ಮೈಸೂರಿನ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಗೃಹ ಸಚಿವರು ನೀಡಿರುವ ಹೇಳಿಕೆಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರುಷ ಮಾಡಿದ ತಪ್ಪಿಗೆ ಮಹಿಳೆಯರನ್ನು ನಿಂದಿಸುವ ನಾನ್ ಸೆನ್ಸ್ ಗೆ ಕೊನೆ ಹಾಡಿ ಎಂದು ಹೇಳಿದ್ದಾರೆ.
ಪುರುಷನೊಬ್ಬ ಮಹಿಳೆಯ ಮೇಲೆ ಎಸಗುವ ಅಪರಾಧಕ್ಕೆ ಯಾವಾಗಲೂ ಮಹಿಳೆಯಾಗಿ ನಾವೇ ನಿಂದನೆ ಅನುಭವಿಸಬೇಕಾಗಿದೆ. ಅದು ಅತ್ಯಾಚಾರವಾಗಿರಲಿ, ಅಥವಾ ದೈಹಿಕ, ಮಾನಸಿಕ ಕಿರುಕುಳ, ಬೈಗುಳವೆ ಆಗಿರಲಿ. ನಾವು ಯಾವಾಗಲೂ ಕೇಳುವ ಪದ ಅದು ನಿನ್ನ ತಪ್ಪು ಎಂಬ ಮಾತುಗಳು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ಅದನ್ನು ಧರಿಸಬಾರದಿತ್ತು, ತುಂಬಾ ಟೈಟ್, ತುಂಬಾ ಚಿಕ್ಕದು, ತುಂಬಾ ಆಕರ್ಷಕ, ತುಂಬಾ ಉದ್ದದ್ದು, ಸಂಜೆ ನಂತರ ನೀನು ಹೊರಹೋಗಬಾರದು, ನೀನು ಯಾವಾಗಲೂ ಹೊರಗೆ ಹೋಗಲೇಬಾರದು ಎಂದು ಫೇಸ್ ಬುಕ್ ನಲ್ಲಿ ಬರೆದು ಗೃಹ ಸಚಿವರು ನಿನ್ನೆ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.
ಅಷ್ಟೇ ಅಲ್ಲ “ಮೇಕಪ್ ಮಾಡಿಕೊಳ್ಳಬಾರದು, ಕೆಂಪು ಲಿಪ್ ಸ್ಟಿಕ್ ಏಕೆ? ಮುಖದಲ್ಲಿ ಮಿಂಚು ಏಕೆ? ನೀನು ಕಣ್ಣು ಮಿಟುಕಿಸಬಾರದು(?!) ನೀನು ಅದನ್ನು ಇಟ್ಕೊಬಾರದು, ಇದನ್ನು ಇಟ್ಕೊಬಾರದು… ಏಕೆ? ಎಂದು ಪ್ರಶ್ನಿಸಿದ್ದಾರೆ.
ಪುರುಷರು ಏನು ಮಾಡಿದರೂ ನಡೆಯುತ್ತದೆ. ನಾವು ಮಹಿಳೆಯರು ಹೊಂದಾಣಿಕೆ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಅಡ್ಜೆಸ್ಟ್ ಮಾಡಿಕೊಳ್ಳಬೇಕು, ನಾವು ಸುಮ್ಮನಿರಬೇಕು.. ಇಲ್ಲ, ಇಲ್ಲ!ಈ ನಾನ್ ಸೆನ್ಸ್ ಗೆ ಕೊನೆಹಾಡಿ ಎಂದು ಸಲಹೆ ನೀಡಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇದನ್ನು ಮಾಡಿದ್ದೇನೆ, ನನ್ನ ಸ್ನೇಹಿತರು ಕೂಡ. ನಿಂದನೆ ಅನುಭವಿಸಿದ್ದೇನೆ. ಆದರೆ ನಿಮಗೆ ಗೊತ್ತಾ? ಇನ್ನು ಮುಂದೆ ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ ಎಂದು ರಮ್ಯಾ (ದಿವ್ಯಸ್ಪಂದನ) ಕರೆ ಕೊಟ್ಟಿದ್ದಾರೆ.