Friday, November 22, 2024
Google search engine
Homeಮುಖಪುಟಜಾತಿ ಗಣತಿ ವರದಿ ಯಾರಿಗೆ ತಿರುಗುಬಾಣ?

ಜಾತಿ ಗಣತಿ ವರದಿ ಯಾರಿಗೆ ತಿರುಗುಬಾಣ?

ಕರ್ನಾಟಕದಲ್ಲಿ ಹಿಂದುಳಿದ ವರ್ಗದ ಜಾತಿಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಮುಗಿದು ವರದಿ ಸಿದ್ದವಾಗಿ ಆರೇಳು ವರ್ಷಗಳು ಕಳೆದರೂ ಸರ್ಕಾರಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ಜಾತಿಗಣತಿ ವರದಿ ತಯಾರಾದರೂ ಅದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಲೇ ಇಲ್ಲ. ಜಾತಿ ಗಣತಿಗೆ ಚಾಲನೆ ನೀಡಿದವರೇ ಆ ವರದಿಯನ್ನು ಸ್ವೀಕರಿಸುವ ಬಗ್ಗೆ ಗಮನಹರಿಸಲಿಲ್ಲ. ಯಾಕೆ? ಆ ವರದಿಯನ್ನು ಸರ್ಕಾರ ಸ್ವೀಕರಿಸಲು ಇದ್ದ ತೊಡಕುಗಳು ಯಾವುವು? ವರದಿ ಸಲ್ಲಿಕೆಯಾಗದಂತೆ ನೋಡಿಕೊಂಡವರು ಯಾರು? ಇದು ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ತಯಾರಿಸಿ ಕೆಲವೇ ಗಂಟೆಗಳಲ್ಲಿ ವರದಿಯಲ್ಲಿ ಯಾವ ಜಾತಿಯ ಜನಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ವರದಿಯಲ್ಲಿನ ಅಂಶಗಳು ಸೋರಿಕೆಯಾದಾಗ ಪರಿಶಿಷ್ಟರೇ ಮೊದಲ ಸ್ಥಾನದಲ್ಲಿದ್ದರು. ಎಷ್ಟು ವೇಗದಲ್ಲಿ ಸೋರಿಕೆಯಾದ ವರದಿಯ ಆಂಶಗಳು ಪ್ರಸಾರಗೊಂಡವೋ ಅಷ್ಟೇ ವೇಗದಲ್ಲಿ ಮರೆಯಾದವು. ಆದರೆ ಮುಖ್ಯವಾಗಿ ಹೊರಬೀಳಬೇಕಾಗಿದ್ದ ಸತ್ಯಾಂಶ ಮಾತ್ರ ವರದಿಯಲ್ಲೇ ಉಳಿದುಕೊಂಡವು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಿವರಗಳು ಬಹಿರಂಗಗೊಳ್ಳದಂತೆ ವ್ಯವಸ್ಥಿತಿವಾಗಿ ನೋಡಿಕೊಳ್ಳಲಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಇಬ್ಬರೂ ಹಿಂದುಳಿದ ವರ್ಗದ ಪ್ರತಿನಿಧಿಗಳೇ ಆಗಿದ್ದರೂ ವರದಿ ಸಲ್ಲಿಸುವ ಮತ್ತು ಸ್ವೀಕರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಬದ್ದತೆ ಹೊಂದಿರುವ ಸಿದ್ದರಾಮಯ್ಯ ವರದಿಯನ್ನು ಅಂದೇ ಅಂಗೀಕಾರ ಮಾಡುವ ಎಲ್ಲಾ ಅವಕಾಶಗಳು ಇದ್ದವು. ಆದರೆ ಆ ಬದ್ದತೆಯನ್ನು ಸಿದ್ದರಾಮಯ್ಯ ತೋರಿಸಲಿಲ್ಲ. ಆರಂಭದಲ್ಲಿದ್ದ ಉತ್ಸಾಹ, ಹುಮ್ಮಸ್ಸು ವರದಿ ತಯಾರಾದ ಮೇಲೆ ಇಲ್ಲವಾಗಿತ್ತು ಎಂಬ ಆರೋಪಗಳು ಹಿಂದುಳಿದ ವರ್ಗಗಳ ಮುಖಂಡರಲ್ಲಿ ವ್ಯಕ್ತವಾಗತೊಡಗಿವೆ.

ವರದಿಯಲ್ಲಿನ ಒಂದು ಅಂಶದ ಕುರಿತು ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಹಿಂದುಳಿದ ವರ್ಗಗಳಲ್ಲಿನ ಎರಡು ಬಲಿಷ್ಠ ಸಮುದಾಯಗಳು ಹಿಂದುಳಿದ ವರ್ಗದ ಮೀಸಲಾತಿಯ ಬಹುಪಾಲನ್ನು ಬಾಚಿಕೊಂಡಿರುವುದರ ಮೇಲೆ ವರದಿ ಬೆಳಕು ಚೆಲ್ಲಿದೆ. ಅದೇ ಕಾರಣಕ್ಕೆ ಆ ಎರಡು ಸಮುದಾಯದ ಮುಖಂಡರು ಸರ್ಕಾರದ ಮೇಲೆ ಒತ್ತಡ ತಂದು ಜಾತಿಗಣತಿ ಸರ್ಕಾರಕ್ಕೆ ಸಲ್ಲಿಕೆಯಾಗದಂತೆ ನೋಡಿಕೊಂಡರು. ನಿಜವಾಗಿಯೂ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಅಂಗೀಕರಿಸಿದರೆ ಆ ಎರಡು ಸಮುದಾಯಗಳಿಗೆ ತೊಡಕು ಖಚಿತ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ವರದಿಯ ಬೇಕಿಲ್ಲದ ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆಯಾಗುವಂತೆ ನೋಡಿಕೊಂಡು ರಹಸ್ಯವನ್ನು ಹಾಗೇ ಕಾಪಾಡಿಕೊಂಡು ಬರಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಹ ನಿರ್ದರ್ಶನಗಳು ನಮ್ಮ ಮುಂದಿವೆ.

ಇತ್ತೀಚೆಗೆ ತುಮಕೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಅತೀ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿಂದುಳಿದ ವರ್ಗಗಳಿಗೆ ಸಿಗಬೇಕಾದ 27ರಷ್ಟು ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸುವುದು, ಅತೀ ಹಿಂದುಳಿದ ಸಮುದಾಯಗಳಿಗೆ ರಾಜಕೀಯದಲ್ಲಿ ಅವಕಾಶಗಳು ಸಿಗುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುವುದು ಮತ್ತು ಜಾತಿಗಣತಿ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮೇಲೆ ಒತ್ತಡ ತರುವುದು, ಹಿಂದುಳಿದ ವರ್ಗಗಳ ಸಂಘಟನೆಯನ್ನು ಬಲಗೊಳಿಸುವುದು ಸಮಾರಂಭದ ಮುಖ್ಯ ಉದ್ದೇಶವಾಗಿತ್ತು.

ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ನಾಯಕ ಕೆ.ಎನ್.ರಾಜಣ್ಣ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖಂಡ ಆರ್.ವಿಸುದರ್ಶನ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಸಿ.ಎಸ್.ದ್ವಾರಕನಾಥ್, ಕಾಂತರಾಜು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಅತೀ ಹಿಂದುಳಿದ ವರ್ಗಗಳ ಮುಖಂಡರಿಗೆ ವೇದಿಕೆಯ ಮೇಲೆ ಅವಕಾಶ ನೀಡದಂತೆ ನೋಡಿಕೊಳ್ಳಲಾಗಿತ್ತು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ವೇದಿಕೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರನ್ನು ವೇದಿಕೆಯ ಮೇಲೆ ತೀವ್ರ ತರಾಟೆಗೆ ತೆಗೆದುಕೊಂಡರು. ನೀವು ಹಿಂದುಳಿದ ಸಮುದಾಯಕ್ಕೆ ಸೇರಿದ್ದರೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರಾಸಕ್ತಿ ತೋರಿದ್ದೇಕೆ? ಕಾರಣಗಳನ್ನು ನೀಡಬೇಕು. ಸಿದ್ದರಾಮಯ್ಯ ಕೂಡ ಅಹಿಂದ ವರ್ಗದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದರು. ಆದರೂ ವರದಿಯನ್ನು ತಡೆಹಿಡಿದಿದ್ದು ಏಕೆ? ನೀವು ಮಾಡಿದ ತಪ್ಪಿನಿಂದಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆಯಲು ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಸುದ್ದಿ ಎಲ್ಲಿಯೂ ಪ್ರಕಟವಾಗದಂತೆ ನೋಡಿಕೊಳ್ಳಲಾಗಿದೆ.

ಕಾಂಗ್ರೆಸ್ ಮುಖಂಡ ಸಿ.ಎಸ್. ದ್ವಾರಕನಾಥ್ ಮಾತನಾಡಿ “ಹಿಂದುಳಿದ ವರ್ಗಗಳಲ್ಲಿ ನೂರಾರು ಜಾತಿಗಳು ಇವೆ. ಪ್ರವರ್ಗ 1ರಲ್ಲಿ 95 ಜಾತಿಗಳಿದ್ದು ಶೇ.4%ರಷ್ಟು ಮೀಸಲಾತಿ ನೀಡಲಾಗಿದೆ. ಪ್ರವರ್ಗ 2ಎ ರಲ್ಲಿ 102 ಜಾತಿಗಳಿದ್ದು ಶೇ.15ರಷ್ಟು ಮೀಸಲಾತಿ ನೀಡಿದೆ. ಪ್ರವರ್ಗ 2ಬಿ ನಲ್ಲಿ ಮುಸ್ಲೀಮರಿದ್ದು ಶೇ.4ರಷ್ಟು ಮೀಸಲಾತಿ ಕಲ್ಪಿಸಿದೆ. ಪ್ರವರ್ಗ 3ಎ ನಲ್ಲಿ 3 ಜಾತಿಗಳಿದ್ದು ಶೇ.4% ಮೀಸಲಾತಿ ನೀಡಿದೆ. ಪ್ರವರ್ಗ 3ಬಿ ನಲ್ಲಿ 6 ಜಾತಿಗಳಿದ್ದು ಶೇ.5ರಷ್ಟು ಮೀಸಲಾತಿ ಕಲ್ಪಿಸಿದೆ. ಎಸ್.ಸಿ. 101 ಜಾತಿಗಳಿದ್ದು ಶೇ.15% ಮೀಸಲಾತಿ ಹಾಗೂ ಎಸ್.ಟಿಯಲ್ಲಿ 50 ಜಾತಿಗಳಿದ್ದು ಶೇ.3ರಷ್ಟು ಮೀಸಲಾತಿ ನೀಡಿದೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರುವ ಜಾತಿಗಳಲ್ಲಿ ಬೆರಳೆಣಿಕೆಯ ಜಾತಿಗಳು ಮಾತ್ರ ಮೀಸಲಾತಿಯ ಲಾಭ ಪಡೆದುಕೊಂಡಿವೆ. ಉದ್ಯೋಗ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲೂ ಪ್ರಾಬಲ್ಯ ಸಾಧಿಸಿವೆ. ಆರ್ಥಿಕವಾಗಿಯೂ ಶಕ್ತವಾಗಿವೆ. ಇಲ್ಲಿಯವರೆಗೂ ಎರಡು-ಮೂರು ಹಿಂದುಳಿದ ಸಮುದಾಯಗಳು ಮೀಸಲಾತಿಯಿಂದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿವೆ. ಅತೀ ಹಿಂದುಳಿದ ಜಾತಿಗಳು ಮೀಸಲಾತಿಯಿಂದ ವಂಚಿತವಾಗಿವೆ. ಯಾವುದೇ ಕ್ಷೇತ್ರದಲ್ಲೂ ಆ ಜಾತಿಗಳು ಮೇಲೆ ಬರಲು ಆಗಿಲ್ಲ. ಆ ಜಾತಿಗಳನ್ನು ನಿರ್ಲಕ್ಷ್ಯ ಮಾಡುತ್ತಾ ಅವರು ರಾಜಕೀಯ ಅಧಿಕಾರ ಹಿಡಿಯದಂತೆ ನೋಡಿಕೊಳ್ಳಲಾಗಿದೆ. ಹಾಗಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲೂ ಒಳಮೀಸಲಾತಿ ಕಲ್ಪಿಸಬೇಕು. ಆ ಮೂಲಕ ರಾಜಕೀಯ ಮುಖ್ಯವಾಹಿನಿಗೆ ಪ್ರವೇಶ ಮಾಡದೇ ಇರುವ ಜಾತಿಗಲಿಗೆ ಅವಕಾಶ ಕಲ್ಪಿಸುವಂತಹ ವ್ಯವಸ್ಥೆಯನ್ನು ಮೀಸಲಾತಿ ಪಡೆದವರು ಮಾಡಬೇಕು ಎಂಬ ಅಭಿಪ್ರಾಯವನ್ನು ದ್ವಾರಕನಾಥ್ ವ್ಯಕ್ತಪಡಿಸಿದ್ದರು.

ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಗಾವುದ ಗಾವುದ ದೂರ ಉಳಿದಿರುವ ಜಾತಿಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಅಗಬೇಕಾದುದು ಜರೂರಾಗಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು “ಉಳುವವನೇ ಭೂಮಿಯ ಒಡೆಯ” “ಜೀತವಿಮುಕ್ತಿ” “ಹಿಂದುಳಿದ ವರ್ಗಗಳಿಗೆ ಹಾಸ್ಟೆಲ್ ಸೌಲಭ್ಯ” ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಎಷ್ಟೇ ವಿರೋಧದ ನಡುವೆಯೂ ಧೈರ್ಯದಿಂದ ಅನುಷ್ಟಾನಕ್ಕೆ ತಂದು ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರೂ ಕೂಡ ಜಾತಿಗಣತಿ ವರದಿಯನ್ನು ಗಟ್ಟಿ ಮನಸ್ಸಿನಿಂದ ಧೈರ್ಯದಿಂದ, ಯಾವುದೇ ಒತ್ತಡಕ್ಕೆ ಒಳಗಾಗದೆ ಅನುಷ್ಠಾನಕ್ಕೆ ತರಬಹುದಿತ್ತು. ಆದರೆ ಆ ಕಾರ್ಯ ಅವರಿಂದ ಆಗಲಿಲ್ಲ.

ಮುಂದೆ ಮುಖ್ಯಮಂತ್ರಿಗಳಾಗಿ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೂ ಕೂಡ ಜಾತಿಗಣತಿ ವರದಿಯ ಬಗ್ಗೆ ಉಸಿರು ಎತ್ತುತ್ತಿಲ್ಲ. ಜಾತಿಗಣತಿ ವರದಿ ಅನುಷ್ಠಾನಕ್ಕೆ ಬಂದರೆ ಆ ಎರಡು ಮೂರು ಜಾತಿಗಳಿಗೆ ತಿರುಗು ಬಾಣವಾಗಬಹುದು ಎಂಬ ಕಾರಣಕ್ಕಾಗಿಯೇ ಅದು ಆಯೋಗದ ಕಚೇರಿಯಲ್ಲೇ ದೂಳು ಕುಡಿಯುತ್ತಿದೆ. ರಾಜಕೀಯ ಅಧಿಕಾರದ ಕನಸು ಕಾಣುತ್ತಾ ತಬ್ಬಲಿತನ ಅನುಭವಿಸುತ್ತಿರುವ ಅತೀ ಹಿಂದುಳಿದ ಜಾತಿಗಳು ಹೋರಾಟದ ಜಾಡು ಬಿಡದಂತೆ ಮುನ್ನಡೆಯುತ್ತಲೇ ಇವೆ. “ಎಳವನ ಮೇಲೆ ಕುರುಡ ಕೂತಿದ್ದಾನೆ. ದಾರಿ ಸಾಗುವುದೆಂತೋ!!!

ರಾಷ್ಟ್ರೀಯ ಮಟ್ಟದಲ್ಲೂ ಜಾತಿ ಗಣತಿ ಅಗತ್ಯ ಎಂಬ ಪ್ರತಿಪಾದನೆ ವ್ಯಕ್ತವಾಗುತ್ತಿದೆ. ಬಿಹಾರ, ಉತ್ತರ ಪ್ರದೇಶದ ಹಿಂದುಳಿದ ನಾಯಕರು ಕೇಂದ್ರಕ್ಕೆ ಜಾತಿಗಣತಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular