ಗ್ರಾಮೀಣ ಬಡಜನರ ಬದುಕಿಗೆ ಆಸರೆಯಾಗಿದ್ದ ನರೇಗಾ ಕಾಯ್ದೆಯನ್ನು ರದ್ದುಮಾಡಿ, ಅದರ ಬದಲು ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಯೋಜನೆಯೊಂದನ್ನು ಹುಟ್ಟು ಹಾಕಿ, ಬಡಜನರ ಬದುಕನ್ನು ಕಿತ್ತುಕೊಂಡಿರುವ ಕೇಂದ್ರ ಸರಕಾರ, ರಾಷ್ಟ್ರಿಪಿತ ಮಹಾತ್ಮಗಾಂಧಿ ಅವರನ್ನು ಎರಡನೇ ಬಾರಿ ಕೊಲೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕೇಂದ್ರ ಸರಕಾರದ ಉದ್ಯೋಗವನ್ನು ಜನರ ಹಕ್ಕು ಎಂದು ಪ್ರತಿಪಾದಿಸುತಿದ್ದ ನರೇಗಾ ಯೋಜನೆಯನ್ನು ರದ್ದು ಮಾಡಿರುವುದರ ವಿರುದ್ದ ಮತ್ತು ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಕೋರಿಕೆಯ ಮೇರೆಗೆ ಜನರ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುವ ಹಕ್ಕು ಹೊಂದಿದ್ದ ಎಂ.ಎನ್.ಆರ್.ಇ.ಜಿ.ಎ ಕಾಯ್ದೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಕಾರ್ಪೋರೇಟ್ ಸಂಸ್ಕೃತಿಗೆ ಬೆಂಬಲವಾಗಿಸುವ ಗುತ್ತಿಗೆ ಆಧಾರಿತ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದು ಗೋಡ್ಸೆ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ವಿರುದ್ದ ಕಾಂಗ್ರೆಸ್ ಜನರ ಬಳಿಗೆ ಹೋಗಲಿದೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನರೇಗಾದಿಂದ ಮಹಾತ್ಮಗಾಂಧಿ ಹೆಸರು ತೆಗೆಯಲು 2014ರಲ್ಲಿಯೇ ಪ್ರಯತ್ನ ನಡೆದಿತ್ತು. ಆದರೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಕ್ಷಿಗುಡ್ಡೆಯಾಗಿ ಅದನ್ನು ಉಳಿಸಿದ್ದರು. ಆದರೆ ಈಗ ಹೆಸರು ಬದಲಾಯಿಸುವ ಮೂಲಕ ಗಾಂಧಿ ವಿರೋಧಿ ಧೋರಣೆಯನ್ನು ಮುಂದುವರೆಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಷ್ಟಿಗೆ, ಬಡವರ ಬದುಕಿಗೆ ಆಸರೆಯಾಗಿದ್ದ ಎಂಎನ್‌ಆರ್‌ಇಜಿಎ ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿಲ್ಲ
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದ ಹೆಸರು ಬದಲಾಯಿಸಿಲ್ಲ. ಯಾವುದೇ ಹೆಸರಿಡದ ಒಳಾಂಗಣ ಕ್ರೀಡಾಂಗಣದ ಹೆಸರನ್ನು ಡಾ.ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಎಂದು ಹೆಸರಿಸಲಾಗಿದೆ. ಹೇಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ವಾಲ್ ಇರುವಂತೆ, ವಾಕಾಂಡೆಯಲ್ಲಿ ಸುನಿಲ್ ಗವಾಸ್ಕರ್ ಸ್ಟಾಂಡ್ ಇರುವಂತೆ, ಮಹಾತ್ಮಗಾಂದಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಸ್ವತಃ ಕ್ರೀಡಾಪಟುವಾಗಿರುವ, ಇಂದಿಗೂ ತನ್ನ ಹೆಸರಿನಲ್ಲಿ ಅಳಿಸಲಾಗದ ಕೂಟ ದಾಖಲೆ ಹೊಂದಿರುವ ಡಾ.ಜಿ.ಪರಮೇಶ್ವರ್ ಹೆಸರಿಡಲಾಗಿದೆ. ಕ್ಷಲ್ಲಕ ರಾಜಕಾರಣಕ್ಕೆ ಇದನ್ನು ವಿರೋಧಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಮುಖಂಡ ಇಕ್ಬಾಲ್ ಅಹಮದ್, ಆಗ್ನೇಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ವಹಿಸಿದ್ದರು. ಮಾಜಿ ಶಾಸಕರಾದ ಡಾ. ರಫೀಕ್ ಅಹಮದ್, ಕೆ.ಎಸ್.ಕಿರಣಕುಮಾರ್, ಎಸ್.ಷಪಿ ಅಹಮದ್, ಸೂರ್ಯ ಮುಕುಂದರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫೈಯಾಜ್, ಮಹೇಶ್, ಮುಖಂಡರಾದ ನಯಾಜ್, ಅನಿಲ್, ಕೆಂಚಮಾರಯ್ಯ, ರಾಮಕೃಷ್ಣ, ರೇವಣಸಿದ್ದಯ್ಯ ಇದ್ದರು.


