ಹಿರೇಹಳ್ಳಿ ಸಮೀಪ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಿನ್ನೆಲೆ:
ತುಮಕೂರು ತಾಲೂಕು ಹಿರೇಹಳ್ಳಿ ಸಮೀಪದ ಚೋಟಸಾಬರ ಬೆಟ್ಟದ ಬುಡದಲ್ಲಿ ದನ ಮೇಯಿಸಲು ಹೋಗಿದ್ದ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣ ಮಂಗಳವಾರ ನಡೆದಿದೆ. ಮೃತ ಮಹಿಳೆಯನ್ನು ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ಜಯಲಕ್ಷ್ಮಿ ಬೆಟ್ಟದ ಸಮೀಪ ದನ ಮೇಯಿಸಲು ಹೋಗಿದ್ದರು. ಸಂಜೆಯಾದರೂ ಆಕೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಪತಿ ಶಿವಕುಮಾರ್ ಪತ್ನಿಯನ್ನು ಹುಡುಕಿಕೊಂಡು ಹೋಗಿ ನೋಡಿದಾಗ ಬೆಟ್ಟದ ಸಮೀಪವೇ ಪತ್ನಿ ಶವವಾಗಿರುವುದು ಪತ್ತೆ ಆಗಿದೆ.
ಮೃತ ಮಹಿಳೆ ದೇಹದ ಮೇಲೆ ಕಚ್ಚಿದ ಗಾಯಗಳಾಗಿರುವ ಕಲೆಗಳು ಕಂಡುಬಂದಿವೆ. ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚಲು 15 ಸದಸ್ಯರ ತಂಡವನ್ನು ಪೊಲೀಸ್ ಅಧಿಕಾರಿಗಳು ರಚಿಸಿದ್ದಾರೆ.
ಈ ಭಾಗದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಕಳೆದ 2 ವರ್ಷದ ಹಿಂದ ಕೊಡಿಗೇಹಳ್ಳಿ ಸಮೀಪ ಗರ್ಭಿಣಿಯನ್ನು ಹತ್ಯೆ ಮಾಡಲಾಗಿತ್ತು. ನಾಲ್ಕು ವರ್ಷದ ಹಿಂದೆ ಪಂಡಿತನಹಳ್ಳಿ ಸಮೀಪ ಯುವತಿಯ ಕೊಲೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಚೋಟಸಾಬರ ಬೆಟ್ಟದ ನಿರ್ಜನ ಪ್ರದೇಶದಲ್ಲಿ ಯುವಕರ ಗುಂಪು ಗಾಂಜಾ, ಮದ್ಯಸೇವನೆ ಮಾಡುವ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಇವುಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬಂದಿವೆ.