾರತದ ಪರಿಕಲ್ಪನೆ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್ ಎಸ್ ಚನ್ನಬಸವಣ್ಣ ಮಾತನಾಡಿ, ಭಾವೈಕ್ಯತೆ ನಮ್ಮ ರಕ್ತದಲ್ಲಿದೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾ ಬಾಳುತ್ತಿರುವ ಜನ. ಇಂದಿಗೂ ಕೂಡ ತಾತಯ್ಯನ ದರ್ಗಾಕ್ಕೆ ಹೋಗುವ ಅಭ್ಯಾಸ ಬಹುಸಂಖ್ಯಾತ ಹಿಂದೂಗಳಲ್ಲಿ ಇದೆ. ಮತೀಯ ಶಕ್ತಿಗಳು ಜನರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡದಂತಿರಲು ಧರ್ಮದ ಅಮಲು ಏರಿಸುತ್ತಿದ್ದು ನಾವು ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.

ಮುಖಂಡ ಸಮಿಉಲ್ಲಾ ಮಾತನಾಡಿ, ದೇಶದಲ್ಲಿ ಹುಟ್ಟಿದ ನಾವೆಲ್ಲರೂ ದೇಶಪ್ರೇಮಿಗಳು. ಇಲ್ಲಿ ಯಾರೂ ದೇಶಪ್ರೇಮವನ್ನು ಪ್ರಶ್ನಿಸುವ ಅಗತ್ಯವಿಲ್ಲ. ನಾವು ನೀವು ಎಲ್ಲಾ ಒಟ್ಟಿಗೆ ಸೇರಿದ್ದೇವೆ ಎಂದರೆ ಇದೆ ಭಾವೈಕ್ಯತೆ. ಈ ರೀತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗುವ ಮೂಲಕ ಧರ್ಮಗಳ ನಡುವೆ ಇರುವ ಕಂದಕವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ ಎಂ ರಾಜಣ್ಣ ಮಾತನಾಡಿ, ಸಮಾಜದ ಕಳಕಳಿಯನ್ನು ಮೈಗೂಡಿಸಿಕೊಳ್ಳುವುದರಲ್ಲಿ ನಾವು ಹಿಂದಿದ್ದೇವೆ, ಇದು ಬಹುತ್ವದ ದೇಶ, ಎಲ್ಲಾ ಜಾತಿ ಧರ್ಮದವರು ಇಲ್ಲಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳನ್ನು ಗಮನಿಸುವತ್ತ ನಾವು ಮುಂದುವರೆಯಬೇಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಗುರುಸ್ವಾಮಿ ಪಿ ಆರ್ ಇದ್ದರು. ಸೌಹಾರ್ದ ತಿಪಟೂರಿನ ಅಲ್ಲಭಕಾಶ ಎ ನಿರೂಪಿಸಿದರು, ಮಂಜಪ್ಪ ಎಚ್ಎಸ್ ಸ್ವಾಗತಿಸಿದರು ಹಾಗೂ ಶ್ರೀಕಾಂತ್ ಕೆಳಹಟ್ಟಿ ವಂದಿಸಿದರು.

ತುಮಕೂರು, ಸಿರಾ ಮತ್ತು ತಿಪಟೂರು ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಕಡೆಗಳಲ್ಲಿ ಸೌಹಾರ್ದ ಭಾರತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular