ವಿಶ್ವವಿದ್ಯಾಲಯದ ಆವರಣದಲ್ಲಿ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೊರಡಿಸಿರುವುದು ವ್ಯಾಪಕ ಖಂಡನೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಫೇಸ್ ಬುಕ್ ವಾಲ್ ಗಳಲ್ಲಿ ಬರೆದುಕೊಂಡಿರುವ ಹಲವು ಅಧ್ಯಾಪಕರು, ಹೋರಾಟಗಾರರು, ಬರಹಗಾರರು, ಲೇಖಕರು, ಪ್ರಗತಿಪರರು ಇದೊಂದು ರೀತಿಯ ತಾಲಿಬಾನ್ ಮಾದರಿ ಆಡಳಿತ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಅಷ್ಟೇ ಅಲ್ಲ, ಸಂಜೆ. 6.30ರ ನಂತರ ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ತಿರುಗಾಡುವುದನ್ನು ನಿಷೇಧಿಸಿರುವುದಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ. ಪೊಲೀಸ್ ಇಲಾಖೆಯ ಮೌಖಿಕ ನಿರ್ದೇಶನ ಮೇರೆಗೆ ಈ ಸುತ್ತೋಲೆ ಹೊರಡಿಸಿದೆ ಎಂಬ ಕಾರಣವನ್ನೂ ನೀಡಿದೆ.
ಮೈಸೂರು ವಿವಿಯ ಸುತ್ತೋಲೆಗೆ ಖಂಡನೆ ವ್ಯಕ್ತವಾಗಿದೆ. “ಸಂಜೆ ಆರೂವರೆ ನಂತರ ಹೆಣ್ಣುಮಕ್ಕಳು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಓಡಾಡುವುದನ್ನು ನಿಷೇಧಿಸುವ ಬದಲು ಪೂರ್ತಿಯಾಗಿ ಶಿಕ್ಷಣದಿಂದಲೇ ಹೆಣ್ಣುಮಕ್ಕಳನ್ನೇ ನಿಷೇಧಿಸಿಬಿಡಿ. ನಮ್ಮಲ್ಲೂ ತಾಲಿಬಾನ್ ಮಾದರಿ ಆಡಳಿತವಿದೆ ಎಂದು ಎದೆ ತಟ್ಟಿಕೊಂಡುಹೇಳುತ್ತೇವೆ” ಎಂದು ಹೋರಾಟಗಾರ ಮತ್ತು ಪತ್ರಕರ್ತ ದಿನೇಶ್ ಕುಮಾರ್ ಕಿಡಿಕಾರಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ಅಧ್ಯಾಪಕಿ ಆಶಾರಾಣಿ ಫೇಸ್ಬುಕ್ ಖಾತೆಯಲ್ಲಿ ‘ಮೈಸೂರು ವಿವಿಯ ಸುತ್ತೋಲೆಯನ್ನು ಹಂಚಿಕೊಂಡು ‘ ಗೆರೆ ಕೊರೆಯುವವರು ನೀವೆ, ಹಾರುವವರು ನೀವೆ, ಹಾರಿ, ಎಗರಿ ಗೆರೆಯನಿನ್ನಾದರೂ ಅಳಿಸಿ’ ಎಂದು ಹೆಣ್ಣುಮಕ್ಕಳ ಮೇಲೆ ಹೇರಿರುವ ನಿಷೇಧವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಹೋರಾಟಗಾರ ಹಾಗೂ ಉಪನ್ಯಾಸಕ ಕೊಟ್ಟ ಶಂಕರ್ ಕೂಡ ಮೈಸೂರು ವಿಶ್ವವಿದ್ಯಾಲಯದ ಸುತ್ತೋಲೆಗೆ ಖಂಡನೆ ವ್ಯಕ್ತಪಡಿಸಿದ್ದು, ಸಂಜೆ 6.30ರೊಳಗೆ ಹೆಣ್ಣುಮಕ್ಕಳನ್ನು ಮನೆಗೆ ಬರುವಂತೆ ಮಾಡಿ’ ಪ್ಲೀಸ್ ಎಂದು ಹೇಳಿದ್ದಾರೆ.
ಮಹಿಳಾ ಹೋರಾಟಗಾರ್ತಿ, ಕೆ.ಎಸ್.ವಿಮಲ “ಅತ್ತ ಗಂಡಿನ ದಾಹಕ್ಕೂ ಬಲಿ, ಇತ್ತ ಗಂಡಾಲೋಚನೆಯ ಅತಿರೇಕಕ್ಕೂ ಬಲಿ. ಶಿಕ್ಷೆ ವಿಧಿಸಬೇಕಾದ್ದು ತಪ್ಪು ಮಾಡುವವರಿಗೆ. ಸಂವಿಧಾನ ನೀಡಿದ ಸಮಾನ ಅವಕಾಶ ಮತ್ತು ಘನತೆಯ ಬದುಕು, ಮತ್ತು ವ್ಯಕ್ತಿ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳುವ ಈ ಆದೇಶ ಒಪ್ಪಬೇಕಾ? ಇದರ ಬದಲು ಅತ್ಯಾಚಾರದ ಮನಃಸ್ಥಿತಿಯ ಗಂಡಸರು ಯಾರೂ ಮಹಿಳೆಯರು ಓಡಾಡುವ ಜಾಗದಲ್ಲಿ ಸಂಚರಿಸಬಾರದು ಎಂದು ಆದೇಶ ಹೊರಡಿಸಿದರೆ ಹೇಗೆ? ಎಂದು ಪ್ರಶ್ನೆ ಹಾಕಿದ್ದಾರೆ.