ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ನಿರ್ವಹಣೆ ಮತ್ತು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅತ್ಯಾಚಾರ ಪ್ರಕರಣ ನಡೆದು 72 ಗಂಟೆಯಾಗಿದೆ. ಆದರೂ ಆರೋಪಿಗಳನ್ನು ಪತ್ತೆಹಚ್ಚಲು ಆಗಿಲ್ಲ. ಇದು ಸರ್ಕಾರದ ಅಸಮರ್ಥತೆಯನ್ನು ಎತ್ತಿತೋರಿಸುತ್ತದೆ ಎಂದು ಟೀಕಿಸಿದರು.
ಪೊಲೀಸ್ ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಅಪರಾಧ ಪ್ರಕರಣಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಸಾಧ್ಯವಿಲ್ಲ. ಸರ್ಕಾರ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಸರ್ಕಾರ ಇಂತಹ ಲೋಪದೋಷಗಳನ್ನು ತಿದ್ದಿಕೊಂಡು ನಡೆಯಬೇಕು. ಆಗ ಮಾತ್ರ ಆಡಳಿತ ಸರಿದಾರಿಗೆ ಬರುತ್ತದೆ. ಮೈಸೂರು ಅತ್ಯಾಚಾರ ಪ್ರಕರಣದ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಇದು ಸರಿಯಲ್ಲ. ಪ್ರಕರಣದ ತನಿಖೆ ಸರಿದಿಕ್ಕಿನಲ್ಲಿ ಹೋಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.