ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಉಪಹಾರಕೂಟ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಸಚಿವ ಮಹಾದೇವಪ್ಪ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಸಮಯದವರೆಗೆ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ತಾವು ವರಿಷ್ಠರ ಜೊತೆ ನಡೆಸಿದ ಚರ್ಚೆಯ ವಿಷಯ ಮತ್ತು ಕೇಂದ್ರ ಮಂತ್ರಿಗಳ ಜೊತೆ ನಡೆಸಿರುವ ಮಾತುಕತೆ ವಿವರಗಳನ್ನು ಅವರ ಜೊತೆ ಹಂಚಿಕೊಂಡರು ಎನ್ನಲಾಗಿದೆ.
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಣ್ಣ ದೂರು ನೀಡಿದ್ದಾರೆ. ಅದರ ತನಿಖೆಯಾಗುತ್ತಿದೆ. ಈ ಹಂತದಲ್ಲಿ ಯಾವುದೇ ವಿಚಾರ ಚರ್ಚಿಸುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರು ಬೇಕು ಎಂಬ ವಾದ ಮಂಡಿಸಿದ್ದ ಅವರು ಇದೀಗ ಅಧ್ಯಕ್ಷರಿದ್ದಾರೆ. ಅವರು ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಮಾತನಾಡಿ, ಮುಖ್ಯಮಂತ್ರಿ ಆಪ್ತರಿಗೆ ರಕ್ಷಣೆ ಇಲ್ಲ, ಸಚಿವರ ಪುತ್ರನಿಗೆ ಪ್ರಾಣ ಬೆದರಿಕೆ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಮಹದೇವಪ್ಪ, ಹನಿಟ್ರ್ಯಾಪ್ ಪ್ರಕರಣಕ್ಕೂ ಕಾನೂನು ಸುವ್ಯವಸ್ಥೆಗೂ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಸಚಿವ ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಯಾವುದೇ ವಿಚಾರಗಳಾಗಿದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ನಾವು ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದರು.
ಸತೀಶ್ ಜಾರಕಿಹೊಳಿ ಮತ್ತು ತಾವು 30 ವರ್ಷದ ಸ್ನೇಹಿತರಾಗಿದ್ದು, ಪದೇಪದೇ ಭೇಟಿ ಮಾಡುತ್ತಿರುತ್ತೇವೆ ಎಂದು ಹೇಳಿದ್ದಾರೆ.