ಬ್ಯಾಂಕುಗಳು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಕೇವಲ ವ್ಯವಹಾರಿಕ ದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಬದಲು ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದಾಗ ಬ್ಯಾಂಕ್ ಬೆಳೆಯುತ್ತದೆ. ಜನರ ಪ್ರೀತಿ ವಿಶ್ವಾಸ ಗಳಿಸಿದಾಗ ಮಾತ್ರ ಉತ್ತಮ ಹೆಸರು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತುಮಕೂರು ಜಿಲ್ಲಾ ವಕೀಲರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ನವೀನ್ ನಾಯಕ್ ತಿಳಿಸಿದ್ದಾರೆ.
ತುಮಕೂರು ನಗರದ ಎಂ.ಜಿ.ರಸ್ತೆಯಲ್ಲಿ ಕೀರ್ತನ ಬ್ಯಾಂಕ್‌ನ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲಿ ಕೆಲವೇ ಬ್ಯಾಂಕ್‌ಗಳು ಮಾತ್ರ ಸೇವಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.
ಉನ್ನತ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿದರೆ ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಕೀರ್ತನ ಬ್ಯಾಂಕ್ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಎಸ್‌ಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ಣ ಮಾತನಾಡಿ, ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವವರು ಮಧ್ಯಮ ಮತ್ತು ಬಡಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ದಿನನಿತ್ಯದ ವ್ಯವಹಾರಗಳು ಬಡವರೇ ಹೆಚ್ಚು ವ್ಯವಹರಿಸುತ್ತಾರೆ. ಆದರೆ ಇವರಿಗೆ ಸಾಲ ಸೌಲಭ್ಯ ನೀಡಬೇಕಾದಾಗ ವಿಪರೀತ ನಿಬಂಧನೆ ವಿಧಿಸುತ್ತಾರೆ. ಇದರಿಂದ ಸಾಮಾನ್ಯ ಜನರಿಗೆ ಸಾಲ ಪಡೆಯುವುದು ಸುಲಭವಲ್ಲ ಎಂದರು.
ಬ್ಯಾಂಕುಗಳ ನಿಯಮಗಳನ್ನು ಬಡಜನರ ಹಿತದೃಷ್ಟಿಯಿಂದ ಸರಳೀಕರಣಗೊಳಿಸಬೇಕು. ಹೀಗಾದ ಅವರಿಗೆ ಹೆಚ್ಚು ಸಹಕಾರಿಯಾಗಲಿದೆ. ಶ್ರೀಮಂತರಿಗೆ ಸಾಲ ನೀಡುವುದರಲ್ಲಿ ನಿಯಮಗಳು ಅಷ್ಟಾಗಿ ಇರುವುದಿಲ್ಲ. ಆದರೆ ಬ್ಯಾಂಕುಗಳು ದೇಶದಲ್ಲಿ ಅತಿ ಹೆಚ್ಚು ದಿವಾಳಿ ಆಗಿರುವುದು ಶ್ರೀಮಂತರಿಂದ. ಕಾಲ ಕಾಲಕ್ಕೆ ಸರಿಯಾದ ಸಮಯದಲ್ಲಿ ಸಾಲ ಪಾವತಿಸುವವರಲ್ಲಿ ಬಡಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಮಧ್ಯಮ ಮತ್ತು ಬಡಕುಟುಂಬಗಳಿಗೆ ಬ್ಯಾಂಕ್ ನಿಯಮಗಳನ್ನು ಸರಳೀಕರಣಗೊಳಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿದರೆ ಹೆಚ್ಚು ಉಪಯೋಗವಾಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಬ್ಯಾಂಕ್‌ಗಳ ಬಗ್ಗೆ ವಿಪರೀತ ಆರೋಪಗಳು ಕೇಳಿ ಬರುತ್ತಿವೆ. ಜನಸಾಮಾನ್ಯರಿಗೆ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಇಂತಹ ಆರೋಗಳಿಂದ ಮುಕ್ತಿ ಪಡೆಯಬಹುದು. ಬ್ಯಾಂಕ್‌ಗೆ ಸಂಬAಧಿಸಿದAತೆ ಆರ್.ಬಿ.ಐ ರೂಪಿಸಿರುವ ಮಾನದಂಡಗಳನ್ನು ಎಲ್ಲಾ ಬ್ಯಾಂಕ್‌ಗಳು ಪಾಲನೆ ಮಾಡಿದರೆ ಯಾವುದೇ ರೀತಿಯ ಸಮಸ್ಯೆಗಳು ತಲೆದೋರುವುದಿಲ್ಲ. ಬ್ಯಾಂಕ್‌ನ ಸ್ವಯಂಪ್ರೇರಿತ ನಿರ್ಧಾರಗಳು ಜನರನ್ನು ಸಂಕಷ್ಟಕ್ಕೆ ಈಡುಮಾಡುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೀರ್ತನ ಬ್ಯಾಂಕ್‌ನ ಎನ್.ಕೃಷ್ಣಪ್ರಸಾದ್, ಎವಿಪಿ ಮಂಜುನಾಥ್, ಕ್ಲಸ್ಟರ್ ಮ್ಯಾನೇಜರ್ ಅಭಿಷೇಕ್, ಜಿಲ್ಲಾ ವಕೀಲರ ಸಂಘದ ಸದಸ್ಯ ಡಿ.ಎ. ಜಗದೀಶ್, ವಕೀಲ ರಘು ಭಾಗವಹಿಸಿದ್ದರು.


