ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಶೇ 1 ರಷ್ಟು ಇತ್ತು. ಈಗ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ. 29ಕ್ಕೆ ಹೆಚ್ಚಳವಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಟಿ ಜಿ ಸೀತಾರಾಮ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ದೇಶ ಪ್ರಪಂಚದಲ್ಲಿ ನಾಲ್ಕನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ, ಯಾವ ದೇಶ ಆರ್ಥಿಕವಾಗಿ ಪ್ರಗತಿ ಹೊಂದುವುದೋ ಆ ದೇಶ ಉನ್ನತ ಶಿಕ್ಷಣದಲ್ಲೂ ಮುಂದುವರೆಯುತ್ತದೆ ಇದೆ ಎಂದರು.
ತಾಂತ್ರಿಕವಾಗಿಯು ದೇಶ ಮುಂದುವರೆಯುತ್ತಿದೆ. ರಕ್ಷಣಾ ಇಲಾಖೆಯು ಹಲವು ಸಂಶೋಧನೆಗಳಿಗೆ ತೆರೆದುಕೊಂಡಿದೆ, ಚಂದ್ರಯಾನ, ಮಂಗಳಯಾನಗಳಂಥಾ ಬೃಹತ್ ಯೋಜನೆಗಳನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ಸಂಶೋದನೆಗಳಲ್ಲೂ ಭಾರತ ಹಿಂದುಳಿದಲ್ಲ, ಸರ್ವ ರಂಗಗಳಲ್ಲೂ ಸಹ ತಾಂತ್ರಿಕವಾಗಿ ಮುಂದುವರೆಯುತ್ತಿದೆ ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪತ್ರಿಕೋದ್ಯಮಿ ಎಸ್ ನಾಗಣ್ಣ, ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಮೈಕ್ರೋ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನ ದಿಲೀಪ್ ಸೂರನಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ ಎಂ ವೆಂಕಟೇಶ್ವರಲು, ಪ್ರಭಾರ ಕುಲಸಚಿವ ಪ್ರೊ.ಎಂ ಕೋಟ್ರೇಶ್, ಪರೀಕ್ಷಾಂಗ ಕುಲಸಚಿವ ಪ್ರೊ ಎನ್.ಸತೀಶ್ ಗೌಡ ಇದ್ದರು.


