Thursday, January 29, 2026
Google search engine
Homeಮುಖಪುಟಸಿ.ಟಿ.ರವಿಯಿಂದ ಸಮಾಜ ನಿಂದನೆ: ಸವಿತಾ ಸಮಾಜ ಖಂಡನೆ-ಜಾತಿ ನಿಂದನೆ ಪ್ರಕರಣ ದಾಖಲಿಸಲು ಆಗ್ರಹ

ಸಿ.ಟಿ.ರವಿಯಿಂದ ಸಮಾಜ ನಿಂದನೆ: ಸವಿತಾ ಸಮಾಜ ಖಂಡನೆ-ಜಾತಿ ನಿಂದನೆ ಪ್ರಕರಣ ದಾಖಲಿಸಲು ಆಗ್ರಹ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸವಿತಾ ಸಮಾಜವನ್ನು ನಿಂದಿಸುವ ನಿಷೇಧಿತ ಪದ ಬಳಸಿರುವುದನ್ನು ಜಿಲ್ಲಾ ಸಮಿತಾ ಸಮಾಜದ ಮುಖಂಡರು ಖಂಡಿಸಿದ್ದಾರೆ. ಈ ಸಂಬಂಧ ತುಮಕೂರು ನಗರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ ರವಿಯವರ ವಿಧಾನ ಪರಿಷತ್ ಸ್ಥಾನವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಾ ಸಮಾಜದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ವಿ.ಮಂಜೇಶ್ ಗಾಂಧಿ, ಸಿ.ಟಿ. ರವಿಯವರು ಕೆಲ ತಿಂಗಳ ಹಿಂದೆ ಯಲ್ಲಾಪುರದಲ್ಲಿ ಮೋಸ, ವಂಚನೆ, ದರೋಡೆ, ಕಳ್ಳತನವನ್ನು ತಲೆ ಬೋಳಿಸುವುದಕ್ಕೆ ಹೋಲಿಕೆ ಮಾಡಿ ನಿಂದಿಸಿದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಮಿತಾ ಸಮಾಜವನ್ನು ನಿಂದಿಸುವ ನಿಷೇಧಿತ ಪದ ಬಳಸಿದ್ದರು. ಇದು ಉದ್ದೇಶಪೂರಕವಾಗಿ ನಮ್ಮ ಸಮಾಜವನ್ನು ನಿಂದಿಸುವುದೇ ಆಗಿದೆ ಎಂದು ಆಪಾದಿಸಿದರು.

ದೇಶ ಭಕ್ತನಂತೆ ಪೋಸ್ ಕೊಡುವ ಸಿ.ಟಿ. ರವಿಯವರಿಗೆ ಎಲ್ಲಾ ಸಮಾಜಗಳನ್ನು ಗೌರವದಿಂದ ಕಾಣಬೇಕೆಂಬ ವಿವೇಚನೆ ಇಲ್ಲ. ಭಾರತದ ಅವಿಭಾಜ್ಯ ಅಂಗವಾಗಿರುವ, ಎಲ್ಲಾ ಸಮಾಜದವರ ಹೊಂದಿಕೊಂಡು ಹೋಗುವ ಕ್ಷೌರಿಕ ಸಮಾಜದವರ ಬಗ್ಗೆ ಅತ್ಯಂತ ಕೀಳು ಭಾವನೆ ಹೊಂದಿರುವ ಇವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಸವಿತಾ ಸಮಾಜದ ವೃತ್ತಿ ಹಾಗೂ ಜಾತಿಯ ಭಾವನೆಗಳನ್ನು ಕೆರಳಿಸಿ ನಿಷೇಧಿತ ಪದ ಬಳಸಿ ಅಪಮಾನ ಮಾಡಿದ ಸಿ.ಟಿ.ರವಿ ವಿರುದ್ಧ ಜಾತಿ ನಿಂದನೆ ಆರೋಪದಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಇಂತಹ ವ್ಯಕ್ತಿಗಳನ್ನು ಸವಿತಾ ಸಮಾಜ ಧಿಕ್ಕರಿಸುತ್ತದೆ. ಯಾರ ಹಂಗಿಲ್ಲದೆ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಾಭಿಮಾನಿ ಸವಿತಾ ಸಮಾಜದವರನ್ನು ಅಪಮಾನ ಮಾಡಿರುವ ಸಿ.ಟಿ.ರವಿ ನಮ್ಮ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸವಿತಾ ಸಮಾಜದ ರಾಜ್ಯಾಧ್ಯಕ್ಷ ಕೆ.ಎಸ್.ರಘುನಾಥ್, ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣಸ್ವಾಮಿ, ಮುಖಂಡರಾದ ಪಾರ್ಥಸಾರಥಿ, ಶಾಂತರಾಜು, ನಾಗೇಂದ್ರ, ಹರೀಶ್, ಬಸವರಾಜು, ನಾಗಭೂಷಣ್, ಒ.ಕೆ.ರಾಜು, ಎ.ಎಸ್.ಸುರೇಶ್, ಎ.ಆರ್.ಉಮೇಶ್, ರವಿಚಂದ್ರ, ಮಂಗಳವಾಡ ನಾಗರಾಜು, ಕೃಷ್ಣಮೂರ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular