ಅತ್ಯಾಚಾರ ಸಂತ್ರಸ್ತೆ ಘಟನೆ ಸಂಬಂಧ ಮಾಹಿತಿ ನೀಡದಿದ್ದರೂ ತನಿಖೆಯನ್ನು ವಿವಿಧ ಕೋನಗಳಿಂದ ನಡೆಸುತ್ತಿದ್ದೇವೆ. ಆರೋಪಿಗಳನ್ನು ಬಂಧಿಸುತ್ತೇವೆ. ಇದಕ್ಕೆ ಸ್ವಲ್ಪ ಸಮಸ್ಯೆ ಬೇಕು. ತನಿಖೆ ಸಂದರ್ಭದಲ್ಲಿ ಪ್ರಕರಣದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರವೀಣ್ ಸೂದ್, ಸಂತ್ರಸ್ತೆ ಶಾಕ್ ಗೆ ಒಳಗಾಗಿದ್ದಾರೆ. ಹಾಗಾಗಿ ಅವರಿಂದ ಮಹಿತಿಯನ್ನು ಪಡೆಯಲು ಆಗಿಲ್ಲ. ಹಾಗೆಂದ ಮಾತ್ರಕ್ಕೆ ಸಂತ್ರಸ್ತೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಆಕೆಯ ಮನಸ್ಥಿತಿ ಸರಿಯಾದ ನಂತರ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದರು.
ಆಗಸ್ಟ್ 24ರಂದು ಘಟನೆ ನಡೆದಿರುವುದು ನಿಜ. ಇದೊಂದು ಸೂಕ್ಷ್ಮವಾದ ಘಟನೆ. ತನಿಖೆಯಲ್ಲಿ ಕೆಲ ಟೆಕ್ನಿಕಲ್ ಸಾಕ್ಷ್ಯಗಳು ದೊರೆತಿವೆ. ಈಗ ದೊರೆತಿರುವ ಸಾಕ್ಷ್ಯಗಳನ್ನು ಇಟ್ಟುಕೊಂಡು ಬೇರೆಬೇರೆ ಕೋನಗಳಿಂದಲೂ ತನಿಖೆ ನಡೆಸುತ್ತೇವೆ. ತನಿಖೆ ಕಾರ್ಯ ಮುಂದುವರಿದಿದೆ. ತನಿಖೆ ದೃಷ್ಯಿಯಿಂದ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಅತ್ಯಾಚಾರ ಪ್ರಕರಣದ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲಿದ್ದಾರೆ ಎಂಬ ಮಾಧ್ಯಮಗಳ ನಿರೀಕ್ಷೆ ಹುಸಿಯಾಯಿತು. ಗೃಹ ಸಚಿವರು ಪೊಲೀಸ್ ಮಹಾನಿರ್ದೇಶಕರ ಮಾತುಗಳನ್ನೇ ಪುನರುಚ್ಚರಿಸಿದರು.