ಸರ್ಕಾರದ ಆಶ್ರಯ ಬೇಡುವ, ಪ್ರಶಸ್ತಿಗಾಗಿ ಅರ್ಜಿ ಹಾಕುವ ಮಂದಿ ಹೆಚ್ಚುತ್ತಿದ್ದು, ಸಾಹಿತಿಗಳು, ಕಲಾವಿದರು ಇಂತಹ ಪ್ರಯತ್ನಗಳಿಂದ ದೂರ ಇರುಬೇಕು ಎಂದು ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.
ತುಮಕೂರಿನ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗದಿಂದ ಆಯೋಜಿಸಿದ್ದ 2ನೆ ವರ್ಷದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿವೆ. ಸರ್ಕಾರದ ಪ್ರಶಸ್ತಿಗಳಿಗಂತೂ ಅರ್ಥವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು ತುಂಬಾ ಎಚ್ಚರಿಕೆಯಿಂದ ಇರಬೇಕು. ರಾಜಕಾರಣಿಗಳ ಹಿಂದೆ ಬಿದ್ದು ಪ್ರಶಸ್ತಿ ಪಡೆಯುವಂತಾಗಬಾರದು. ಹಾಗೆಯೇ ಕಲಾವಿದರು ಮಾಸಾಶನಕ್ಕೆ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾ ಓಡಾಡಬಾರದು. ಇದು ನಮ್ಮ ನೈತಿಕತೆಯ ಪ್ರಶ್ನೆ ಎಂದು ಎಚ್ಚರಿಸಿದರು.
ಸಾಹಿತಿಗಳಿಗೆ, ಕವಿ, ಕಲಾವಿದರಿಗೆ ತಮ್ಮದೇ ಆದ ಒಂದು ಸಾಂಸ್ಕೃತಿಕ ಐತಿಹ್ಯವಿದೆ. ಜನಪರವಾಗಿ ನಿಲ್ಲುವ ಮತ್ತು ಬದುಕುವ ಸಾಮರ್ಥ್ಯವಿದೆ. ಬದುಕಲು ತಮ್ಮದೇ ಆದ ದಾರಿಗಳಿವೆ. ಇಂತಹ ದಾರಿಗಳನ್ನು ಬಿಟ್ಟು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಗೋಗರೆಯುವ ಪ್ರಯತ್ನಗಳನ್ನೇಕೆ ಮಾಡಬೇಕು ಎಂದು ಹೇಳಿದರು.
ಅರ್ಹರಲ್ಲದವರಿಗೆಲ್ಲ ಎಷ್ಟೋ ಬಾರಿ ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಗುತ್ತಿವೆ. ಇಂತಹ ಸಂದರ್ಭದಲ್ಲಿ ಇಬ್ಬರು ತೀವ್ರ ಮುಜುಗರಕ್ಕೆ ಒಳಗಾಗುತ್ತಾರೆ. ಅದರಲ್ಲಿ ಪ್ರಶಸ್ತಿ ಪ್ರದಾನ ಮಾಡುವವರು ಹಾಗೂ ಅರ್ಹತೆ ಇರುವವರು ಅದರೊಳಗೆ ಸೇರಿಕೊಂಡಾಗ ಮುಜುಗರಕ್ಕೆ ಒಳಗಾಗುತ್ತಾರೆ. ಇದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಗಳಿಗಾಗಿ ಕೆಲವರು ರಾಜಕಾರಣಿಗಳ ಹಿಂದೆ ಬೀಳುತ್ತಾರೆ. ಆತ ಏನೋ ಆಸೆಪಟ್ಟಿದ್ದಾನೆ, ಒಂದು ಕೊಟ್ಟುಬಿಡಿ ಎಂದು ರಾಜಕಾರಣಿಗಳು ಸಂಬಂಧಿಸಿದವರಿಗೆ ತಿಳಿಸುತ್ತಾರೆ. ಹಾಗೆ ಕೊಟ್ಟು ಬಿಡಲು ಅದೇನು ಮಕ್ಕಳಿಗೆ ಕೊಡುವ ಆಟಿಕೆಯ ವಸ್ತುವೆ ಎಂದು ಪ್ರಶ್ನಿಸಿದರು.
ಹೀಗೆ ಪ್ರಶಸ್ತಿಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ತುಮಕೂರಿನ ಬಹುಮುಖಿ ಬಳಗ ಸೇರಿದಂತೆ ರಾಜ್ಯದಲ್ಲಿ ಇನ್ನೂ ಸಾಕಷ್ಟು ಸಂಸ್ಥೆಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಸಂತಸವಾಗುತ್ತದೆ. ಇಂತಹ ಸಂಸ್ಥೆಗಳು ಇನ್ನೂ ಹೆಚ್ಚಾಗಿ ಬೆಳೆದು ಸಾಂಸ್ಕೃತಿಕವಾಗಿ ಬೆಳೆಯುತ್ತಿರುವವರನ್ನು ಪ್ರೋತ್ಸಾಹಿಸುವಂತಾಗಲಿ ಎಂದು ಹಾರೈಸಿದರು.
ಬಹುಮುಖಿ ಬಳಗದ ಸಂಚಾಲಕ ಮಂಜುನಾಥ್ ದಂಡಿನಶಿವರ, ನಾಗರಾಜು ಹೆಚ್.ವಿ. ಇತರರು ಮಾತನಾಡಿದರು. ಮತ್ತಿಹಳ್ಳಿ ಗಂಗಣ್ಣ ಪ್ರಾರ್ಥಿಸಿದರು. ತೀರ್ಥಕುಮಾರ್ ಸ್ವಾಗತಿಸಿದರು. ಗೋಪಾಲ್ ಆರ್.ವಿ. ನಿರೂಪಿಸಿದರು. ಎಂ.ಎಸ್.ಜಯಣ್ಣ ವಂದಿಸಿದರು. ದಾರಿಬುತ್ತಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


