ರಾಜ್ಯ ಸರ್ಕಾರ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರ ಹೆಸರುಗಳನ್ನು ಗುರುವಾರ ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯ ಸಾಹಿತಿ ತುಂಬಾಡಿ ರಾಮಯ್ಯ ಮತ್ತು ಎಚ್.ಎಲ್.ಪುಷ್ಪ ಸೇರಿದಂತೆ ಆರು ಮಂದಿ ಸಾಹಿತಿಗಳಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳಾದ ಶಿವಮೊಗ್ಗ ಜಿಲ್ಲೆಯ ಪ್ರೊ.ರಾಜೇಂದ್ರ ಚೆನ್ನಿ, ತುಮಕೂರಿನ ತುಂಬಾಡಿ ರಾಮಯ್ಯ, ಲೇಖಕಿ ಡಾ. ಎಚ್.ಎಲ್. ಪುಷ್ಪ, ಚಿಕ್ಕಬಳ್ಳಾಪುರದ ಪ್ರೊ.ಸುನಂದಮ್ಮ, ಚಿಕ್ಕಮಗಳೂರಿನ ಪ್ರೊ.ರಹಮತ್ ತರೀಕೆರೆ, ವಿಜಯಪುರದ ಹ.ಮಾ.ಪುಜಾರ ಅವರ ಹೆಸರುಗಳನ್ನು ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಾನಪದ ಕ್ಷೇತ್ರದಲ್ಲಿ ಕೊಪ್ಪಳದ ಬಸಪ್ಪ ಭರಮಪ್ಪ ಚೌಡಿ, ಶಿವಮೊಗ್ಗದ ಬಿ.ಟಾಕಪ್ಪ ಕಣ್ಣೂರು, ಬೆಳಗಾವಿಯ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಚಿತ್ರದುರ್ಗದ ಹನುಮಂತಪ್ಪ ಮಾರಪ್ಪ ಜೀಳಂಗಿ,, ಕೋಲಾರದ ತೋಪಣ್ಣ, ವಿಜಯಪುರದ ಸೋಮಣ್ಣ ದುಂಡಪ್ಪ ಧನಗೊಂಡ, ದಕ್ಷಿಣ ಕನ್ನಡದ ಸಿಂಧು ಗುಜರನ್, ಮೈಸೂರಿನ ಎಲ್ ಮಹದೇವಪ್ಪ ಉಡಿಗಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಕೊಪ್ಪಳದ ದೇವೇಂದ್ರಕುಮಾರ್ ಪತ್ತಾರ್, ಬೀದರ್ ಮಡಿವಾಳಯ್ಯ ಸಾಲಿ, ಚಲನಚಿತ್ರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಪ್ರಕಾಶ್ ರಾಜ್, ಕೊಡಗಿನ ವಿಜಯಲಕ್ಷ್ಮಿ ಸಿಂಗ್ ರಾಜ್ಯೋತ್ಸವ ಪ್ರಶ್ತಿಗೆ ಆಯ್ಕೆಯಾಗಿದ್ದಾರೆ.
ತುಂಬಾಡಿ ರಾಮಯ್ಯ ಅವರ ಪರಿಚಯ:
ಕ್ಯಾತಪ್ಪ ಮತ್ತು ಸಂಜೀವಮ್ಮ ಪುತ್ರ ರಾಮಯ್ಯ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಗೊಲ್ಲಹಳ್ಳಿಯಲ್ಲಿ 1954ರ ಜೂನ್ 1ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೊರಟಗೆರೆ ತಾಲೂಕಿನಲ್ಲೇ ಪೂರೈಸಿದರು. ಸ್ನಾತಕ ಪದವಿಯನ್ನು ತುಮಕೂರಿನ ಕಲಾ ಕಾಲೇಜಿನಲ್ಲಿ ಪಡೆದರು. ಕಾನೂನು ಪದವಿಯನ್ನು ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪಡೆದರು.
1986ರಲ್ಲಿ ಕಾರ್ಮಿಕ ನಿರೀಕ್ಷಕರಾಗಿ ಕೆಲಸಕ್ಕೆ ಸೇರಿದ ತುಂಬಾಡಿ ರಾಮಯ್ಯನವರು ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿ 2013ರಲ್ಲಿ ಸೇವೆಯಿಂದ ನಿವೃತ್ತರಾದರು. ನಂತರ ವಕೀಲಿ ವೃತ್ತಿಯನ್ನು ಮಾಡಿದರು.
ದಲಿತ, ರೈತ ಹಾಗೂ ಕನ್ನಡ ಚಳವಳಿಯಲ್ಲಿ ಭಾಗವಹಿಸಿದ್ದಾರೆ.ಇವರಿಗೆ ಹಲವು ಪ್ರಶಸ್ತಿಗಳು ಹುಡಿಕೊಂಡು ಬಂದಿವೆ. ಮಣೆಗಾರ, ಸ್ಪರ್ಶ, ಓದೋರಂಗ, ಜಾಲಗಿರಿ, ದಲಿತ ಕಾರಣ, ಮುತ್ತಿನ ಜೋಳ ಸೇರಿದಂತೆ 6 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.


