ಇತ್ತೀಚೆಗೆ ಡಾಕ್ಟರೇಟ್ ಪುರಸ್ಕಾರಗಳು ಸಹ ಹಣಕ್ಕೆ ಬಿಕರಿಯಾಗುತ್ತಿವೆ. ಹಿಂದೆ ಲಕ್ಷ ರೂ.ಗಳು ಇದ್ದ ಡಾಕ್ಟರೇಟ್‌ಗಳು ಈಗ 10 ಸಾವಿರ ರೂ.ಗಳಿಗೆಲ್ಲಾ ಸಿಗುತ್ತಿವೆ. ಇವೆಲ್ಲ ಅತ್ಯಂತ ವಿಪರ್ಯಾಸದ ಸಂಗತಿಗಳು ಎಂದು ಲೇಖಕಿ ಬಾ.ಹ.ರಮಾಕುಮಾರಿ ಕಳವಳ ವ್ಯಕ್ತಪಡಿಸಿದರು.
ತುಮಕೂರಿನ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗದಿಂದ ಆಯೋಜಿಸಿದ್ದ 2ನೆ ವರ್ಷದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೆಲವು ಸಲ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ತಮ್ಮವರಿಗೆ ಬೇಕೆಂದು ಜಗಳ ನಡೆಯುವ ಸಂದರ್ಭಗಳೂ ಉಂಟು. ಇದಕ್ಕಾಗಿಯೇ ವೈಮನಸ್ಯಗಳು ಉಂಟಾಗುತ್ತಿವೆ. ಕೃತಿ ಆಯ್ಕೆಗಾಗಿಯೇ ಸಮಿತಿಗಳು ರಚನೆಯಾಗುತ್ತವೆ.
ಬಹಳಷ್ಟು ಸಮಾರಂಭಗಳಲ್ಲಿ ಕೃತಿ ಮತ್ತು ಕೃತಿಕಾರರಿಗೆ ಹೆಚ್ಚು ಮನ್ನಣೆ ಸಿಗುವುದೇ ಇಲ್ಲ. ಆದರೆ ಕೃತಿಯನ್ನು ವಿಮರ್ಶಿಸುವ ಜೊತೆಗೆ ಕೃತಿಕಾರರಿಂದಲೂ ಮಾತನಾಡಿಸುವ ಪ್ರಯತ್ನ ಒಂದು ಹೊಸ ಬೆಳವಣಿಗೆ. ಈ ಬೆಳವಣಿಗೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.
ಹಿಂದೆ ಅಮ್ಮನ ಬಗ್ಗೆ ಹೆಚ್ಚು ಗುಣಗಾನಗಳು ನಡೆಯುತ್ತಿದ್ದವು. ಬದಲಾದ ಕಾಲಘಟ್ಟದಲ್ಲಿ ಅಪ್ಪನನ್ನು ನೆನೆಯುವ ಸಂದರ್ಭಗಳು ಹೆಚ್ಚುತ್ತಿವೆ. ಈಗಿನ ಕಾಲಘಟ್ಟದಲ್ಲಿ ತುಂಬಾ ಒತ್ತಡದ ಬದುಕಿನಲ್ಲಿ ಅಮ್ಮನಾದವಳು ಮಕ್ಕಳ ಬಗ್ಗೆ ಮೃದು ಧೋರಣೆ ತಾಳಿ ಅವರನ್ನು ಸಂತೈಸಲು ಸಾಧ್ಯವಾಗದೆ ಇರಬಹುದು. ಇಂತಹ ಸ್ಥಿತಿಯಲ್ಲಿ ಅಪ್ಪನಾದವನು ಮಕ್ಕಳ ಬಗ್ಗೆ ಒಂದಷ್ಟು ಮೃದುತ್ವ ತಾಳುತ್ತಿರುವುದರಿಂದ ಅಪ್ಪನ ಬಗ್ಗೆ ಮಾತನಾಡುವ, ವಿಮರ್ಶಿಸುವ ಬೆಳವಣಿಗೆಗಳು ಹೆಚ್ಚುತ್ತಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಹಣ ಕೊಟ್ಟು ಪ್ರಶಸ್ತಿ ಪಡೆದು ಅದರ ಹಣವನ್ನು ಪ್ರಶಸ್ತಿ ನೀಡಿದವರಿಗೆ ವಾಪಸ್ ಮಾಡುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಅಂತಹ ಸಂಸ್ಥೆಗಳು ಹುಟ್ಟಿಕೊಂಡಿವೆ. ಇಂತಹ ಸಂದಿಗ್ದ ಸಾಮಾಜಿಕ ಸ್ಥಿತಿಯೊಳಗೆ ಪ್ರಾಮಾಣಿಕರನ್ನು ಮತ್ತು ಅರ್ಹರನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಬಹುಮುಖಿ ಗೆಳೆಯರ ಬಳಗದ ಪ್ರಧಾನ ಸಂಚಾಲಕರು, ಸಾಹಿತಿಗಳೂ ಆದ ಹಡವನಹಳ್ಳಿ ವೀರಣ್ಣಗೌಡ ಆಶಯ ನುಡಿಗಳನ್ನಾಡಿ ಕೌಟುಂಬಿಕ ವ್ಯವಸ್ಥೆ ವಿಘಟನೆಯಾಗುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕವಾಗಿ ಚಿಂತಿಸುವ ಮನಸ್ಸುಗಳು ಬೇಕಿದೆ. ಸಾಂಸ್ಕೃತಿಕ ವಲಯವನ್ನು ಉತ್ತಮಗೊಳಿಸುವ ಮನಸ್ಸುಗಳು ಹೆಚ್ಚಬೇಕಿದೆ. ಮೌಢ್ಯದ ವಿರುದ್ಧ ಮಾತನಾಡಬೇಕಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಬೇಕಿದೆ. ಇದಕ್ಕಾಗಿ ಸಾಹಿತ್ಯ ವಲಯವನ್ನು ಪ್ರೋತ್ಸಾಹಿಸಬೇಕಾಗಿದ್ದು, ಕವಿ, ಕತೆಗಾರರು, ಲೇಖಕರನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಅಪ್ಪ ಪ್ರಶಸ್ತಿಯ ಮೂಲಕ ಉದಯೋನ್ಮುಖ ಲೇಖಕರನ್ನು ಹೊರತರುವ, ಅವರನ್ನು ಗೌರವಿಸುವ ಕೆಲಸವನ್ನು ಬಳಗ ಮಾಡುತ್ತಿದೆ ಎಂದು ತಿಳಿಸಿದರು.
ಮೈಸೂರಿನ ಲೇಖಕ ಸತೀಶ್ ಜವರೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃತಿಯ ವಿಮರ್ಶೆಗಿಂತ ಹೆಚ್ಚಾಗಿ ವ್ಯಕ್ತಿ ವೈಭವೀಕರಣವಾಗುತ್ತಿದೆ. ಮೌಲ್ಯಗಳು ಮೂಲೆಗುಂಪಾಗುತ್ತಿವೆ. ಇವೆಲ್ಲವನ್ನು ಗಮನಿಸಿ ಜನಮುಖಿ ಬಳಗ ಹೊಸದೊಂದು ಆಯಾಮಕ್ಕೆ ಅಡಿಯಿಟ್ಟಿದ್ದು, ಈ ಬಳಗಕ್ಕೆ ಶುಭವಾಗಲಿ ಎಂದರು.
ಅವು ಅಂಗೆ ಕೃತಿಯ ಕರ್ತೃ ಡಾ.ರವಿಕುಮಾರ್ ನೀಹ, ಹುಣಸೆ ಚಿಗುರು ಮತ್ತು ಇತರೆ ಕತೆಗಳು ಕೃತಿಯ ಲೇಖಕಿ ದೀಪದ ಮಲ್ಲಿ ಹಾಗೂ ಬಣಮಿ ಕೃತಿಯ ಕಪಿಲ ಪಿ. ಹುಮನಾಬಾದ್ ಅವರುಗಳಿಗೆ 2024-25ನೆ ಸಾಲಿನ ಅಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗೆ ಭಾಜನರಾದ ಮೂವರು ಲೇಖಕರು ಮಾತನಾಡಿದರು. ಕೃತಿಗಳನ್ನು ಕುರಿತು ಲೇಖಕಿ ವಿವೇಕ ಕೆ.ವಿ., ಚಂದ್ರಶೇಖರ ನಿರಂತರ, ಎಂ.ವಿ.ಷಡಕ್ಷರಿ ಮಾತನಾಡಿದರು.


